ಸಿನಿವಾರ್ತೆ

‘ಕೆಡಿ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ. ಧ್ರುವ ಹೀರೋ. ಅವರು 130 ದಿನ ನಟಿಸಿದ್ದಾರೆ. ನಾನು 3 ದಿನ ಮಾತ್ರ ನಟಿಸಿದ್ದೇನೆ. ಪ್ರೇಮ್ ನನ್ನ ಕುಟುಂಬದ ಭಾಗ, ಧ್ರುವ ನನ್ನ ಸಹೋದರ. ಅವರಿಬ್ಬರಿಗಾಗಿ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದು ‘ಕೆಡಿ’ ಚಿತ್ರದ ಕಾಲಭೈರವ ಪಾತ್ರಧಾರಿ ಸುದೀಪ್‌ ಹೇಳಿದ್ದಾರೆ.

ಏ.30ರಂದು ‘ಕೆಡಿ’ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರೇಮ್‌ ಪ್ಯಾಷನೇಟ್‌ ನಿರ್ದೇಶಕ. ಸದಾಕಾಲ ಒಳ್ಳೆಯ ಸಿನಿಮಾ ಕೊಡೋಕೆ ಪ್ರಯತ್ನ ಮಾಡುತ್ತಾರೆ. ಅವರು ಒಬ್ಬ ವ್ಯಕ್ತಿಯಾಗಿ ನನಗಿಷ್ಟ. ವ್ಯಕ್ತಿ ಇಷ್ಟವಾದಮೇಲೆ ನಾನು ಏನು ಬೇಕಾದರೂ ಮಾಡುತ್ತೇನೆ. ಹಾಗಂತ ನಾನೇನು ಉಪಕಾರ ಮಾಡಿಲ್ಲ. ಈ ಅದ್ದೂರಿ ಸಿನಿಮಾದಲ್ಲಿ ನಾನೂ ಇರೋಣ ಅಂತ ಮಾಡಿದೆ’ ಎಂದರು.


ಪ್ರೇಮ್, ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಹಾಜರಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಆಡಿದ ಮಾತುಗಳು ಇಲ್ಲಿವೆ.

ಸಿನಿಮಾಗಳಲ್ಲಿ ತಪ್ಪು ಹುಡುಕುವುದು ಬಿಡಬೇಕು

ಚಿತ್ರರಂಗದ ಕಷ್ಟದ ಸಂದರ್ಭದಲ್ಲಿದೆ. ನಮ್ಮ ದೇ ತಪ್ಪಿನಿಂದ ಹೀಗಾಗಿದೆ. ಈಗ ದೊಡ್ಡ ಸಿನಿಮಾ, ಸಣ್ಣ ಸಿನಿಮಾ ಎಲ್ಲಾ ಗೆಲ್ಲಬೇಕಿದೆ. ಹಾಗಾಗಿ ಸಣ್ಣ ಪುಟ್ಟ ತಪ್ಪು ಹುಡುಕುವುದು ಬಿಡಬೇಕಿದೆ. ದುರ್ಬೀನು ಹಾಕಿ ನೋಡುವುದು ಬಿಟ್ಟು ಸಿನಿಮಾ ಗೆಲ್ಲಿಸಬೇಕಿದೆ.

ನಾನು ಸಿಸಿಎಲ್‌ ಆಡಿದರೆ ಯಾರಿಗೆ ಕಷ್ಟ

ನಾನು ನಾಲ್ಕು ವೀಕೆಂಡ್‌ ಸಿಸಿಎಲ್‌ನಲ್ಲಿ ಕ್ರಿಕೆಟ್‌ ಆಡಿದೆ. ಉಳಿದ ಅವಧಿಯಲ್ಲಿ ನನ್ನ ಎಲ್ಲಾ ಭಾಗಗಳನ್ನೂ ಚಿತ್ರರಂಗಕ್ಕೆ ಕೊಟ್ಟಿದ್ದೇನೆ. ಹೀಗಾಗಿ ನಾನು ಸಿಸಿಎಲ್‌ ಆಡಿದರೆ ಯಾರಿಗೆ ಕಷ್ಟವಿದೆ. ಕ್ರಿಕೆಟ್‌ನಿಂದ, ಐಪಿಎಲ್‌ನಿಂದ ಚಿತ್ರರಂಗಕ್ಕೆ ಏನೂ ತೊಂದರೆ ಇಲ್ಲ.

ಒಂದು ಕಾರಣಕ್ಕೆ ಪ್ರೇಮ್‌ರನ್ನು ಸಣ್ಣವರನ್ನಾಗಿಸಬೇಡಿ

ಪ್ರೇಮ್‌ ಚಿತ್ರರಂಗಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ಅವರ ಎಷ್ಟೋ ಹಾಡುಗಳು ಸೂಪರ್‌ಹಿಟ್‌ ಆಗಿವೆ. ಅವರ ಹಾಡು ಕೇಳಿ ನಮ್ಮ ಸಂಬಂಧಗಳನ್ನು ಸರಿ ಮಾಡಿಕೊಂಡಿದ್ದಿದೆ. ಅಂಥದ್ದರಲ್ಲಿ ಯಾವುದೋ ಒಂದು ಹಾಡಿನ ಕಾರಣಕ್ಕೆ ಅವರನ್ನು ಸಣ್ಣವರನ್ನಾಗಿ ಮಾಡುವುದು ಸರಿಯಲ್ಲ. ಎಲ್ಲವನ್ನೂ ಕರುಣೆಯ, ಪ್ರೀತಿಯ ಕಣ್ಣುಗಳಿಂದ ನೋಡಬೇಕು.

ಸೀಕ್ವೆಲ್‌ನಲ್ಲಿ ನಾನಿದ್ದೇನೋ ಗೊತ್ತಿಲ್ಲ

ಒಂದು ಚಿತ್ರ ದೊಡ್ಡದಾಗಿ ಗೆದ್ದ ಮೇಲೆ ಸೀಕ್ವೆಲ್‌ ಮಾಡುತ್ತಾರೆ. ಅದೆಲ್ಲಾ ಸಾಧ್ಯವಾಗಿ ಸೀಕ್ವೆಲ್‌ ಮಾಡಲು ನನ್ನ ಕೇಳಿಕೊಂಡರೆ, ನಾನು ಮೊದಲು ಧ್ರುವ ಬಳಿ ಮಾತನಾಡುತ್ತೇನೆ. ಫ್ರಾಂಚೈಸಿಗೆ ಗೆಲುವು ಸಿಗುವುದು ಮೊದಲ ಸಿನಿಮಾದಿಂದ. ಆ ಗೆಲುವಿನ ಲಾಭ ಪಡೆಯಲು ನಾನು ಸಿದ್ಧನಿಲ್ಲ.