ಸಾರಾಂಶ
2023ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಬಹುಭಾಷಾ ನಟ ಮೋಹನ್ ಲಾಲ್ ಅವರಿಗೆ ಚಿತ್ರರಂಗದ ಮೇರು ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
- ಶಾರುಖ್, ಮ್ಯಾಸ್ಸೆ ಶ್ರೇಷ್ಠ ನಟರು
- ರಾಣಿ ಮುಖರ್ಜಿ ಅತ್ಯುತ್ತಮ ನಟಿ- ರಾಷ್ಟ್ರೀಯ ಸಿನಿ ಪ್ರಶಸ್ತಿ ಪ್ರದಾನನವದೆಹಲಿ: 2023ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಬಹುಭಾಷಾ ನಟ ಮೋಹನ್ ಲಾಲ್ ಅವರಿಗೆ ಚಿತ್ರರಂಗದ ಮೇರು ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ನಟ ಶಾರುಖ್ ಖಾನ್ ಅವರಿಗೆ ‘ಜವಾನ್’ ಚಿತ್ರ ಹಾಗೂ ವಿಕ್ರಾಂತ್ ಮ್ಯಾಸ್ಸೆ ಅವರಿಗೆ ‘ಟ್ವೆಲ್ತ್ ಫೇಲ್’ ಚಿತ್ರದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು. ಜತೆಗೆ, ‘ಮಿಸ್ಟ್ರೆಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರಕ್ಕಾಗಿ ರಾಣಿ ಮುಖರ್ಜಿ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.ಇದು ಈವರೆಗೆ 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಶಾರುಖ್ ಅವರಿಗೆ ಲಭಿಸಿರುವ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿದೆ.ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಮೇಘನಾ ಗುಲ್ಜಾರ್ ಅವರ ‘ಸ್ಯಾಮ್ ಬಹದ್ದೂರ್’ ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಇದು ವೇಷಭೂಷಣ ಮತ್ತು ಮೇಕಪ್ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
----ಮೋಹನ್‌ಲಾಲ್‌ಗೆ ಭಾರೀ ಕರತಾಡನ!ಬರೋಬ್ಬರಿ 5 ದಶಕಗಳಿಂದ ಭಾರತದ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಬಹುಭಾಷಾ ನಟ ಮೋಹನ್ ಲಾಲ್ ಅವರಿಗೆ ದೇಶದ ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಈ ವೇಳೆ ನೆರೆದಿದ್ದವರೆಲ್ಲ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ನಟನಿಗೆ ಗೌರವ ಸೂಚಿಸಿದರು. ಪ್ರಶಸ್ತಿ ಪ್ರದಾನದ ವೇಳೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಅವರು ಮೋಹನ್‌ಲಾಲ್ ಅವರನ್ನು, ‘ಲಾಲೆಟ್ಟನ್’ ಎಂದು ಕರೆದದ್ದು ವಿಶೇಷವಾಗಿತ್ತು. ಮೋಹನ್‌ಲಾಲ್ ಕನ್ನಡದ ‘ಲವ್’ ಮತ್ತು ‘ಮೈತ್ರಿ’ ಚಿತ್ರಗಳಲ್ಲಿ ನಟಿಸಿದ್ದಾರೆ.