ಪ್ರಬುದ್ಧ ಪ್ರಜಾ ವೇದಿಕೆ ಅಧ್ಯಕ್ಷರಾದ ಶ್ರೀನಾಥ್ ನಾಸ್ತಿಕ್, ಗ್ರಾಮೀಣ ಭಾಗದ ಪ್ರತಿಭೆ ಇಂದು ವಿದೇಶದ ಮಣ್ಣಿನಲ್ಲಿ ಕನ್ನಡದ ಜಾನಪದ ಕಲೆಯ ಘಮಲನ್ನು ಪಸರಿಸಲು ಹೊರಟಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ರವಿಚಂದ್ರನ್ ಅವರ ಈ ಸಾಧನೆ ಮುಂಬರುವ ಯುವ ಕಲಾವಿದರಿಗೆ ಸ್ಫೂರ್ತಿಯಾಗಲಿ.

ಕನ್ನಡಪ್ರಭ ವಾರ್ತೆ ಬೇತಮಂಗಲ

ಹೋಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರನಗಾಹಳ್ಳಿ ಗ್ರಾಮದ ಹೆಮ್ಮೆಯ ಜಾನಪದ ಕಲಾವಿದ ರವಿಚಂದ್ರನ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಜಾನಪದ ಉತ್ಸವಕ್ಕೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಜಾನಪದ ಕಲೆಯನ್ನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್ ಅವರು ತಮ್ಮ ವಿಶಿಷ್ಟ ಕಲಾ ಪ್ರದರ್ಶನದ ಮೂಲಕ ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಥೈಲ್ಯಾಂಡ್‌ನಲ್ಲಿ ನೆಲೆಸಿರುವ ಕನ್ನಡಿಗರು ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಜಾನಪದ ಉತ್ಸವದಲ್ಲಿ ಪಾಲ್ಗೊಳ್ಳಲು ಇವರಿಗೆ ಆಹ್ವಾನ ಬಂದಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ರವಿಚಂದ್ರನ್ ಅವರ ಈ ಸಾಧನೆಯನ್ನು ಮೆಚ್ಚಿ ಗ್ರಾಮದ ದಲಿತ ಪರ ಸಂಘಟನೆಗಳ ಮುಖಂಡರು ಬೇತಮಂಗಲ ಗ್ರಾಮದ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ರವಿಚಂದ್ರನ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪ್ರಬುದ್ಧ ಪ್ರಜಾ ವೇದಿಕೆ ಅಧ್ಯಕ್ಷರಾದ ಶ್ರೀನಾಥ್ ನಾಸ್ತಿಕ್, ಗ್ರಾಮೀಣ ಭಾಗದ ಪ್ರತಿಭೆ ಇಂದು ವಿದೇಶದ ಮಣ್ಣಿನಲ್ಲಿ ಕನ್ನಡದ ಜಾನಪದ ಕಲೆಯ ಘಮಲನ್ನು ಪಸರಿಸಲು ಹೊರಟಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ರವಿಚಂದ್ರನ್ ಅವರ ಈ ಸಾಧನೆ ಮುಂಬರುವ ಯುವ ಕಲಾವಿದರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿಚಂದ್ರನ್ ಅವರು, ತಮ್ಮ ಕಲೆಗೆ ಬೆನ್ನೆಲುಬಾಗಿ ನಿಂತ ಸಂಘಟನೆಗಳಿಗೆ ಮತ್ತು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಅನೇಕ ಹೋರಾಟಗಳಲ್ಲಿ ಅಂಬೇಡ್ಕರ್ ಹಾಗೂ ಇತರೆ ಕ್ರಾಂತಿ ಗೀತೆಗಳು ಮತ್ತು ಜಾನಪದ ಗೀತೆಗಳ ಹಾಡುತ್ತಿದ್ದೆ, ನನ್ನ ಪ್ರತಿಭೆ ಗುರುತಿಸಿ ಸಣ್ಣ ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ಸಂಘಟನೆಗಳ ಮಹಿಳಾ ಪದಾಧಿಕಾರಿಗಳನ್ನು ಸನ್ಮಾನಿಸಿ ಶುಭಾಶಯ ತಿಳಿಸಲಾಯಿತು.

ದಲಿತಪರ ಸಂಘಟನೆಗಳ ಮುಖಂಡರಾದ ಕೆ.ಬಿ ದೇವರಾಜ್, ಶ್ರೀನಾಥ್ ನಾಸ್ತಿಕ್, ತಂಬಾರ್ಲಹಳ್ಳಿ ರಾಮಪ್ಪ, ರಾಮಚಂದ್ರ, ಸುಬ್ಬರಾಯಪ್ಪ, ಮುನಿವೆಂಕಟ, ಕೃಷ್ಣಮೂರ್ತಿ ಸೇರಿ ಮಹಿಳಾ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.