ದೇಶದಲ್ಲಿರುವ ವಕೀಲರಲ್ಲಿ ಶೇ.30-40ರಷ್ಟು ಮಂದಿ ನಕಲಿಯಾಗಿದ್ದು, ಫೇಕ್ ಪ್ರಮಾಣ ಪತ್ರವನ್ನಿಟ್ಟುಕೊಂಡು ಕೋರ್ಟ್‌ಗಳಲ್ಲಿ ವಾದ ಮಾಡಲು ಬರುತ್ತಿದ್ದಾರೆ ಎಂದು ಬಾರ್ ಕೌನ್ಸಿಲ್‌ನ ಅಧ್ಯಕ್ಷ, ಹಿರಿಯ ವಕೀಲ ಮಮನ್ ಕುಮಾರ್ ಮಿಶ್ರಾ ಸ್ಫೋಟಕ ಮಾಹಿತಿ ನೀಡಿದ್ದಾರೆ.
ನವದೆಹಲಿ: ದೇಶದಲ್ಲಿರುವ ವಕೀಲರಲ್ಲಿ ಶೇ.30-40ರಷ್ಟು ಮಂದಿ ನಕಲಿಯಾಗಿದ್ದು, ಫೇಕ್ ಪ್ರಮಾಣ ಪತ್ರವನ್ನಿಟ್ಟುಕೊಂಡು ಕೋರ್ಟ್‌ಗಳಲ್ಲಿ ವಾದ ಮಾಡಲು ಬರುತ್ತಿದ್ದಾರೆ ಎಂದು ಬಾರ್ ಕೌನ್ಸಿಲ್‌ನ ಅಧ್ಯಕ್ಷ, ಹಿರಿಯ ವಕೀಲ ಮಮನ್ ಕುಮಾರ್ ಮಿಶ್ರಾ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಕರಣದ ವಿಚಾರಣೆಯೊಂದರ ವೇಳೆ ‘ಹಲವು ವಂಚಕರು ಕಪ್ಪುಕೋಟುಧಾರಿಗಳಾಗಿದ್ದಾರೆ. ಇವರೆಲ್ಲಾ ಜಿರಳೆ ಮತ್ತು ಪರಾವಲಂಬಿಗಳು’ ಎಂದಿದ್ದರು.
ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿ ದೇಶವ್ಯಾಪಿ ‘ನ್ಯಾಯಾಂಗ ಮತ್ತು ದೇಶದ ರಾಜಕೀಯ ವ್ಯವಸ್ಥೆಯ ವಿಡಂಬನೆ ಮತ್ತು ಟೀಕಿಸಲು ‘ಕಾಕ್ರೋಚ್ ಜನತಾ ಪಾರ್ಟಿ’ ಅಭಿಯಾನ ಆರಂಭವಾಗಿತ್ತು. ಅದರ ಬೆನ್ನಲ್ಲೇ ಸಿಜೆಐ ಹೇಳಿಕೆಗೆ ಕಾರಣವಾದ ಅಂಶಗಳ ಕುರಿತು ಮನನ್ ಕುಮಾರ್ ಮಿಶ್ರಾ ಬೆಳಕು ಚೆಲ್ಲಿದ್ದಾರೆ.
ಪದವಿ ನಕಲಿ:
ಸುದ್ದಿಸಂಸ್ಥೆಯೊಂದರ ಜೊತೆಗೆ ಮಾತನಾಡಿದ ಮಿಶ್ರಾ, ‘ನ್ಯಾಯಾಲಯಗಳಲ್ಲಿ ಕಪ್ಪು ಕೋಟು ಮತ್ತು ಬ್ಯಾಂಡ್‌ಗಳನ್ನು ಧರಿಸಿ ಓಡಾಡುವ ಸುಮಾರು ಶೇ.35-40ರಷ್ಟು ಜನರು ನಕಲಿ ಎಂಬುದು ಬಾರ್ ಕೌನ್ಸಿಲ್‌ಗೆ ತಿಳಿದಿದೆ. ಅವರ ಪದವಿಗಳು ನಕಲಿಯಾಗಿದ್ದು, ಅಕ್ರಮವಾಗಿ ತಯಾರಿಸಿಕೊಂಡದ್ದು ಅಥವಾ ಎಲ್ಲೋ ಖರೀದಿಸಿದ್ದಾಗಿದೆ. ಅದನ್ನೇ ತೋರಿಸಿಕೊಂಡು ಅವರು ಕೋರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಸಿಜೆಐ ಅವರ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದ್ದಾರೆ.
ಪತ್ತೆ ಹೇಗೆ?:
ಪದವಿ ಪ್ರಮಾಣ ಪತ್ರಗಳ ಪರಿಶೀಲನೆಗೆ ಬಾರ್ ಕೌನ್ಸಿಲ್ ಮುಂದಾಗ ಶೇ.35-40ರಷ್ಟು ವಕೀಲರು ಪರಿಶೀಲನಾ ಫಾರ್ಮ್‌ಗಳನ್ನೇ ತುಂಬಿರಲಿಲ್ಲ. ಇದು ಅವರೆಲ್ಲಾ ನಕಲಿ ಪದವಿ ಹೊಂದಿರುವ ಶಂಕೆಗೆ ಕಾರಣವಾಯ್ತು ಎಂದು ಮಿಶ್ರಾ ಹೇಳಿದ್ದಾರೆ.
ಹೇಳಿಕೆ ಹಿನ್ನೆಲೆ:
‘ಇತ್ತೀಚೆಗೆ ಸಿಜೆಐ ಅವರು ನೀಡಿದ ಜಿರಳೆ ಹೇಳಿಕೆ ಕೂಡಾ ನಕಲಿ ಪ್ರಮಾಣ ಪತ್ರ ಇಟ್ಟುಕೊಂಡು ವಕೀಲ ವೃತ್ತಿಗೆ ಸೇರಿದವರ ಬಗ್ಗೆಯೇ ಆಗಿತ್ತು. ಅವರ ಹೇಳಿಕೆ ಇಂಥವರನ್ನು ಉದ್ದೇಶಿಸಿಯೇ ಆಗಿತ್ತು. ಆದರೆ ಅವರು ಅಂದು ಹೇಳಿಕೆ ನೀಡಿದ ಸನ್ನಿವೇಶದ ಹಿನ್ನೆಲೆ ಬೇರೆ ಆಗಿತ್ತು’ ಎಂದು ಮಿಶ್ರಾ ಹೇಳಿದ್ದಾರೆ.
ಸಿಜೆಐ ಜಿರಳೆ ಹೇಳಿಕೆ ಹಿನ್ನೆಲೆ ಏನಿತ್ತು?
ತಮಗೆ ಹಿರಿಯ ವಕೀಲ ಎಂಬ ಮಾನ್ಯತೆ ನೀಡಲು ದೆಹಲಿ ಹೈಕೋರ್ಟ್‌ಗೆ ಸೂಚಿಸಬೇಕು ಎಂದು ವಕೀಲರೊಬ್ಬರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪೀಠದ ಭಾಗವಾಗಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮಾತನಾಡಿ, ‘ಹಲವು ವಕೀಲರು ಹೊಂದಿರುವ ಪ್ರಮಾಣ ಪತ್ರದ ಬಗ್ಗೆಯೇ ನನಗೆ ಅನುಮಾನವಿದೆ. ಇವರ ವಿರುದ್ಧ ಬಾರ್ ಕೌನ್ಸಿಲ್ ಕ್ರಮ ಕೈಗೊಳ್ಳಬೇಕೆಂದು ನಾನು ಬಯಸುವುದಿಲ್ಲ. ಇಂಥ ವಕೀಲರ ಪ್ರಮಾಣಪತ್ರ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ’ ಎಂದಿದ್ದರು.
ಜೊತೆಗೆ, ‘ಸಮಾಜದಲ್ಲಿನ ನಿರುದ್ಯೋಗಿ ಯುವಕರ ಪೈಕಿ ಕಾಕ್ರೋಚ್‌ನಂಥ ಒಂದು ವರ್ಗ ಕ್ರಿಯಾಶೀಲತೆ ಹೆಸರಿನಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆ’ ಎಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾದ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು ನಾನು ನೀಡಿದ್ದು ನಕಲಿ ವಿದ್ಯಾರ್ಹತೆ ಪ್ರಮಾಣಪತ್ರ ಇಟ್ಟುಕೊಂಡು ಅದರಲ್ಲೂ ವಿಶೇಷವಾಗಿ ಕಾನೂನು ವಲಯದಲ್ಲಿ ವೃತ್ತಿಗೆ ಪ್ರವೇಶ ಮಾಡುವವರ ಬಗ್ಗೆ ಆಗಿತ್ತೇ ಹೊರತೂ ದೇಶದ ಯುವಸಮೂಹದ ಬಗ್ಗೆ ಅಲ್ಲ’ ಎಂದಿದ್ದರು.
