ದೇಶದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಕರೆಸಿಕೊಳ್ಳುವ ರವಿಚಂದ್ರನ್‌ ನಟನೆಯ ‘ಶಾಂತಿ ಕ್ರಾಂತಿ’ ಮರು ಬಿಡುಗಡೆಗೆ ಅಭಿಮಾನಿಗಳ ಒತ್ತಾಯ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಕ್ರಂ ರವಿಚಂದ್ರನ್‌ ಅಪ್‌ಡೇಟ್‌ ನೀಡಿದ್ದಾರೆ. ಜೊತೆಗೆ ತನ್ನ ‘ಮುಧೋಳ್’ ಸಿನಿಮಾ ಸಮಸ್ಯೆ ಬಗೆಗೂ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

1. ರವಿಚಂದ್ರನ್‌ ಅವರ ಶಾಂತಿಕ್ರಾಂತಿ ರೀ ರಿಲೀಸ್ ಪ್ಲಾನ್‌ ಏನು?

ಚಿತ್ರ ಮರುಬಿಡುಗಡೆ ಮಾತುಕತೆ ನಡೆಯುತ್ತಿದೆ. ಆ ಪ್ರಕ್ರಿಯೆ, ಸಾಧ್ಯತೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜೊತೆಗೆ ಸಿನಿಮಾದ ನೆಗೆಟಿವ್‌ ರೀಲ್‌ ಚೆಕ್‌ ಮಾಡಬೇಕು, ಸಿನಿಮಾಕ್ಕೆ ಸಂಬಂಧಿಸಿದವರ ಜೊತೆಗೆ ಮಾತುಕತೆ ಆಗಬೇಕು. ಇನ್ನೊಂದು ಹತ್ತು ದಿನದಲ್ಲಿ ಮರು ಬಿಡುಗಡೆ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಸಾಧ್ಯತೆ ಇಲ್ಲ ಅಂದರೆ ಆಗಲ್ಲ ಅಂತ ನೇರವಾಗಿ ಜನರಿಗೆ ಹೇಳ್ತೀವಿ.

2. ಇದ್ದಕ್ಕಿದ್ದ ಹಾಗೆ ಶಾಂತಿಕ್ರಾಂತಿ ಬಗ್ಗೆ ಅಲೆ ಎದ್ದಿದ್ದು ಯಾಕೆ?

ಈ ವರ್ಷ ಸೆಪ್ಟೆಂಬರ್‌ 19 ಬಂದರೆ ‘ಶಾಂತಿ ಕ್ರಾಂತಿ’ ಬಿಡುಗಡೆಯಾಗಿ 35 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ. ಆದರೆ ಅದಕ್ಕೂ ಹೆಚ್ಚೇ ಬಜೆಟ್‌ ಇತ್ತು ಅಂತ ತಂದೆಯವರು ಹೇಳುತ್ತಿದ್ದರು. ಕಳೆದ ಒಂದು ವಾರದಿಂದ ಸೋಷಿಯಲ್‌ ಮೀಡಿಯಾ ತೆಗೆದರೆ ಬರೀ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಮಾಡಿ ಅನ್ನುವ ಪೋಸ್ಟ್‌ಗಳೇ ಕಣ್ಣಿಗೆ ಬೀಳುತ್ತಿವೆ. ಅಭಿಮಾನಿಗಳ ಒತ್ತಾಯ ನೋಡಿ, ಅಪ್ಪನೂ ರೀರಿಲೀಸ್‌ ಚಾನ್ಸ್‌ ಇದೆಯಾ ನೋಡು ಅಂದಿದ್ದಾರೆ. ಅದು ಜನರ ಪ್ರೀತಿ. ಆ ಪ್ರೀತಿಗೆ ಸ್ಪಂದಿಸಬೇಕು ಅಂತ ನನ್ನ ಯೋಚನೆ. ಅದರ ಹೊರತು ಹಿಟ್‌ ಫ್ಲಾಪ್‌ ಬಗ್ಗೆ ತಲೆ ಕೆಡಿಸಿಕೊಳಲ್ಲ.

3. ಆರು ತಿಂಗಳ ಹಿಂದೆ ಸೋಷಲ್‌ ಮೀಡಿಯಾದಿಂದ ಔಟ್ ಆದ್ರಿ. ಸಡನ್ನಾಗಿ ಮತ್ತೆ ಕಾಣಿಸಿಕೊಂಡು ಮುಧೋಳ್‌ ಸಿನಿಮಾ ಬಗ್ಗೆ ಮಾತಾಡಿದ್ರಿ. ಈ ಆರು ತಿಂಗಳಲ್ಲಿ ಏನಾಗಿತ್ತು?

ಮುಧೋಳ್ ಸಿನಿಮಾವನ್ನು ಈ ವರ್ಷ ಜನವರಿಗೆ ಬಿಡುಗಡೆ ಮಾಡುವ ಪ್ಲಾನ್‌ ಇತ್ತು. ಆದರೆ ಸಿನಿಮಾದ ಔಟ್‌ಪುಟ್‌ ನಾವಂದುಕೊಂಡ ಹಾಗೆ ಬರಲಿಲ್ಲ. ರೀ ವರ್ಕ್‌ ಮಾಡಬೇಕಿತ್ತು. ಹಾಗೆಂದು ನಾವೇನು ದೊಡ್ಡ ಬಜೆಟ್‌ ಸಿನಿಮಾ ಮಾಡ್ತಿಲ್ಲ. ಆದರೆ ಮಾಡುವ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮುಂದಿಡಬೇಕು, ನಾವು ಅಂದುಕೊಂಡಿರುವ ಹಾಗೆಯೇ ಮಾಡಬೇಕು ಅನ್ನುವುದಿತ್ತು. ಸೋಷಿಯಲ್‌ ಮೀಡಿಯಾದಲ್ಲಿದ್ದರೆ ಜನ ಮತ್ತೆ ಆ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಅವರಿಗೆ ಉತ್ತರ ರೂಪದಲ್ಲಿ ಸಿನಿಮಾ ಅಪ್‌ಡೇಟ್‌ ಅನ್ನೇ ಕೊಡೋಣ ಅಂದುಕೊಂಡು ಹೊರಬಂದೆ.

- ವಿಜಯ್‌ ಟಾಟಾ ನಿಮಗೀಗ ಸಾಥ್‌ ನೀಡುತ್ತಿದ್ದಾರಲ್ವಾ?

ಅವರು ಕಳೆದ ವರ್ಷವೇ ನಮ್ಮ ಟೀಂಗೆ ಬಂದರು. ಅವರು ನಿರ್ಮಾಪಕರು ಅನ್ನುವುದಕ್ಕಿಂತಲೂ ನಮ್ಮ ಕುಟುಂಬದ ಸದಸ್ಯರ ಹಾಗಿದ್ದಾರೆ. ಮುಧೋಳ್‌ ಕಂಟೆಂಟ್‌ ನೋಡಿ ಇಷ್ಟಪಟ್ಟರು. ದುಡ್ಡು ಮಾಡಬೇಕು ಅನ್ನೋದಕ್ಕಿಂತಲೂ ಒಂದೊಳ್ಳೆ ಸಿನಿಮಾ ಮಾಡುವ ಹಂಬಲ ಇತ್ತು. ಅವರ ಸಹಕಾರದಿಂದ ಮುಧೋಳ್‌ ರಿಲೀಸ್‌ ಪ್ರಕ್ರಿಯೆ ಸರಾಗವಾಗಿದೆ.

- ರವಿಚಂದ್ರನ್‌ ಅವರಂಥಾ ನಟನ ಮಗನ ಸಿನಿಮಾಕ್ಕೇ ಪ್ರೊಡ್ಯೂಸರ್ಸ್‌ ಸಿಗುತ್ತಿಲ್ಲವಾ?

ಅದು ನಿರ್ಮಾಪಕರ ತಪ್ಪಲ್ಲ. ನನ್ನ ಪ್ರತಿಭೆ ಏನು ಅಂತ ಜಗತ್ತಿಗೆ ಪರಿಚಯವಾಗುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಗ ನಿರ್ಮಾಪಕರು ತಾನೇ ತಾನಾಗಿ ಬಂದು ಸಿನಿಮಾ ಮಾಡುತ್ತಾರೆ. ಅವರಿಗೂ ತಮ್ಮ ಬಂಡವಾಳ ವಾಪಸ್‌ ಬರುವ ವಿಶ್ವಾಸ ಬರಬೇಕಲ್ವ, ನಾವೂ ಸ್ಪಂದಿಸಬೇಕು. ಒಳ್ಳೆ ಕತೆ ಸಿಗಬೇಕು. ಇವತ್ತು ಇರುವ ಟ್ರೆಂಡ್‌ಗೆ ರೆವೆನ್ಯೂ ತಂದುಕೊಡುವಷ್ಟು ನಾವೂ ಬೆಳೆದಿರಬೇಕು. ಮುಧೋಳ್‌ ನನ್ನ ನಟನೆಯ ಮತ್ತೊಂದು ಸಿನಿಮಾ. ಇದನ್ನು ನೋಡಿ ಚೆನ್ನಾಗಿ ಆ್ಯಕ್ಟ್‌ ಮಾಡಿದ ಹುಡುಗ ಅಂತ ಪ್ರೇಕ್ಷಕ ಹೇಳಿದರೂ ನನಗೆ ತೃಪ್ತಿ.

- ಯಾವಾಗ ಮುಧೋಳ್‌ ರಿಲೀಸ್‌?

ಶೂಟಿಂಗ್‌ ಮುಗಿದಿದೆ. ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದೆ. ಈ ವರ್ಷ ಅಕ್ಟೋಬರ್‌ 15 ನಂತರ ಡಿಸೆಂಬರ್‌ಗೂ ಮೊದಲು ಬರ್ತೀವಿ.