ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕನ್ನಡ ಚಿತ್ರರಂಗದ ಮೇರುನಟ, ವರನಟ ಡಾ.ರಾಜಕುಮಾರ್ ಅವರು ಶಿಸ್ತು, ಶ್ರದ್ಧೆಯುಳ್ಳವರಾಗಿ, ವಿನಯವಂತರಾಗಿದ್ದರು. ಚಲನಚಿತ್ರಗಳಲ್ಲಿ ಅದ್ಭುತ ಅಭಿನಯ, ಹಾಡುಗಾರಿಕೆಯಿಂದ ಅಸಾಮಾನ್ಯ ಎತ್ತರಕ್ಕೇರಿದವರು. ಅಭಿಮಾನಿಗಳನ್ನು ದೇವರುಗಳೆಂದೇ ಕರೆದ ಅವರ ಹಾಡುಗಳು, ಸಿನಿಮಾಗಳು ಸ್ಫೂರ್ತಿದಾಯಕವಾಗಿವೆ ಎಂದು ಉದ್ಯಮಿ ಬಸವರಾಜ ದಲಾಲ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯ ಮಹಾಲಿಂಗಪುರ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಘಟಕ ರಬಕವಿ-ಬನಹಟ್ಟಿ, ದಲಾಲ ಸ್ಪೋರ್ಟ್ಸ್ ಕ್ಲಬ್ ರಬಕವಿ ಇವರ ಸಂಯುಕ್ತಾಶ್ರಯದಲ್ಲಿ ರಬಕವಿಯ ದಲಾಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಟಸಾರ್ವಭೌಮ, ವರನಟ ಡಾ. ರಾಜಕುಮಾರ್ ಅವರ ೯೭ನೇ ಹುಟ್ಟುಹಬ್ಬ ನಿಮಿತ್ತ ಡಾ.ರಾಜ್ ಗೀತ ಮಾಧುರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ದಲಾಲ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಡಾ.ರಾಜಕುಮಾರ್ ಜನ್ಮದಿನದಂದು ಗೀತ ಮಾಧುರ್ಯ ಹಮ್ಮಿಕೊಳ್ಳಲು ಸಹಕಾರ ನೀಡುವುದಾಗಿ ತಿಳಿಸಿದರು.
ಹಿರಿಯ ವೈದ್ಯ ಡಾ.ಬಿ.ಎನ್. ಬಾಗಲಕೋಟ ಕಾರ್ಯಕ್ರಮದಲ್ಲಿ ಡಾ.ರಾಜ್ ಹಾಡಿರುವ ಭಕ್ತಿಗೀತೆ ಹಾಡಿದರು. ನಾವಲಗಿ ಜೈ ಹನುಮಾನ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ದಾನಪ್ಪ ಆಸಂಗಿ ಮಾತನಾಡಿ, ನಟಸಾರ್ವಭೌಮ ಡಾ.ರಾಜಕುಮಾರ್ ಅವರು ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಚಲನಚಿತ್ರಗಳು ಸಂದೇಶ, ಮಾರ್ಗದರ್ಶನ ನೀಡುವಂತಹುಗಳಾಗಿವೆ. ಅವರ ಪಾತ್ರಾಭಿನಯ, ಗೀತೆಗಳು ಅದ್ಭುತ ಎಂದು ಹೇಳಿದರು.ರಬಕವಿ-ಬನಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ, ಶಿಕ್ಷಕ-ಗಾಯಕ ಮಹಾಲಿಂಗ ಚಿಮ್ಮಡ, ತೇರದಾಳ ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ರಾಜೇಶ್ವರಿ ಉಮದಿ, ಈರಯ್ಯ ಹಿರೇಮಠ, ಕೆ.ಎಸ್. ರಂಗಸ್ವಾಮಿ ಅವರು ಡಾ. ರಾಜಕುಮಾರ್ ಹಾಡಿರುವ ನಾಡ-ನುಡಿ ಗೀತೆಗಳು, ಅವರು ಅಭಿನಯದ ಚಿತ್ರಗೀತೆ ಪ್ರಸ್ತುತಪಡಿಸಿದರು. ಬಂದೆಯಾ ಗುರುರಾಯ, ಏನು ದಾಹ ಯಾವ ಮೋಹ, ಹಾಲಲ್ಲಾದರೂ ಹಾಕು, ಎಲ್ಲಾದರೂ ಇರು, ತೆರೆದಿದೆ ಮನೆ ಓ ಬಾ ಅತಿಥಿ, ಓ ಪ್ರಿಯತಮಾ, ಎಲ್ಲೆಲ್ಲಿ ನೋಡಲಿ, ನೀ ಬಂದು ನಿಂತಾಗ, ಏನೆಂದು ನಾ ಹೇಳಲಿ, ಚಂದಿರ ತಂದಾ, ಆಕಾಶವೇ ಬೀಳಲಿ ಮೇಲೆ, ಜೇನಿನ ಹೊಳೆಯೋ ಹಾಡು ಹಾಡಿದರು. ಹನಗಂಡಿ ತೋಟದ ಶಾಲೆ ಶಿಕ್ಷಕ ಸಿದ್ಧಲಿಂಗ ಕಡಕೋಳ ಮಿಮಿಕ್ರಿ ನಡೆಸಿಕೊಟ್ಟರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ ಸ್ವಾಗತಿಸಿದರು. ಮಹಾಲಿಂಗಪುರ ವಲಯ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ಕಾರ್ಯಕ್ರಮ ನಿರೂಪಿಸಿದರು.
ಎಂ.ಎಸ್. ಬದಾಮಿ, ಶಿವಾನಂದ ದಾಶಾಳ, ಬ್ರಿಜ್ ಮೋಹನ್ ಡಾಗಾ, ಅಶೋಕ ಪತ್ತಾರ, ರವೀಂದ್ರ ಪತ್ತಾರ, ಡಾ.ಜಿ.ಎಚ್. ಚಿತ್ತರಗಿ, ಡಿ.ಬಿ. ಜಾಯಗೊಂಡ, ಪ್ರಭು ಉಮದಿ, ರವೀಂದ್ರ ಅಷ್ಟಗಿ, ಗೌರಿ ಮಿಳ್ಳಿ, ಸರ್ವಮಂಗಳಾ ಹಿರೇಮಠ, ಪಾರ್ವತಿ ಸಾಬೋಜಿ, ರಾಜು ಸಾಬೋಜಿ, ಸಾಗರ ಬಾಪುರೆ, ವಿರುಪಾಕ್ಷ ಫಕೀರಪುರ, ಸೇರಿದಂತೆ ಸಾಹಿತಿಗಳು, ಕಸಾಪ ಪದಾಧಿಕಾರಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.