ಜ್ಞಾನವಾಪಿ: ಹಿಂದು ದೇವರ ಪೂಜೆಗೆ ಹೈ ಅಸ್ತು

| Published : Feb 27 2024, 01:37 AM IST / Updated: Feb 27 2024, 10:40 AM IST

ಸಾರಾಂಶ

ಪೂಜೆಗೆ ಅವಕಾಶದ ಜಿಲ್ಲಾ ಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶ ಅವಶ್ಯಕತೆ ಇಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ. ಈ ಮೂಲಕ ದೇಗುಲ ಮರುವಶ ಮಾಡಿಕೊಳ್ಳುವ ಹಿಂದೂ ಪಂಗಡದ ಹೋರಾಟಕ್ಕೆ ಮತ್ತೆ ಜಯ ಸಿಕ್ಕಂತಾಗಿದೆ.

ಪ್ರಯಾಗ್‌ರಾಜ್‌: ಉತ್ತರಪ್ರದೇಶದ ವಾರಾಣಸಿ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ದೇವರ ಪೂಜೆಗೆ ಹಿಂದೂಗಳಿಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಅಲಹಾಬಾದ್‌ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ. 

ಪೂಜೆಗೆ ಅವಕಾಶ ನೀಡಿ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅವಶ್ಯಕತೆ ಕಾಣಿಸುತ್ತಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಇದರೊಂದಿಗೆ ದೇಗುಲ ಒಡೆದು ನಿರ್ಮಿಸಲಾಗಿದೆ ಎನ್ನಲಾದ ಜ್ಞಾನವಾಪಿ ಸಮುಚ್ಚಯವನ್ನು ಮರಳಿ ಪಡೆಯುವ ಹಿಂದೂ ಹೋರಾಟಗಾರರ ಯತ್ನಕ್ಕೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದಂತಾಗಿದೆ.

ಅರ್ಜಿ ವಜಾ: ವ್ಯಾಸ್‌ ಠಿಖಾನಾ ಎಂದೂ ಕರೆಯಲಾಗುವ ಜ್ಞಾನವಾಪಿ ಮಸೀದಿಯ ದಕ್ಷಿಣದ ಭಾಗದ ನೆಲಮಹಡಿಯಲ್ಲಿನ ಮೂರ್ತಿಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಪಂಗಡಗಳು ಅರ್ಜಿ ಸಲ್ಲಿಸಿದ್ದವು. 

ಈ ಕುರಿತು ಜ.31ರಂದು ತೀರ್ಪು ನೀಡಿದ್ದ ವಾರಾಣಸಿ ಜಿಲ್ಲಾ ನ್ಯಾಯಾಲಯ, ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು.ಇದನ್ನು ಮಸೀದಿ ಉಸ್ತುವಾರಿ ಹೊಂದಿರುವ ಅಂಜುಮನ್‌ ಇಂತೇಝಾಮಿಯಾ ಮಸೀದಿ ಸಮಿತಿ ಪ್ರಶ್ನಿಸಿತ್ತು. 

ಈ ಕುರಿತು ಸೋಮವಾರ ತೀರ್ಪು ಪ್ರಕಟಿಸಿದ ನ್ಯಾ. ರೋಹಿತ್‌ ರಂಜನ್‌ ಅಗರ್ವಾಲ್‌, ‘ಪ್ರಕರಣದ ಎಲ್ಲಾ ದಾಖಲೆಗಳು ಮತ್ತು ವಾದ-ಪ್ರತಿವಾದ ಆಲಿಸಿದ ಬಳಿಕ ಜ.31ರಂದು ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಯಾವುದೇ ಮಧ್ಯಪ್ರವೇಶದ ಅಗತ್ಯ ಕಂಡುಬರುತ್ತಿಲ್ಲ. 

ಹೀಗಾಗಿ ವ್ಯಾಸ್‌ ಠಿಖಾನಾದಲ್ಲಿ ಪೂಜೆ ಮುಂದುವರೆಯಲಿದೆ’ ಎಂದು ಹೇಳಿದರು.ಇದಕ್ಕೂ ಮೊದಲು ದೇಗುಲ ಒಡೆದು ಮಸೀದಿ ನಿರ್ಮಿಸಲಾಗಿದೆಯೇ ಎಂಬುದನ್ನು ಪತ್ತೆ ಮಾಡಲು ನ್ಯಾಯಾಲಯದ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಿತ್ತು. 

ಅದು ನೀಡಿದ ವರದಿಯಲ್ಲಿ, ದೇಗುಲವನ್ನು ಮೊಘಲ್‌ ದೊರೆ ಔರಂಗಜೇಬ್‌ ಒಡೆದು ಹಾಕಿ ಮಸೀದಿ ನಿರ್ಮಿಸಿದ್ದ. ಮಸೀದಿಯೊಳಗೆ ದೇವರ ಹಲವು ಮೂರ್ತಿಗಳನ್ನು ಕಾಣಬಹುದಾಗಿದೆ ಎಂದು ಹೇಳಲಾಗಿತ್ತು.