ಕಳೆದ ವಾರ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ದಾರುಣವಾಗಿ ಸಾವನ್ನಪ್ಪಿದ ಗಾಯಕ ಜುಬಿನ್‌ ಗಾರ್ಗ್‌ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಇಲ್ಲಿನ ಕಾಮರೂಪ ಜಿಲ್ಲೆಯ ಕಾಮಾರಕುಚಿ ಎಂಬಲ್ಲಿ ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಈ ವೇಳೆ ಅವರ ಅಸಂಖ್ಯಾತ ಅಭಿಮಾನಿಗಳು ನೆರೆದು ಅಗಲಿದ ಗಾಯಕಗೆ ವಿದಾಯ ಹೇಳಿದರು.

- ಸಹೋದರಿ ಪಾಲ್ಮೆ ಅವರಿಂದ ಅಗ್ನಿಸ್ಪರ್ಶ

- ಸರ್ಕಾರಿ ಗೌರವದೊಂದಿಗೆ ಗಾಯಕಗೆ ವಿದಾಯ

- 21 ಸುತ್ತು ಗುಂಡು ಹಾರಿಸಿ ಗಾಯಕಗೆ ಗೌರವ

ಪಿಟಿಐ ಗುವಾಹಟಿ

ಕಳೆದ ವಾರ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ದಾರುಣವಾಗಿ ಸಾವನ್ನಪ್ಪಿದ ಗಾಯಕ ಜುಬಿನ್‌ ಗಾರ್ಗ್‌ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಇಲ್ಲಿನ ಕಾಮರೂಪ ಜಿಲ್ಲೆಯ ಕಾಮಾರಕುಚಿ ಎಂಬಲ್ಲಿ ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಈ ವೇಳೆ ಅವರ ಅಸಂಖ್ಯಾತ ಅಭಿಮಾನಿಗಳು ನೆರೆದು ಅಗಲಿದ ಗಾಯಕಗೆ ವಿದಾಯ ಹೇಳಿದರು.

ಜುಬೀನ್‌ರಿಗೆ ಮಕ್ಕಳಿರದ ಕಾರಣ ಅವರ ಸಹೋದರಿ ಪಾಲ್ಮೆ ಬೋರ್ಠಾಕೂರ್‌ ಹಾಗೂ ಸಂಗೀತ ಸಂಯೋಜಕ ರಾಹುಲ್‌ ಗೌತಮ್‌ ಅವರು ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಗೌರವಾರ್ಥ 21 ಸಲ ಗುಂಡು ಹಾರಿಸಲಾಯಿತು. ಜತೆಗೆ, ಜುಬಿನ್‌ ಅವರು ಹಾಡಿದ್ದ ‘ಮಾಯಾಬಿನಿ ರಾತಿರ್‌ ಬುಕು’ ಹಾಡನ್ನು ನೆರದಿದ್ದವರೆಲ್ಲಾ ಹಾಡಿದರು. ಈ ವೇಳೆ ಅವರ ಪತ್ನಿ ಗರೀಮಾ ಗಾರ್ಗ್‌ ಭಾವುಕರಾಗಿ ಕಂಬನಿಗರೆಯುತ್ತಿದ್ದರು. ಜುಬಿನ್‌ ಅವರು 2017ರಲ್ಲಿ ತಮ್ಮ ಜನ್ಮದಿನದಂದು ನೆಟ್ಟಿದ್ದ ಶ್ರೀಗಂಧ ಮರದ ರೆಂಬೆಯೊಂದನ್ನೂ ಅವರ ಪಾರ್ಥಿವ ಶರೀರದ ಮೇಲೆ ಇರಿಸಲಾಗಿತ್ತು.ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಸರ್ಬಾನಂದ್‌ ಸೋನೊವಾಲ್‌, ಕಿರಣ್‌ ರಿಜಿಜು ಅವರು ಉಪಸ್ಥಿತರಿದ್ದರು.

2ನೇ ಬಾರಿ ಪೋಸ್ಟ್‌ ಮಾರ್ಟಂ:ಸೆ.19ರಂದು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್‌ ಮಾಡುತ್ತಿದ್ದ ವೇಳೆ ಲೈಫ್‌ ಜ್ಯಾಕೆಟ್‌ ಧರಿಸಿರದ ಜುಬಿನ್‌ ಸಾವನ್ನಪ್ಪಿದ್ದರು. ಸಿಂಗಾಪುರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಪ್ರಕಾರ ನೀರಿನಲ್ಲಿ ಕೊಚ್ಚಿಹೋಗಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಇದೀಗ ಸಾರ್ವಜನಿಕ ಆಗ್ರಹದ ಮೇರೆಗೆ ಅಂತ್ಯಸಂಸ್ಕಾರಕ್ಕೂ ಮುನ್ನ ಗುವಾಹಟಿಯಲ್ಲಿ 2ನೇ ಬಾರಿ ಪೋಸ್ಟ್‌ ಮಾರ್ಟಂ ನಡೆಸಲಾಯಿತು.

ಸೋಮವಾರ ನಡೆದ ಇವರ ಅಂತಿಮ ದರ್ಶನದ ವೇಳೆ ಸಾವಿರಾರು ಜನ ನೆರೆದಿದ್ದು, ವಿಶ್ವದಲ್ಲಿ ಅತಿಹೆಚ್ಚು ಜನ ಸೇರಿದ ಅಂತಿಮ ದರ್ಶನದಗಳ ಪೈಕಿ 4ನೆಯದ್ದು ಎನಿಸಿಕೊಂಡಿತ್ತು.