ಮಾನ್ವಿತಾ ಕಾಮತ್ ಮೇ1ಕ್ಕೆ ಟೆಕಿ, ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕೈ ಹಿಡಿಯಲಿದ್ದಾರೆ.

 ಸಿನಿವಾರ್ತೆ : ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿ ಎಂದೇ ಜನಪ್ರಿಯರಾಗಿರುವ ನಟಿ ಮಾನ್ವಿತಾ ಕಾಮತ್‌ ಮೇ 1ಕ್ಕೆ ಮೈಸೂರು ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌, ಮ್ಯೂಸಿಕ್‌ ಪ್ರೊಡ್ಯೂಸರ್‌ ಅರುಣ್‌ ಅವರ ಜೊತೆ ಮದುವೆಯಾಗಲಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ವಿವಾಹದ ವಿವರ ನೀಡಿದ ಮಾನ್ಯತಾ, ‘ನನ್ನ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಸುಮಾರು 500 ವರ್ಷ ಹಳೆಯ ವೆಂಕಟರಮಣ ದೇವಾಲಯವಿದೆ. ಅಲ್ಲಿ ನಮ್ಮ ಮದುವೆ ನಡೆಯಲಿದೆ. ಮೇ 1ಕ್ಕೆ ಈ ದೇವಾಲಯದ ಪುನರ್‌ಪ್ರತಿಷ್ಠೆ ಮುಹೂರ್ತದಲ್ಲೇ ಕೊಂಕಣಿ ಸಂಪ್ರದಾಯದಂತೆ ನಮ್ಮ ವಿವಾಹ ವಿಧಿಗಳು ನೆರವೇರುತ್ತವೆ. ಏಪ್ರಿಲ್‌ 29ಕ್ಕೆ ಖಾಸಗಿ ರೆಸಾರ್ಟ್‌ನಲ್ಲಿ ನದೀತೀರದಲ್ಲಿ ಹಳದಿ, ಮೆಹಂದಿ ಶಾಸ್ತ್ರಗಳಿರುತ್ತವೆ. ಏ.30ಕ್ಕೆ ಫೂಲ್‌ಮುದ್ದಿ ಎಂಬ ಆಚರಣೆ ಇರುತ್ತದೆ’ ಎಂದಿದ್ದಾರೆ.

‘ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾಗ ಆಕಸ್ಮಿಕವಾಗಿ ಅರುಣ್‌ ಅವರ ಪ್ರೊಫೈಲ್‌ ನೋಡಿದೆ. ಅವರ ಜನ್ಮದಿನ, ನನ್ನ ತಾಯಿಯ ಜನ್ಮದಿನ ಒಂದೇ ಆಗಿತ್ತು. ಇಬ್ಬರ ಬರ್ತ್‌ಡೇ ಅಕ್ಟೋಬರ್‌ 14ಕ್ಕೆ ಇತ್ತು. ಇದು ಇಂಟರೆಸ್ಟಿಂಗ್‌ ಅನಿಸಿತು. ಅರುಣ್‌ ಪ್ರೊಫೈಲ್‌ ಸಹ ಇಷ್ಟವಾಯಿತು. ಆ ಬಳಿಕ ಅವರ ತಾಯಿಯನ್ನು ಭೇಟಿ ಮಾಡಿದೆ. ಮುಂದೆ ನಾನು ಮತ್ತು ಅರುಣ್‌, ಸಿನಿಮಾ ಪ್ರೀಮಿಯರ್‌ ಒಂದರಲ್ಲಿ ಭೇಟಿಯಾದೆವು. ಆ ಪರಿಚಯ ಮದುವೆಯವರೆಗೂ ಬಂದು ನಿಂತಿದೆ’ ಎಂದರು.

ಅರುಣ್‌ ಮಾತನಾಡಿ, ‘ನಮ್ಮದು ಅರೇಂಜ್ಡ್‌ ಮ್ಯಾರೇಜ್‌. ಕೆಲವು ಸಮಯದಿಂದ ಮದುವೆಗೆ ಮನೆಯವರು ಒತ್ತಾಯಿಸುತ್ತಿದ್ದರು. ನಾನು ಮನಸ್ಸು ಮಾಡಿರಲಿಲ್ಲ. ಪ್ರೊಫೈಲ್‌ ನೋಡಿದಾಗ ಇಂಟರೆಸ್ಟಿಂಗ್‌ ಅನಿಸಿತು’ ಎಂದರು.