ಸಾರಾಂಶ
ಒಂದು ಕಡೆ ಅಮೆರಿಕವು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿಗರಿಗೆ ನೀಡಲಾಗುತ್ತಿರುವ ಎಚ್1ಬಿ ವೀಸಾಗೆ ಕಡಿವಾಣ ಹಾಕಲು ಮುಂದಾಗಿದ್ದರೆ, ಇನ್ನೊಂದು ಕಡೆ ಚೀನಾ ಅಂಥ ನೌಕರರನ್ನು ತನ್ನತ್ತ ಸೆಳೆಯಲು ಸಜ್ಜಾಗಿ ನಿಂತಿದೆ. ಇದಕ್ಕೆಂದೇ ‘ಕೆ ವೀಸಾ’ ಪರಿಚಯಿಸಲು ಮುಂದಾಗಿದೆ.
ಬೀಜಿಂಗ್: ಒಂದು ಕಡೆ ಅಮೆರಿಕವು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿಗರಿಗೆ ನೀಡಲಾಗುತ್ತಿರುವ ಎಚ್1ಬಿ ವೀಸಾಗೆ ಕಡಿವಾಣ ಹಾಕಲು ಮುಂದಾಗಿದ್ದರೆ, ಇನ್ನೊಂದು ಕಡೆ ಚೀನಾ ಅಂಥ ನೌಕರರನ್ನು ತನ್ನತ್ತ ಸೆಳೆಯಲು ಸಜ್ಜಾಗಿ ನಿಂತಿದೆ. ಇದಕ್ಕೆಂದೇ ‘ಕೆ ವೀಸಾ’ ಪರಿಚಯಿಸಲು ಮುಂದಾಗಿದೆ. ವಿಶ್ವದೆಲ್ಲೆಡೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವ ಉದ್ಯೋಗಿಗಳನ್ನು ಸೆಳೆಯಲೆಂದೇ ಈ ವೀಸಾ ಪರಿಚಯಿಸುತ್ತಿದೆ.
ಈ ಸಂಬಂಧ ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ವಿದೇಶಿಗರ ಪ್ರವೇಶ ಮತ್ತು ವಾಪಸಾತಿ ಕುರಿತ ಆದೇಶಕ್ಕೆ ಸಹಿಹಾಕಿದ್ದು, ಅದರಂತೆ ಅ.1ರಿಂದಲೇ ವಿಶ್ವದ ಮೂಲೆ ಮೂಲೆಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವ ಉದ್ಯೋಗಿಗಳಿಗೆ ಚೀನಾ ದೇಶದ ಬಾಗಿಲು ತೆರೆಯಲಿದೆ.
ಏನಿದು ಕೆ-ವೀಸಾ?:
ಸದ್ಯ ಚೀನಾ 12 ರೀತಿಯ ಸಾಮಾನ್ಯ ವೀಸಾಗಳನ್ನು ನೀಡುತ್ತಿದ್ದು, ಇವುಗಳಿಗೆ ಹೋಲಿಸಿದರೆ ಈ ಕೆ ವೀಸಾ ಹೆಚ್ಚು ಸೌಲಭ್ಯಗಳನ್ನು ಹೊಂದಿರಲಿದೆ. ‘ಕೆ ವೀಸಾ’ ಅಡಿ ಚೀನಾಗೆ ಪ್ರವೇಶಿಸುವವರು ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಮಕಾಲೀನ ಉದ್ಯಮ ಮತ್ತು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಈ ವೀಸಾ ಪಡೆಯಲು ಅರ್ಜಿದಾರರು ಚೀನಾ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಮತ್ತು ಷರತ್ತುಗಳನ್ನು ಪೂರೈಸಬೇಕಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇತ್ತೀಚೆಗಷ್ಟೇ ಎಚ್1ಬಿ ವೀಸಾಗಿದ್ದ ಶುಲ್ಕವನ್ನು 1.75 ಲಕ್ಷದಿಂದ 88 ಲಕ್ಷಕ್ಕೆ ಏರಿಸಿ ಶಾಕ್ ನೀಡಿದ್ದರು. ಅಮೆರಿಕದ ಈ ನೀತಿಯಿಂದ ಭಾರತೀಯ ಕಂಪನಿಗಳು ಹಾಗೂ ಉದ್ಯೋಗಿಗಳಿಗೇ ಬಹುದೊಡ್ಡ ಹೊಡೆತ ಬಿದ್ದಿದೆ.