ಸಾರಾಂಶ
ಮುಂಬೈ: ಮರಾಠಾ ಮೀಸಲಾತಿ ವಿಚಾರವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಹೋರಾಟಗಾರ ಮನೋಜ್ ಜಾರಂಗೆ 17 ದಿನಗಳ ಬಳಿಕ ತಮ್ಮ ಉಪವಾಸ ಕೈಬಿಟ್ಟಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರವು ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂಬ ತನ್ನ ಬೇಡಿಕೆಗೆ ಒತ್ತಾಯಿಸಲು ಮುಂಬೈ ಮೆರವಣಿಗೆಯನ್ನು ಘೋಷಿಸಿದ 1 ದಿನದ ನಂತರ ಉಪವಾಸವನ್ನು ಜಾರಂಗೆ ಕೈ ಬಿಟ್ಟಿದ್ದಾರೆ.
ಕಳೆದ ವಾರ ವಿಧಾನಸಭೆ ಅಧಿವೇಶನದ ಸಮಯದಲ್ಲಿ ಮರಾಠರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಗೆ ಉಭಯ ಸದನಗಳು ಒಪ್ಪಿಗೆ ಸೂಚಿಸಿದ್ದವು.
ಆದರೆ ಕುಣಬಿ ಸಮುದಾಯ ಇತರ ಹಿಂದುಳಿದ ವರ್ಗಗಳಿಗೆ ಸೇರುತ್ತದೆ. ಹೀಗಾಗಿ ಎಲ್ಲಾ ಮರಾಠರಿಗೂ ಈ ಸಮುದಾಯದ ಜಾತಿ ಪ್ರಮಾಣಪತ್ರ ನೀಡಬೇಕು.
ಹೀಗಾದಲ್ಲಿ ಮಾತ್ರ ಅವರು ಅನುಕೂಲಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂಬುದು ಜಾರಂಗೆ ಅವರ ಅಭಿಪ್ರಾಯವಾಗಿದೆ.
ಇದಕ್ಕೂ ಮೊದಲು ಮೀಸಲಾತಿಗೆ ಆಗ್ರಹಿಸಿ ಫೆ.10ರಂದು ಜಲ್ನಾ ಜಿಲ್ಲೆಯ ಅಂತರ್‌ವಾಲಿ ಗ್ರಾಮದಲ್ಲಿ ಜಾರಂಗೆ ಉಪವಾಸ ಆರಂಭಿಸಿದ್ದರು. ಬಳಿಕ ಮಾತನಾಡಿದ ಅವರು, ‘ನಾನು ನನ್ನ ಉಪವಾಸ ಸತ್ಯಾಗ್ರಹವನ್ನು ಕೈಬಿಡುತ್ತಿದ್ದೇನೆ.
ನಾನು ಗ್ರಾಮಗಳಿಗೆ ತೆರಳಿ ನನ್ನ ಹೋರಾಟದ ಬಗ್ಗೆ ಅರಿವು ಮೂಡಿಸಲಿದ್ದೇನೆ. ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ಹಲವರಿಗೆ ಇಲ್ಲಿಗೆ ಬರಲಾಗಿಲ್ಲ.
ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸುವುದಿದ್ದರೆ ಜರುಗಿಸಲಿ, ನನಗೇನು ಸಮಸ್ಯೆ ಇಲ್ಲ. ಆದರೆ ಅವರೇ ಸಮಸ್ಯೆಯನ್ನು ಆಹ್ವಾನಿಸಿಕೊಂಡಂತಾಗುತ್ತದೆ’ ಎಂದು ಹೇಳಿದರು.