ಸಾರಾಂಶ
ಲಖನೌ: ತಂತ್ರಜ್ಞಾನದ ಬಗ್ಗೆ ಸರಿಯಾದ ಅರಿವಿದ್ದರೆ ದೊಡ್ಡ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಹೇಗೆ ಬಗೆಹರಿಸಬಹುದು ಎಂಬುದಕ್ಕೆ ಈ ಪ್ರಸಂಗವೊಂದು ಸಾಕ್ಷಿ. ಉತ್ತರ ಪ್ರದೇಶದ 13 ವರ್ಷದ ಬಾಲಕಿಯೊಬ್ಬಳು, ದಿಢೀರ್ ಮನೆಗೆ ನುಗ್ಗಿದ ಕೋತಿಗಳ ಹಿಂಡನ್ನು ಅಲೆಕ್ಸಾ ಸಹಾಯದಿಂದ ನಾಯಿಯ ಸದ್ದು ಮಾಡಿ ಮಂಗಗಳನ್ನು ಓಡಿಸಿ, 15 ತಿಂಗಳ ಮಗುವನ್ನು ರಕ್ಷಿಸಿದ್ದಾಳೆ. ಬಾಲಕಿಯ ಈ ಶೌರ್ಯ ಹಾಗೂ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
13 ವರ್ಷ ನಿಕಿತಾ ತಮ್ಮ ಅಕ್ಕನ ಮನೆಗೆ ತೆರಳಿದ್ದರು. ಅಲ್ಲಿ ತಮ್ಮ ಅಕ್ಕನ 15 ತಿಂಗಳ ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ, ಬಾಗಿಲು ತೆರೆದೇ ಇದ್ದ ಕಾರಣ, ಮಂಗಗಳ ಹಿಂಡು ದಿಢೀರ್ ಮನೆ ಒಳಗೆ ಪ್ರವೇಶಿಸಿ ಮನೆಯಲ್ಲೆಲ್ಲಾ ಗದ್ದಲ ಆರಂಭಿಸಿದವು. ಈ ಸದ್ದಿಗೆ ಮಗು ಅಳಲು ಆರಂಭಿಸಿತ್ತು. ಈ ವೇಳೆ ನಿಕಿತಾ ಕಿಂಚಿತ್ತು ಸಮಯ ವ್ಯರ್ಥ ಮಾಡದೆ ಅಲ್ಲೇ ಇದ್ದ ಅಲೆಕ್ಸಾ ಬಳಿ ನಾಯಿಯ ಸದ್ದು ಮಾಡುವಂತೆ ಆದೇಶಿಸಿದಳು. ಅಲೆಕ್ಸಾ ನಾಯಿಯ ಸದ್ದು ಮಾಡುತ್ತಿದ್ದಂತೆ ಮನೆಗೆ ಪ್ರವೇಶಿಸಿದ್ದ ಮಂಗಗಳು ಬೆದರಿ ಕಾಲ್ಕಿತ್ತು ಹೊರನಡೆಯಿತು. ನಿಕಿತಾಳ ಈ ಶೌರ್ಯಕ್ಕೆ ಮನೆಯವರೆಲ್ಲದೇ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಏನಿದು ಅಲೆಕ್ಸಾ?
ಅಲೆಕ್ಸಾ ಎಂಬುದು ಅಮೆಜಾನ್ ಕಂಪನಿ ತಂದಿರುವ ಒಂದು ಸಾಧನವಾಗಿದ್ದು, ಮಾನವನ ಆದೇಶದಂತೆ ಕೆಲಸ ಮಾಡುತ್ತದೆ. ಹಾಡು ಎಂದರೆ ಹಾಡುವುದು, ಒಂದು ವಿಷಯದ ಬಗ್ಗೆ ಮಾಹಿತಿ ಕೇಳಿದರೆ, ಅದರ ಬಗ್ಗೆ ವಿಸ್ತೃತ ವರದಿ ಹೇಳುತ್ತದೆ.