ತುಂಡು ಉಡುಗೆ ಧರಿಸಿದ್ದಕ್ಕೆ ಬುದ್ಧಿ ಹೇಳಲು ಮುಂದಾದ ಮಹಿಳಾ ಗೃಹರಕ್ಷಕಿಗೆ ಮನಸೋ ಇಚ್ಛೆ ಥಳಿಸಿದ್ದ ಆರೋಪದ ಮೇಲೆ ಯುವತಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾದೇವಪುರ ಸಮೀಪದ ನಾರಾಯಣಪುರ ನಿವಾಸಿ ಧಾಮಿನಿ ಅಲಿಯಾಸ್ ಮೋಹಿನಿ ಬಂಧಿತ ಯುವತಿ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತುಂಡು ಉಡುಗೆ ಧರಿಸಿದ್ದಕ್ಕೆ ಬುದ್ಧಿ ಹೇಳಲು ಮುಂದಾದ ಮಹಿಳಾ ಗೃಹರಕ್ಷಕಿಗೆ ಮನಸೋ ಇಚ್ಛೆ ಥಳಿಸಿದ್ದ ಆರೋಪದ ಮೇಲೆ ಯುವತಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾದೇವಪುರ ಸಮೀಪದ ನಾರಾಯಣಪುರ ನಿವಾಸಿ ಧಾಮಿನಿ ಅಲಿಯಾಸ್ ಮೋಹಿನಿ ಬಂಧಿತ ಯುವತಿ.ಕೆ.ಆರ್. ಪುರ ರೈಲ್ವೆ ನಿಲ್ದಾಣ ಸರ್ಕಲ್ ಬಳಿ ಶುಕ್ರವಾರ ಮಧ್ಯಾಹ್ನ ಧಾಮಿನಿ ತುಂಡು ಬಟ್ಟೆ ಧರಿಸಿ ಓಡಾಡುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ನೋಡಿದ ಕೆಲ ಯುವಕರು ಚುಡಾಯಿಸಲು ಶುರು ಮಾಡಿದ್ದರು. ಇದನ್ನು ಗಮನಿಸಿದ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಲಕ್ಷ್ಮಿ ನರಸಮ್ಮ ಅವರು, ಯುವತಿಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೆರಳಿದ ಆಕೆ ನನಗೆ ಬುದ್ಧಿ ಹೇಳೋಕೆ ನೀನ್ಯಾರು? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಕ್ಷ್ಮಿ ನರಸಮ್ಮ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜುಟ್ಟು ಹಿಡಿದು, ರಕ್ತ ಬರುವಂತೆ ಥಳಿಸಿದ್ದಾಳೆ. ಈ ವೇಳೆ ಕೆಲವರು ಮಧ್ಯ ಪ್ರವೇಶಿಸಿ ಯುವತಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದರೂ ಯುವತಿ ಅವರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ್ದಾಳೆ.
ಈ ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆ ನಡೆಸಿದ ಮೋಹಿನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿತೆ ಪದವೀಧರೆ
ಬಂಧಿತ ಆರೋಪಿತೆಯು ಮಾಲ್ಡಿವ್ಸ್‌ನಲ್ಲಿ 1 ರಿಂದ 10 ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದುಕೊಂಡಿದ್ದಾಳೆ. ಕರ್ತವ್ಯನಿರತ ಲಕ್ಷ್ಮಿ ನರಸಮ್ಮ ಅವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದು ವೈರಲ್ ಆಗಿದೆ.