ಸಂಚಲನಕ್ಕೆ ಕಾರಣವಾಗಿರುವ ಬಿಟ್‌ಕಾಯಿನ್‌ ಆಡಿಯೋನಲ್ಲಿ ಇರುವುದು ಸುಪ್ರಿಯಾ ಧ್ವನಿ : ಅಜಿತ್‌

| Published : Nov 21 2024, 01:03 AM IST / Updated: Nov 21 2024, 04:25 AM IST

ಸಂಚಲನಕ್ಕೆ ಕಾರಣವಾಗಿರುವ ಬಿಟ್‌ಕಾಯಿನ್‌ ಆಡಿಯೋನಲ್ಲಿ ಇರುವುದು ಸುಪ್ರಿಯಾ ಧ್ವನಿ : ಅಜಿತ್‌
Share this Article
  • FB
  • TW
  • Linkdin
  • Email

ಸಾರಾಂಶ

 ಮಹಾರಾಷ್ಟ್ರದಲ್ಲಿ  ಸಂಚಲನಕ್ಕೆ ಕಾರಣವಾಗಿರುವ ಬಿಟ್ಕಾಯಿನ್‌ ವ್ಯವಹಾರದ ಕುರಿತ ಆಡಿಯೋದಲ್ಲಿರಿರುವುದು ಎನ್‌ಸಿಪಿ (ಪವಾರ್‌ ಬಣ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಅವರದ್ದೇ ಎಂದು  ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹೇಳಿಕೊಂಡಿದ್ದಾರೆ.

ಪುಣೆ: ವಿಧಾನಸಭಾ ಚುನಾವಣೆಗೂ ಮುನ್ನಾ ದಿನ ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಬಿಟ್ಕಾಯಿನ್‌ ವ್ಯವಹಾರದ ಕುರಿತ ಆಡಿಯೋದಲ್ಲಿರಿರುವುದು ಎನ್‌ಸಿಪಿ (ಪವಾರ್‌ ಬಣ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಅವರದ್ದೇ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹೇಳಿಕೊಂಡಿದ್ದಾರೆ.

ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಅಕ್ರಮವಾಗಿ ಬಿಟ್ಕಾಯಿನ್‌ ಹಣ ಬಳಸುತ್ತಿದ್ದಾರೆ ಎಂದು ಆರೋಪಿಸುವ ಹಾಗೂ ಅವರ ಬಿಟ್‌ಕಾಯಿನ್‌ ವ್ಯವಹಾರದ ಸಂಭಾಷಣೆ ಇರುವ ಆಡಿಯೋ ತುಣುಕೊಂದು ಮಂಗಳವಾರ ಬಿಡುಗಡೆಯಾಗಿತ್ತು.

ಈ ಕುರಿತು ಬಾರಾಮತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅಜಿತ್‌ ಪವಾರ್‌, ‘ನಾನು ಪಟೋಲೆ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಅದು ಅವರದ್ದೇ ಧ್ವನಿ. ಜೊತೆಗೆ ಮತ್ತೊಂದು ಧ್ವನಿ ಸುಪ್ರಿಯಾ ಸುಳೆ ಅವರದ್ದೇ’ ಎಂದರು.

ಇನ್ನು ದಿಲ್ಲಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ಈ ಪ್ರಕರಣದ ಬಗ್ಗೆ ರಾಹುಲ್‌ ಗಾಂಧಿ ಅವರೇ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

ಇದರ ನಡುವೆ ಆಡಿಯೋ ಬಿಡುಗಡೆ ಮಾಡಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ರವೀಂದ್ರನಾಥ ಪಾಟೀಲ್, ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ತಮ್ಮ ಮೇಲಿನ ಆರೋಪವನ್ನು ಸುಪ್ರಿಯಾ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ‘ಅಜಿತ್‌ ಪವಾರ್‌ ಅವರು ಏನು ಬೇಕಾದರೂ ಹೇಳಬಲ್ಲ ಶಕ್ತಿ ಹೊಂದಿದ್ದಾರೆ. ಆಡಿಯೋ ನಕಲಿ. ಅದನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದೆ. ಇತ್ತೀಚೆಗೆ ಸಂಸದೆ ಸುಧಾಮೂರ್ತಿ ಧ್ವನಿಯನ್ನೂ ಹೀಗೇ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಬೇಕು ಎಂದು ನಾನು ಈಗಾಗಲೇ ದೂರು ಕೂಡಾ ನೀಡಿದ್ದೇನೆ‘ ಎಂದು ಹೇಳಿದ್ದಾರೆ.

ಬಿಟ್ಕಾಯಿನ್‌ ಹಗರಣ: ಗೌರವ್ ಮೆಹ್ತಾ ಮನೆ ಮೇಲೆ ಇ.ಡಿ. ದಾಳಿ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಾಯಕರು ಅಕ್ರಮವಾಗಿ ಬಿಟ್ಕಾಯಿನ್‌ ಹಣ ಬಳಸಿದ್ದಾರೆ ಎಂಬ ಆರೋಪದ ನಡುವೆಯೇ, ಲೆಕ್ಕಪರಿಶೋಧನಾ ಕಂಪನಿಯೊಂದರ ಸಿಬ್ಬಂದಿ ಗೌರವ್‌ ಮೆಹ್ತಾಗೆ ಸೇರಿದ ಛತ್ತೀಸ್‌ಗಢ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.ದ ಇದೇ ವೇಳೆ ಆತನಿಗೆ ಸಿಬಿಐ ಕೂಡ ವಿಚಾರಣೆಗೆ ನೋಟಿಸ್‌ ನೀಡಿದೆಈತ ಮಂಗಳವಾರ ಬಿಡುಗಡೆ ಆಗಿರುವ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಹಾಗೂ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಬಿಟ್‌ಕಾಯಿನ್‌ ಕುರಿತ ಫೋನ್‌ ಸಂಭಾಷಣೆಯಲ್ಲಿ ಈತನ ದನಿಯೂ ಇದೆ. ಈತ ಇಬ್ಬರೂ ನಾಯಕರ ಜತೆ ಮಾತನಾಡಿದ್ದ ಎನ್ನಲಾಗಿದೆ. ಹೀಗಾಗಿ ದಾಳಿ ನಡೆದಿದೆ.

ಮೆಹ್ತಾ ಮತ್ತು ಇತರೆ ಕೆಲವು ವ್ಯಕ್ತಿಗಳು ಬಿಟ್ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಶೇ.10ರಷ್ಟು ರಿಟರ್ನ್ಸ್‌ ನೀಡುವ ಆಮಿಷ ಒಡ್ಡಿ 2017ರಲ್ಲಿ 6600 ಕೋಟಿ ರು. ಹಣ ಸಂಗ್ರಹಿಸಿದ್ದರು. ಈ ಕುರಿತು ಆಗಲೇ ಪ್ರಕರಣ ದಾಖಲಿಸಿದ್ದ ಇ.ಡಿ. ಅಧಿಕಾರಿಗಳು ತನಿಖೆ ಕೂಡಾ ಆರಂಭಿಸಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಪವಾರ್‌ ಬಣದ ಎನ್‌ಸಿಪಿ ನಾಯಕರು ಮತ್ತು ಕಾಂಗ್ರೆಸ್‌ ನಾಯಕರು ನಡೆಸಿದ್ದಾರೆ ಎಂದು ಆರೋಪಿಸಲಾದ ಬಿಟ್ಕಾಯಿನ್‌ ಹಗರಣದಲ್ಲೂ ಮೆಹ್ತಾ ಪಾತ್ರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.ಸುಪ್ರಿಯಾ ಸುಳೆ ಮತ್ತು ಪಟೋಲೆ, 2017ರಲ್ಲಿ ಮೆಹ್ತಾ ಮತ್ತು ಇತರರು ಸಂಗ್ರಹಿಸಿದ್ದ ಬಿಟ್ಕಾಯಿನ್‌ ಹಣವನ್ನು ಪಡೆದು ಈ ಚುನಾವಣೆಯಲ್ಲಿ ಬಳಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಹಾಗೂ ಈ ಇಬ್ಬರು ನಾಯಕರು ಬಿಟ್‌ಕಾಯಿನ್‌ ವ್ಯವಹಾರದ ಬಗ್ಗೆ ಅನ್ಯರ ಜತೆ ಮಾತನಾಡುವ ಫೋನ್‌ ಸಂಭಾಷಣೆಯನ್ನೂ ಬಹಿರಂಗಪಡಿಸಿದೆ.

ಮಹಾರಾಷ್ಟ್ರ ಮತಲಂಚ: ಪ್ರಮುಖ ಆರೋಪಿ ಶಫಿ ಬಂಧನ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ನಡೆದಿದೆ ಎನ್ನಲಾದ ಮತಕ್ಕಾಗಿ ಲಂಚ ಹಗರಣದ ಹಣವನ್ನು ಅಮಾಯಕರ ಬ್ಯಾಂಕ್‌ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ನಗನಿ ಅಕ್ರಮ ಮೊಹಮ್ಮದ್‌ ಶಫಿ ಎಂಬಾತನನ್ನು ಗುಜರಾತ್‌ನ ಅಹಮದಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಶಫಿ ವಿರುದ್ಧ ಜಾರಿ ನಿರ್ದೇಶನಾಲಯ ಲುಕೌಟ್‌ ನೋಟಿಸ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಆತ, ಅಹಮದಾಬಾದ್‌ನಿಂದ ದುಬೈಗೆ ವಿಮಾನದ ಮೂಲಕ ಪರಾರಿಯಾಗಲು ಯತ್ನಿಸಿದ ವೇಳೆ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್‌ ಖಾತೆಯಲ್ಲಿ ಅಕ್ರಮವಾಗಿ ಹಣ ಚಲಾವಣೆ ನಡೆದಿದೆ ಎಂದು ಆರೋಪಿಸಿ ನೀಡಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿದ್ದ ಇ.ಡಿ. ಅಧಿಕಾರಿಗಳು, ಕಳೆದ ವಾರ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ದಾಳಿ ನಡೆಸಿದ್ದರು. ಬಳಿಕ ಮಾಲೆಗಾಂವ್‌ ಮೂಲದ ಸಿರಾಜ್‌ ಅಹಮದ್‌ ಹರೂನ್‌ ಮೆಮನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಮೆಮನ್‌, ಶಫಿ ಸೂಚನೆ ಅನ್ವಯ ಹಲವು ಅಮಾಯಕರ ಬ್ಯಾಂಕ್‌ ಖಾತೆಗಳ ಮೂಲಕ 100 ಕೋಟಿ ರು.ಗೂ ಹೆಚ್ಚಿನ ಹಣದ ವಹಿವಾಟು ನಡೆಸಿದ್ದ. ಜೊತೆಗೆ ಹವಾಲಾ ಜಾಲದ ಮೂಲಕವೂ 14 ಕೋಟಿ ರು. ಪಾವತಿಸಿದ್ದ. ತನಿಖೆ ವೇಳೆ ಇದರಲ್ಲಿ ಶಫಿ ಪಾತ್ರ ಕಂಡುಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಇ.ಡಿ. ಲುಕೌಟ್‌ ನೋಟಿಸ್‌ ಜಾರಿ ಮಾಡಿತ್ತು.ಹೀಗೆ ವರ್ಗಾವಣೆ ಮಾಡಿದ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಜನರಿಂದ ಮತ ಪಡೆಯಲು ಲಂಚಕ್ಕಾಗಿ ಬಳಸಲಾಗಿತ್ತು ಎನ್ನಲಾಗಿದೆ. ಆದರೆ ಹಣವನ್ನು ಯಾವ ಪಕ್ಷದ ಪಕ್ಷದ, ಯಾವ ಅಭ್ಯರ್ಥಿಗಳಿಗಾಗಿ ಬಳಸಿತ್ತು ಎಂಬುದು ಬಹಿರಂಗವಾಗಿಲ್ಲ. ಆದರೆ ಮಾಲೇಗಾಂವ್‌ ಪ್ರಕರಣ ‘ವೋಟ್‌ ಜಿಹಾದ್‌ ಹಗರಣ’ ಎಂದು ಬಿಜೆಪಿ ನಾಯಕ ಕಿರೀಟ್‌ ಸೋಮಯ್ಯ ಆರೋಪಿಸಿದ್ದರು.