ಸುದೀಪ್‌ ನಟನೆ ಹಾಗೂ ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್‌’ ಚಿತ್ರ ಬಿಡುಗಡೆಯಾದ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು.

ಸಿನಿವಾರ್ತೆ

ಸುದೀಪ್‌ ನಟನೆ ಹಾಗೂ ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್‌’ ಚಿತ್ರ ಬಿಡುಗಡೆಯಾದ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು.

‘ನನ್ನ ನಿರ್ಮಾಪಕರು ಖುಷಿಯಾಗಿದ್ದಾರೆ

ಈ ಸಂದರ್ಭದಲ್ಲಿ ಮಾತನಾಡಿದ ನಟ ಸುದೀಪ್‌, ‘ನನ್ನ ನಿರ್ಮಾಪಕರು ಖುಷಿಯಾಗಿದ್ದಾರೆ. ಚಿತ್ರವನ್ನು ವಿತರಣೆ ಮಾಡಿದವರು ಸಂಭ್ರಮದಲ್ಲಿದ್ದಾರೆ. ನೋಡಿದ ಪ್ರೇಕ್ಷಕರು ಕೂಡ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಸೆಲೆಬ್ರೆಟ್‌ ಮಾಡುತ್ತಿದ್ದಾರೆ. ನಮ್ಮ ನಿರೀಕ್ಷೆಯಂತೆ ಸಿನಿಮಾ ಎಲ್ಲಾ ಕಡೆ ಪ್ರದರ್ಶನ ಕಾಣುತ್ತಿದೆ. ನನಗೆ ‘ಮಾರ್ಕ್‌’ ಚಿತ್ರದ ಈ ಸಕ್ಸಸ್‌ ತೃಪ್ತಿ ಕೊಟ್ಟಿದೆ. ಖಂಡಿತ ಪ್ರೇಕ್ಷಕರು, ಅಭಿಮಾನಿಗಳು ಇನ್ನೂ ದೊಡ್ಡ ಮಟ್ಟಕ್ಕೆ ಚಿತ್ರವನ್ನು ತೆಗೆದುಕೊಂಡು ಹೋಗುತ್ತಾರೆಂಬ ಭರವಸೆ ಇದೆ. ಚಿತ್ರದಲ್ಲಿ ಬರುವ ಫೈಟ್ಸ್‌, ಡ್ಯಾನ್ಸ್‌ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಆದರೆ, ಚಿತ್ರಗಳಲ್ಲಿ ಡೈಲಾಗ್‌ಗಳ ಮೂಲಕ ಯಾರಿಗೂ ನಾನು ಕೌಂಟರ್‌ ಕೊಡುವುದಕ್ಕೆ ಹೋಗಲ್ಲ. ಸಿನಿಮಾದಲ್ಲಿ ನಾನು ಹೇಳುವ ಡೈಲಾಗ್‌ಗಳನ್ನು ಪಾತ್ರಕ್ಕೆ ಮಾತ್ರ ಸೀಮಿತವಾಗಿ ನೋಡಿ. ಅದನ್ನು ಬೇರೆ ಯಾವುದಕ್ಕೂ ಕನೆಕ್ಟ್‌ ಮಾಡಬೇಡಿ’ ಎಂದರು.

ನಾನೂ ಕೂಡ ಸುದೀಪ್‌ ಅವರ ಅಭಿಮಾನಿ

ನಿರ್ದೇಶಕ ವಿಜಯ್ ಕಾರ್ತಿಕೇಯ, ‘ನಾನೂ ಕೂಡ ಸುದೀಪ್‌ ಅವರ ಅಭಿಮಾನಿಯಾಗಿಯೇ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಅವರ ಜೊತೆಗೆ ಕೆಲಸ ಮಾಡುವುದು ತುಂಬಾ ಖುಷಿ ಕೊಟ್ಟಿದೆ. ಅಭಿಮಾನಿಗಳ ಸಂಭ್ರಮ ನೋಡುತ್ತಿದ್ದರೆ ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎಂದು ಹೇಳಿಕೊಂಡರು. ಕಾರ್ತಿಕ್‌ ಗೌಡ, ‘ಕರ್ನಾಟಕದಲ್ಲಿ ನಾವು ಎಲ್ಲೆಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದೇವೋ ಅಲ್ಲೆಲ್ಲ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿದ್ದಾರೆ. ಯಾರೋ ಕೆಲವು ಬೇಕು ಅಂತಲೇ ಖಾಲಿ ಚಿತ್ರಮಂದಿರಗಳ ವಿಡಿಯೋಗಳನ್ನು ಹಾಕುತ್ತಿದ್ದಾರೆ’ ಎಂದು ತಿಳಿಸಿದರು.

ನಟ ನವೀನ್‌ ಚಂದ್ರ, ನಿರ್ಮಾಪಕ ತಂಗರಾಜ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಸಾಹಸ ನಿರ್ದೇಶಕ ರವಿ ವರ್ಮ, ಕಲಾ ನಿರ್ದೇಶಕ ಶಿವಕುಮಾರ್‌, ಛಾಯಾಗ್ರಹಕ ಶೇಖರ್‌ ಚಂದ್ರು ಮುಂತಾದವರು ಹಾಜರಿದ್ದು, ಚಿತ್ರದ ಕುರಿತು ಹೇಳಿಕೊಂಡರು.