ಕನ್ನಡದ ಸ್ಟಾರ್‌ ನಿರ್ಮಾಪಕರ ಲೇಖನವಿದು. ಇದು ಸತ್ಯ, ಆದರೆ ನನ್ನ ಹೆಸರು ಹೇಳಿದರೆ ಎಲ್ಲರೂ ಮುಗಿಬೀಳುತ್ತಾರೆ, ಹಾಗಾಗಕೂಡದು. ಸತ್ಯ ಮಾತ್ರ ಚರ್ಚೆಯಾಗಲಿ, ನನ್ನ ಹೆಸರು ಹಾಕಬೇಡಿ ಎಂದು ಅವರು ಹೇಳಿದ್ದಾರೆ.

- ಸೂರಪ್ಪ ಬಾಬು

1. ಕಲಾವಿದರು ಪ್ರಸ್ತುತ ಪಡೆದುಕೊಳ್ಳುತ್ತಿರುವ ಸಂಭಾವನೆಯಲ್ಲಿ 50% ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು

2. ನಿರ್ಮಾಪಕರು ಯಾವುದೇ ಕಾರಣಕ್ಕೂ ಓಟಿಟಿಗಳಿಗೆ ಸಿನಿಮಾ ಕೊಡಬಾರದು


3. ನಿರ್ದೇಶಕರು ನಿರ್ಮಾಪಕರಿಗೆ ಹೊರೆಯಾಗುವಂತಹ ನೂರು ದಿನಗಳ ಚಿತ್ರೀಕರಣ ನಿಲ್ಲಿಸಬೇಕು.

4. ನಾಯಕ ನಟರ ಜೊತೆಗಿರುವ ಸಿಬ್ಬಂದಿಗಳ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಕ್ಯಾರವ್ಯಾನ್‌ಗಳನ್ನು ಬಳಸಬೇಕು. ಮನೆ ಅಥವಾ ಸ್ಟುಡಿಯೋಗಳಲ್ಲಿ ಚಿತ್ರೀಕರಿಸುವಾಗ ಕ್ಯಾರವ್ಯಾನ್‌ಗಳನ್ನು ನಿಷೇಧಿಸಬೇಕು.

5. ಚಿತ್ರೀಕರಣದ ಸಮಯದಲ್ಲಿ ಯಾವುದೇ ಕಲಾವಿದರಿರಲಿ, ಯಾವುದೇ ತಂತ್ರಜ್ಞರಿರಲಿ ಮೊಬೈಲ್ ಫೋನ್ ಬಳಸಬಾರದು.

6. ನಿರ್ದೇಶಕರು ಚಿತ್ರೀಕರಣಕ್ಕೆ ಬಳಸುವ ಸಾಧನಗಳಾದ ಗಿಂಬಲ್, ಜಿಮ್ಮಿ ಜಿಪ್ ಇನ್ನೂ ಇತರೆ ಸಾಧನಗಳನ್ನು ಅವಶ್ಯಕತೆ ಇದ್ದ ದಿನ ಮಾತ್ರ ತರಿಸಿಕೊಳ್ಳಬೇಕು.

7. ಪ್ಯಾನ್ ಇಂಡಿಯಾ ಚಿತ್ರಗಳ ಭ್ರಮೆಯಿಂದ ಮೊದಲು ಹೊರಬರಬೇಕು. ಪ್ಯಾನ್ ಇಂಡಿಯಾ ಸಿನಿಮಾ ವಿಭಾಗದಲ್ಲಿ ಕಾಂತಾರ ಬಿಟ್ಟರೆ ಯಾವ ಚಿತ್ರಗಳು ಯಶಸ್ಸು ಕಂಡಿಲ್ಲ.

8. ಸ್ಥಳೀಯ ಕಲಾವಿದರಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸಿಕೊಡಬೇಕು. ಬೇರೆ ಭಾಷೆ ಕಲಾವಿದರಿಗೆ ದುಬಾರಿ ಸಂಭಾವನೆ ನೀಡಿ ನಮ್ಮ ಚಿತ್ರಗಳಲ್ಲಿ ಅವಕಾಶ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ.

9. ಕಾಂತಾರ ಚಿತ್ರದ ಕಥೆಯ ಹಾಗೆ ನಮ್ಮ ಮಣ್ಣಿನ ಸೊಗಡು, ನಮ್ಮ ಸಂಸ್ಕೃತಿ ಬಿಂಬಿಸುವ ಚಿತ್ರಗಳ ಮೇಲೆ ಒತ್ತು ಕೊಡಬೇಕು.

10. ನಾವು ಮಾಡುವ ಚಿತ್ರಗಳು, ಚಿತ್ರಕಥೆಗಳು ಉತ್ತಮವಾಗಿದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಮಲಯಾಳಂನ ಎಷ್ಟೋ ಚಿತ್ರಗಳೇ ಸಾಕ್ಷಿ.

ಕೆಲವರಷ್ಟೇ ಯಶಸ್ವಿ

ಯಶಸ್ಸಿನ ಉತ್ತುಂಗದಲ್ಲಿದ್ದ ಪುನೀತ್ ರಾಜಕುಮಾರ್‌ ಅವರು ನಮ್ಮನ್ನು ಅಗಲಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ. ಅದೇ ರೀತಿ ಹಲವಾರು ಹಿಟ್ ಚಿತ್ರಗಳು ಕೊಟ್ಟು ಸಕ್ಸಸ್ ಆಗಿದ್ದ ಮತ್ತೊಬ್ಬ ನಟ ಜೈಲು ಸೇರಿದ್ದು ಚಿತ್ರರಂಗದ ಮಟ್ಟಿಗೆ ದೊಡ್ಡ ಹೊಡೆತ.

2000 ಇಸವಿ ನಂತರ ಚಿತ್ರರಂಗಕ್ಕೆ ಬಂದಂತಹ ಎಷ್ಟೋ ಕಲಾವಿದರು ಬೆರಳೆಣಿಕೆಯಷ್ಟು ಯಶಸ್ಸು ಕಂಡಿದ್ದು ಸತ್ಯ. ಅದರಲ್ಲೂ ವಿಶೇಷವಾಗಿ ಪುನೀತ್, ದರ್ಶನ್, ಸುದೀಪ್, ಯಶ್, ಗಣೇಶ್, ದುನಿಯಾ ವಿಜಯ್ ಹೊರತು ಪಡಿಸಿ ಬೇರೆ ಯಾವ ನಟರು ಪ್ರೇಕ್ಷಕರ ಹೃದಯ ಗೆಲ್ಲಲು ಅಷ್ಟಾಗಿ ಸಾಧ್ಯವಾಗಲಿಲ್ಲ. ವ್ಯಾಪಾರದ ವಿಷಯದಲ್ಲೂ ನಿರ್ಮಾಪಕರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ಕಟು ಸತ್ಯ ನಾವೆಲ್ಲರೂ ಒಪ್ಪಿಕೊಳ್ಳಲೆಬೇಕು. ಇಂದು ಚಿತ್ರರಂಗ ಉಳಿಯಬೇಕಾದರೆ ಈ ಮೇಲೆ ಹೇಳಿರುವ ಎಲ್ಲಾ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು.

ರಿಷಬ್ ಶೆಟ್ಟಿ ಕನ್ನಡ ನಿರ್ಮಾಪಕರಿಗೆ ಕಾಲ್‌ಶೀಟ್‌ ಕೊಡಲ್ಲ

ರಿಷಬ್ ಶೆಟ್ಟಿಯವರು ಚಿತ್ರರಂಗಕ್ಕೆ ಬಂದಾಗ ಅವರ ಚಿತ್ರಗಳು ಯಶಸ್ವಿಯಾಗಲಿಲ್ಲ. ಆದರೆ ಕಾಂತಾರಕ್ಕೆ ಸಿಕ್ಕ ಭರ್ಜರಿ ಯಶಸ್ಸು ಅವರ ಎಲ್ಲಾ ಹಳೆಯ ಸೋಲುಗಳು ಮರೆಯುವಂತೆ ಮಾಡಿತು. ಆದರೆ ಇತ್ತೀಚಿನ ದಿನಗಳಲ್ಲಿ ರಿಷಬ್ ಶೆಟ್ಟಿ ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಗಮನದಲ್ಲಿ ಇಟ್ಟುಕೊಂಡು ಕನ್ನಡದ ನಿರ್ಮಾಪಕರಿಗೆ ಡೇಟ್ಸ್ ಕೊಡದೆ ಬೇರೆ ಭಾಷೆಯ ನಿರ್ಮಾಪಕರಿಗೆ ತಮ್ಮ ಕಾಲ್ ಶೀಟ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರು ಹನುಮಾನ್ ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದನ್ನ ಪ್ರಶ್ನಿಸಿದರೆ ನಾನು ಕನ್ನಡಿಗ, ಹನುಮಂತ ಕನ್ನಡಿಗ ಎಂದು ಹೇಳುತ್ತಾರೆ. ಆ ಚಿತ್ರದ ನಿರ್ಮಾಪಕರಾಗಲಿ ತಂತ್ರಜ್ಞರಾಗಲಿ ಕನ್ನಡಿಗರಲ್ಲ. ಆ ಚಿತ್ರದಿಂದ ಕನ್ನಡಿಗರಿಗಾಗಲಿ, ಕನ್ನಡ ಚಿತ್ರರಂಗಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ.

ಸ್ಟಾರ್‌ಗಳು ಕಿರುತೆರೆ ಬಿಡಬೇಕು

ಕನ್ನಡದ ಕೆಲವು ನಾಯಕ ನಟರು ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ, ತೀರ್ಪುಗಾರರಾಗಿ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಬಹುತೇಕ ವಾಹಿನಿಗಳು ಪದೇ ಪದೇ ಆ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತಲೇ ಇರುತ್ತಾರೆ. ಅದರಿಂದ ಕಿರುತೆರೆಯಲ್ಲಿ ಸದಾ ಕಾಣಿಸಿಕೊಳ್ಳುವ ನಟರು ಜನಸಾಮಾನ್ಯರಿಗೆ ಸಾಮಾನ್ಯವೆನಿಸಿಬಿಡುತ್ತಾರೆ. ಚಿತ್ರರಂಗದಲ್ಲಿ ಸಂಪಾದಿಸಿದ ಹೆಸರು ಕೀರ್ತಿಯಿಂದ ವಾಹಿನಿಯವರು ನಟರನ್ನು ತಮ್ಮ ಸ್ವಾರ್ಥಕ್ಕಾಗಿ ಕರೆತಂದು ಅವರ ಜನಪ್ರಿಯತೆ ಕುಗ್ಗಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕರನ್ನು ಟಿವಿ ಪರದೆಯಲ್ಲಿ ಪ್ರತಿದಿನ ನೋಡುವ ಪ್ರೇಕ್ಷಕ ಹೇಗೆ ತಾನೇ ಚಿತ್ರಮಂದಿರಕ್ಕೆ ಬರುತ್ತಾನೆ ಎಂಬುದನ್ನು ಆ ನಾಯಕ ನಟರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು.

ಚಿತ್ರರಂಗ ಕುಟುಂಬ ಅಂತ ಸುಮ್ಮನೆ ಹೇಳಬಾರದು

ಚಿತ್ರರಂಗವೆಂಬುದು ಕುಟುಂಬವೆಂದು ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರವೇ ಹೇಳುವಂತಾಗಬಾರದು. ಅದನ್ನು ಜಾರಿಗೆ ತರುವ ಪ್ರಯತ್ನ ಆಗಬೇಕು. ನಾಯಕ ನಟರು ಕಿರುತೆರೆ ಬಿಟ್ಟು ಹಿರಿತೆರೆಯ ಕಡೆ ಹೆಚ್ಚಿನ ಗಮನ ಕೊಡಬೇಕು. ಹೆಚ್ಚೆಚ್ಚು ಸಿನಿಮಾಗಳು ಮಾಡುತ್ತಾ ಹೋದರೆ ಇಲ್ಲಿರುವ ಸ್ಥಳೀಯ ಕಲಾವಿದರಿಗೆ ತಂತ್ರಜ್ಞರಿಗೆ ಕೆಲಸ ಸಿಗುತ್ತೆ. ಒಂದು ಚಿತ್ರ ಪ್ರಾರಂಭವಾದರೆ ಕನಿಷ್ಠ ಒಂದು ಸಾವಿರದಿಂದ ಎರಡು ಸಾವಿರ ಕಾರ್ಮಿಕರಿಗೆ ಕೆಲಸ ಸಿಗುತ್ತೆ. ಆ ಕಾರ್ಮಿಕರ ಕುಟುಂಬಗಳಿಗೆ ನೆರವಾಗುತ್ತದೆ.

ರಾಜಕುಮಾರ್‌, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್ ಇನ್ನೂ ಹಲವು ಕಲಾವಿದರು ವರ್ಷಕ್ಕೆ ಎರಡರಿಂದ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಅವರ ಸಾಧನೆಗಳ ಮುಂದೆ ನಾವೆಲ್ಲರೂ ಶೂನ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವು ನಟರು ತಮ್ಮ ಅಹಂ, ಸ್ಟಾರ್‌ಡಮ್ ಪಕ್ಕಕ್ಕಿಟ್ಟು ಇನ್ನಾದರೂ ವರ್ಷಕ್ಕೆ ಎರಡು ಸಿನಿಮಾ ಮಾಡುವಂತಾಗಲಿ.

ಕೇವಲ ಹಣದ ವ್ಯಾಮೋಹಕ್ಕಾಗಿ ಸಿನಿಮಾ ಮಾಡದೆ ಕನ್ನಡ ಚಿತ್ರರಂಗದ ಏಳಿಗೆಗಾಗಿ, ಪ್ರೇಕ್ಷಕರಿಗಾಗಿ ಸಿನಿಮಾ ಮಾಡುವುದು ಅಭ್ಯಾಸ ಮಾಡಿಕೊಳ್ಳಬೇಕು. ಆ ಕಲಾವಿದ 50 ಕೋಟಿ ಸಂಭಾವನೆ ಪಡೆದುಕೊಂಡ, ನಾನೇನೂ ಕಮ್ಮಿ ನನಗೆ ನೂರು ಕೋಟಿ ಕೊಡಿ ಎನ್ನುತ್ತಾ ಚಿತ್ರರಂಗ ಹಾಳು ಮಾಡುವ ಕೆಲವು ನಟರು ಇನ್ನಾದರೂ ತಮ್ಮ ಅಹಂ ಬದಿಗಿಟ್ಟು ಚಿತ್ರರಂಗದ ಏಳಿಗೆಗಾಗಿ ದುಡಿಯುವ ಮನಸು ಮಾಡಬೇಕು.

ಕನ್ನಡ ಚಿತ್ರರಂಗ ಮತ್ತೆ ಪುಟಿದೆದ್ದು ಮೇಲೆ ಬರಬೇಕು. ಆದರೆ ಈಗಿರುವ ಸನ್ನಿವೇಶ ನೋಡುತ್ತಿದ್ದರೆ ಕನ್ನಡ ಚಿತ್ರರಂಗ ಭಾರತದ ಚಿತ್ರರಂಗದ ಭೂಪಟದಿಂದ ಬಹುತೇಕ ಕಾಣೆಯಾಗುವ ದಿನಗಳು ಹತ್ತಿರದಲ್ಲಿದೆ ಎಂದು ಹೇಳುವುದಕ್ಕೆ ಬಹಳ ನೋವಾಗುತ್ತದೆ. ಈಗಾದರೂ ನಮ್ಮ ನಾಯಕ ನಟರು ಎಚ್ಚೆತ್ತುಕೊಂಡು ಚಿತ್ರರಂಗದ ಕಣ್ಣಾಗಲಿ, ನಿರ್ಮಾಪಕರ ಗಣಿಯಾಗಲಿ, ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆ ತರಲಿ.