ಉಪೇಂದ್ರ ಎ ಸಿನಿಮಾ ಮರುಬಿಡುಗಡೆ

| Published : May 12 2024, 01:19 AM IST / Updated: May 12 2024, 07:58 AM IST

ಸಾರಾಂಶ

ಹಳೇ ಸಿನಿಮಾಗಳೇ ಮತ್ತೆ ಥಿಯೇಟರ್ ಆಕ್ರಮಿಸಿಕೊಳ್ಳುತ್ತಿವೆ. ಕ್ಲಾಸಿಕ್ ಕಲ್ಟ್‌ ಸಿನಿಮಾ ಉಪೇಂದ್ರ ಅವರ ಎ ಮತ್ತೆ ತೆರೆಗೆ ಅಪ್ಪಳಿಸುತ್ತಿದೆ.

 ಸಿನಿವಾರ್ತೆ

ಸಾಲು ಸಾಲು ಪುನೀತ್‌ ರಾಜ್‌ಕುಮಾರ್‌ ಚಿತ್ರಗಳ ಬಿಡುಗಡೆ ಬಳಿಕ ಇದೀಗ ಉಪೇಂದ್ರ ನಟನೆಯ ‘ಎ’ ಸಿನಿಮಾ ಥಿಯೇಟರ್‌ನಲ್ಲಿ ರೀರಿಲೀಸ್‌ ಆಗುತ್ತಿದೆ. ಮೇ 17ಕ್ಕೆ ಈ ಕಲ್ಟ್‌ ಸಿನಿಮಾ ಮತ್ತೆ ತೆರೆ ಮೇಲೆ ಅಪ್ಪಳಿಸಲಿದೆ.

1998 ರಲ್ಲಿ ‘ಬುದ್ಧಿವಂತರಿಗೆ ಮಾತ್ರ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆ ಮಾಡಿ ಬಾಕ್ಸ್‌ ಆಫೀಸನ್ನು ಚಿಂದಿ ಉಡಾಯಿಸಿದ್ದ ಉಪೇಂದ್ರ ನಟನೆ, ನಿರ್ದೇಶನದ ಕಲ್ಟ್‌ ಸಿನಿಮಾವಿದು. ಸುಮಾರು 1 ಕೋಟಿ ವೆಚ್ಚದಲ್ಲಿ ತಯಾರಾಗಿ ಬರೋಬ್ಬರಿ 20 ಕೋಟಿ ರು. ಬಾಚಿಕೊಳ್ಳುವ ಮೂಲಕ 26 ವರ್ಷಗಳ ಹಿಂದೆಯೇ ದೊಡ್ಡ ದಾಖಲೆ ಮಾಡಿತ್ತು.

ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಕ್ಲಾಸಿಕ್‌ ಕಲ್ಟ್‌ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್‌ ಆಗಿದೆ. ಅಲ್ಲಿ ಹಳೆಯ ಸಿನಿಮಾಗಳನ್ನು ಥಿಯೇಟರ್‌ಗೆ ರೀರಿಲೀಸ್‌ ಮಾಡಿರುವ ನಿರ್ಮಾಪಕರು ಭರ್ಜರಿ ಲಾಭ ಮಾಡಿದ್ದಾರೆ. ಅದೇ ಹವಾ ಕನ್ನಡದಲ್ಲೂ ಮುಂದುವರಿಯುವ ಸೂಚನೆ ಸಿಕ್ಕಿದೆ. ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜಾಕಿ’ ಸಿನಿಮಾ ಅಪ್ಪು ಜನ್ಮದಿನದಂದು ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡಿತ್ತು. 

ಅದರ ಬೆನ್ನಲ್ಲೇ ‘ಅಂಜನೀಪುತ್ರ’, ‘ಪವರ್‌’ ಸಿನಿಮಾಗಳು ಬಿಡುಗಡೆಯಾದವು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಳೆ ಹಾಡುಗಳ ರೀಲ್ಸ್‌ ಸಖತ್‌ ಟ್ರೆಂಡಿಂಗ್‌ ಆಗುತ್ತಿದೆ. ಅದರಂತೇ ಹಳೇ ಸಿನಿಮಾಗಳೂ ಮತ್ತೆ ಟ್ರೆಂಡ್‌ ಸೆಟ್ಟರ್‌ಗಳಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ.