ಹೊಸದಾಗಿ 8ರಿಂದ 9 ನೈಸರ್ಗಿಕ ಅನಿಲ ಆಧರಿತ ಯೂರಿಯಾ ಘಟಕಗಳನ್ನು ಸ್ಥಾಪಿಸುವ ಮೂಲಕ 1 ಕೋಟಿ ಟನ್ ಹೆಚ್ಚುವರಿ ಯೂರಿಯಾ ಉತ್ಪಾದನೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ನವದೆಹಲಿ : ಹೊಸದಾಗಿ 8ರಿಂದ 9 ನೈಸರ್ಗಿಕ ಅನಿಲ ಆಧರಿತ ಯೂರಿಯಾ ಘಟಕಗಳನ್ನು ಸ್ಥಾಪಿಸುವ ಮೂಲಕ 1 ಕೋಟಿ ಟನ್ ಹೆಚ್ಚುವರಿ ಯೂರಿಯಾ ಉತ್ಪಾದನೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಇದಕ್ಕಾಗಿ ಯೂರಿಯಾಕ್ಕಾಗಿ ರಾಷ್ಟ್ರೀಯ ಹೂಡಿಕೆ ನೀತಿ 2026 ಅನ್ನು ಘೋಷಿಸಿದ್ದು, ಯೂರಿಯಾ ಉತ್ಪಾದನೆಯಲ್ಲಿ ದೇಶವನ್ನು ಆತ್ಮನಿರ್ಭರವಾಗಿಸಲು ಕ್ರಮ ಕೈಗೊಂಡಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ
ಈ ಹೊಸ ನೀತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದು 2012ರ ಹೊಸ ಹೂಡಿಕೆ ನೀತಿಯ (ಎನ್‌ಐಪಿ) ಪರಿಷ್ಕೃತ ವಿಸ್ತರಣೆಯಾಗಿದ್ದು, ದೇಶದಲ್ಲಿ ಅನಿಲ ಆಧರಿತ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹೊಸ ಹೂಡಿಕೆಗಳನ್ನು ಉತ್ತೇಜಿಸಲಿದೆ.
2012ರ ಎನ್‌ಐಪಿ ಅಡಿಯಲ್ಲಿ, 6 ಹೊಸ ಯೂರಿಯಾ ಘಟಕ
2012ರ ಎನ್‌ಐಪಿ ಅಡಿಯಲ್ಲಿ, 6 ಹೊಸ ಯೂರಿಯಾ ಘಟಕಗಳನ್ನು ಸ್ಥಾಪಿಸಲಾಗಿದೆ.ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸರಣ ಸಚಿವ ಅಶ್ವಿನಿ ವೈಷ್ಣವ್, ‘ಯೂರಿಯಾ ಬೇಡಿಕೆ ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚುತ್ತಿದೆ.
ಸದ್ಯ ಭಾರತದಲ್ಲಿ ಯೂರಿಯಾ ಉತ್ಪಾದನೆ 3 ಕೋಟಿ ಟನ್‌ನಷ್ಟಿದೆ. ಆದರೆ ಬೇಡಿಕೆ 4 ಕೋಟಿ ಟನ್ ಆಗಿದೆ. ಈ 1 ಕೋಟಿ ಟನ್ ಕೊರತೆ ನೀಗಿಸಲು ಹೆಚ್ಚುವರಿ ಉತ್ಪಾದನೆಯ ಅಗತ್ಯವಿದೆ. ಹೊಸದಾಗಿ ಅನುಮೋದನೆಗೊಂಡ ನೀತಿಯು 1 ಕೋಟಿ ಟನ್ ಹೆಚ್ಚುವರಿ ಯೂರಿಯಾ ಸಾಮರ್ಥ್ಯವನ್ನು ಸೃಷ್ಟಿಸುವ ಗುರಿ ಹೊಂದಿದೆ. ಈ ನೀತಿಯ ಅಡಿಯಲ್ಲಿ ಖಾಸಗಿ, ಸರ್ಕಾರಿ ಮತ್ತು ಸಹಕಾರಿ ಯೋಜನೆಗಳಿಗೆ ಪ್ರೋತ್ಸಾಹಧನ ಒಂದೇ ಆಗಿರುತ್ತದೆ’ ಎಂದು ತಿಳಿಸಿದ್ದಾರೆ.