ಕನ್ನಡ ಕಾವ್ಯ ಎನ್ನುವದು ಒಂದು ಮಹಾನ್ ಶಕ್ತಿ, ಯಾರು ಏನೇ ತೆಗಳಿದರು ಏನೇ ಅಂದರು ಕೂಡ ಕಾವ್ಯಕ್ಕೆ ಇರುವ ಶಕ್ತಿಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಎಲ್ಲರೂ ಕವಿತೆಗಳನ್ನು ಓದುವ ಹವ್ಯಾಸ ಇರಬೇಕು, ಸಮಾಜ ಅದನ್ನು ಬೆಳೆಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಶಿಗ್ಗಾಂವಿ: ಕನ್ನಡ ಕಾವ್ಯ ಎನ್ನುವದು ಒಂದು ಮಹಾನ್ ಶಕ್ತಿ, ಯಾರು ಏನೇ ತೆಗಳಿದರು ಏನೇ ಅಂದರು ಕೂಡ ಕಾವ್ಯಕ್ಕೆ ಇರುವ ಶಕ್ತಿಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಎಲ್ಲರೂ ಕವಿತೆಗಳನ್ನು ಓದುವ ಹವ್ಯಾಸ ಇರಬೇಕು, ಸಮಾಜ ಅದನ್ನು ಬೆಳೆಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ತಾಲೂಕಿನ ಗೊಟಗೋಡಿಯ ರಾಕ್‌ಗಾರ್ಡನ್‌ದಲ್ಲಿ ಉತ್ಸವ ಗಾರ್ಡನ್ ಉತ್ತರ ಸಾಹಿತ್ಯ ವೇದಿಕೆ ಹೆಬಸೂರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕ, ಶರೀಫ, ಕಾವ್ಯ ಪ್ರಶಸ್ತಿ ಪುರಸ್ಕಾರ ಹಾಗೂ ಗಜಲ್ ಕಾವ್ಯಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಕಾವ್ಯ ಪರಂಪರೆಯು ಮನುಷ್ಯ ಸಂಬಂಧವನ್ನು ಬೆಸೆಯುವಂತ ಬಹುದೊಡ್ಡ ಪರಂಪರೆಯಾಗಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಕಾವ್ಯ ಎತ್ತಿ ಹಿಡಿಯುತ್ತದೆ. ಹೆಬ್ಸೂರ್ ರಂಜಾನ್ ಇಂತಹ ಕಾರ್ಯಕ್ರಮದ ಮೂಲಕ ಕಾವ್ಯವನ್ನು ಕಟ್ಟುವ ಮತ್ತು ಕವಿಗಳನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ದಿ. ಟಿ.ಬಿ. ಸೊಲಬಕ್ಕನವರ್ ಅವರ ಕಾರ್ಯವನ್ನು ನಿಜಕ್ಕೂ ನಾವು ಸ್ಮರಿಸಲೇಬೇಕು, ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ರಾಕ್ ಗಾರ್ಡನ್ ಮೂಲಕ ಕೊಡುಗೆ ಕೊಟ್ಟಿರುವುದು ಸ್ಮರಣಾರ್ಹ ಎಂದರು.
ಉತ್ಸವ ರಾಕ್ ಗಾರ್ಡನ್ ಕ್ಯುರೆಟರ್ ವೇದರಾಣಿ ಪ್ರಕಾಶ್ ದಾಸನೂರ ಮಾತನಾಡಿದರು. ಚನ್ನಪ್ಪ ಅಂಗಡಿ, ದೇವೇಂದ್ರಪ್ಪ ಜಾಜಿ, ಎ.ಎಸ್. ಮಕಂದರ್, ಮಂಜುಳಾ ತಿರುಗಾವಲು ಅವರಿಗೆ ಕನಕ ಶರೀಫ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಕ್ ಗಾರ್ಡನ್ ವತಿಯಿಂದ ಸಾಧಕರಾದ ಪ್ರಭಾಕರ್ ಭಟ್, ಕರಿಯಪ್ಪ ಹಂಚಿನಮನಿ, ಹರೀಶ್ ಮಾಳಪ್ಪನವರ್, ಉಮಾಪತಿ ಗಜಾನನ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಾಜಶೇಖರ್ ಮಠಪತಿಯವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಸಾಹಿತಿ ಸತೀಶ್ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಾಹಿತಿಗಳಾದ ಚನ್ನಪ್ಪ ಅಂಗಡಿ , ಮಮತಾ ಅರಕೇರಿ, ಮಲ್ಲಿಕಾರ್ಜುನ್ ಮಾನ್ಪಡೆ ಉತ್ಸವ ರಾಕ್ ಗಾರ್ಡನ್ ಸಮಿತಿ ಕಾರ್ಯದರ್ಶಿ ಪ್ರಕಾಶ ದಾಸನೂರ ಸೇರಿದಂತೆ ಹಲವಾರು ಸಾಹಿತಿಗಳು ಇದ್ದರು.ನಂತರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಗಜಲ್ ಕವಿಗಳು ಗಜಲ್ ಕಾವ್ಯವನ್ನು ಪ್ರಸ್ತುತಪಡಿಸಿದರು. ರಮಜಾನ್ ಹೆಬಸೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ದೀಪಾ ಗೋನಾಳ ಕಾರ್ಯಕ್ರಮ ನಿರೂಪಿಸಿದರು.