ವಕೀರನ್ನು ಸೋಸಿಯಲ್ ಎಂಜಿನಿಯರ್ ಎಂದು ಕರೆಯುತ್ತಾರೆ. ಸಮಾಜ ಕಟ್ಟುವವರು ನಾವು. ಸಮಾಜದಲ್ಲಾಗುವ ಒಳ್ಳೆಯದು, ಕೆಟ್ಟದರಲ್ಲಿ ವಕೀಲರ ಪಾತ್ರವಿದೆ. ಕಿರಿಯರಿಗೆ ಹಿರಿಯರು ಒಳ್ಳೆಯದನ್ನು ಹಂಚದಿದ್ದರೆ, ಕಾನೂನು ವ್ಯಾಪ್ತಿ ಯಾವುದು ಸರಿ ಇಲ್ಲದೆ ಇಡೀ ಸಮಾಜವೇ ಹಾಳಾಗುತ್ತದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಉತ್ತಮ ಸಮಾಜ ಕಟ್ಟುವಲ್ಲಿ ವಕೀಲರು ಪಾತ್ರ ಮಹತ್ವದ್ದಾಗಿದೆ. ಹಿರಿಯ ವಕೀಲರು ಕಿರಿಯರಿಗೆ ಮಾರ್ಗದರ್ಶಕರಾಗಿ ಒಳ್ಳೆಯ ವಿಚಾರ ಹಂಚಿಕೊಂಡು ಮುನ್ನಡೆದರೆ ಮಾತ್ರ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಾಮೂರ್ತಿ ಇ.ಎಸ್.ಇಂದ್ರೇಶ್ ಹೇಳಿದರು.ಪಟ್ಟಣದ ಎಂಎಂ ಪಾರ್ಟಿ ಹಾಲ್‌ನಲ್ಲಿ ಅಲಯನ್ಸ್ ಕ್ಲಬ್ ಆಫ್ ಮದ್ದೂರು ಅಡ್ವಕೇಟ್ಸ್ ವತಿಯಿಂದ ವಕೀಲರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ವಕೀಲ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.ವಕೀರನ್ನು ಸೋಸಿಯಲ್ ಎಂಜಿನಿಯರ್ ಎಂದು ಕರೆಯುತ್ತಾರೆ. ಸಮಾಜ ಕಟ್ಟುವವರು ನಾವು. ಸಮಾಜದಲ್ಲಾಗುವ ಒಳ್ಳೆಯದು, ಕೆಟ್ಟದರಲ್ಲಿ ವಕೀಲರ ಪಾತ್ರವಿದೆ. ಕಿರಿಯರಿಗೆ ಹಿರಿಯರು ಒಳ್ಳೆಯದನ್ನು ಹಂಚದಿದ್ದರೆ, ಕಾನೂನು ವ್ಯಾಪ್ತಿ ಯಾವುದು ಸರಿ ಇಲ್ಲದೆ ಇಡೀ ಸಮಾಜವೇ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ವಕೀಲರು ಕೇವಲ ಮರವಾಗದೇ ಕಿರಿಯರಿಗೆ ಮಾರ್ಗದರ್ಶಕರಾಗಿ ಬೆಳೆಸುವ ಮೂಲಕ ದೊಡ್ಡ ಮರವಾಗಿ ನೆರಳಾಗಬೇಕು. ಕಿರಿಯರು ವಕೀಲರು ಕೂಡ ಹಿರಿಯರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ದೇಶಕ್ಕೆ ಉತ್ತಮ ಸಂವಿಧಾನ ರಚನೆಯಾಗಲು ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಕಾನೂನು ಪರಿಣಿತರ ಸೇವೆಯೇ ಕಾರಣವಾಗಿದೆ. ಆದರೆ, ಬಹುತೇಕ ಕಿರಿಯ ವಕೀಲರಿಗೆ ಕಾರ್ಯವಿಧಾನವೇ ತಿಳಿದಿಲ್ಲ. ಆದ್ದರಿಂದ 4 ರಿಂದ 5 ವರ್ಷಗಳ ಕಾಲ ಹಿರಿಯ ವಕೀಲರೊಂದಿಗೆ ಕೆಲಸ ಮಾಡಿದಾಗ ಮಾತ್ರ ಕಾನೂನು ಪರಿಣಿತಿ ಹೊಂದಲು ಸಾಧ್ಯ ಎಂದರು.ವಕೀಲ ವೃತ್ತಿ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತಾಗಿದೆ. ಬಹುತೇಕ ವಕೀಲರ ವೃತ್ತಿ ತನ್ನ ಕಕ್ಷಿಧಾರರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯದಲ್ಲಿ ತಮ್ಮ ಜೀವನ ಕಳೆಯುತ್ತಾನೆ. ಇದರಿಂದ ತನ್ನ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ತನ್ನ ವೃತ್ತಿ ವೇಳೆ ಕಕ್ಷಿದಾರನಿಗೆ ಸಿಕ್ಕ ಜಯದಿಂದ ಮಾತ್ರವೇ ಆ ವಕೀಲನಿಗೆ ಸಿಗುವ ನೆಮ್ಮದಿ ಬೇರೆ ಯಾರಿಗೂ ಸಿಗುವುದಿಲ್ಲ ಎಂದರು.
ಯಾರೇ ಆಗಲಿ ಕಾನೂನು ಗೌರವಿಸಬೇಕು. ಈ ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ಅದರಲ್ಲಿ ನಾವು ಸ್ವಲ್ಪವನ್ನಾದರೂ ಇದಷ್ಟು ಪರಿಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ವಾಪಸ್ ನೀಡಬೇಕು. ಯಾವುದೇ ಪ್ರಕರಣ ಬಂದರೂ ಆ ಪ್ರಕರಣದಿಂದ ಸಮಾಜಕ್ಕೆ ಧಕ್ಕೆ ಉಂಟಾಗುತ್ತದೆ ಎಂದರೆ ಅದನ್ನು ತಿರಸ್ಕರಿಸುವ ಮನೋಭಾವ ವಕೀಲರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾಜದಲ್ಲಿ ಯಾರನ್ನು ಕೀಳಾಗಿ ಕಾಣಬಾರದು. ಯಾರು ಯಾವತ್ತು ಏನಾಗುತ್ತಾನೆ ಎಂಬುದು ಗೊತ್ತಾಗಲ್ಲ. ಕೆಟ್ಟವನಾದವವನು ಮುಂದೆ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾನೆ. ಆದ್ದರಿಂದ ಪ್ರತಿಯೊಬ್ಬರನ್ನು ಎಲ್ಲರನ್ನೂ ಪ್ರೀತಿಸಬೇಕು. ಅವನು ಕೆಟ್ಟವನು ಎಂದು ದೂಷಿಸುವುದು ಸರಿಯಲ್ಲ ಎಂದರು.
ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಎ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಮು, 2ನೇ ಉಪರಾಜ್ಯಪಾಲ ಕೆ.ಚಂದ್ರಶೇಖರ್ ಮಾತನಾಡಿದರು. ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಾಜಿ ನಿರ್ದೇಶಕ ಜಿ.ಪಿ.ದಿವಾಕರ್, ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಎಸ್.ನಾಗರಾಜು, ಖಜಾಂಚಿ ಆರ್.ಮಹೇಶ್, ಪ್ರಾಂತೀಯ ಅಧ್ಯಕ್ಷ ಟಿ.ನಾಗರಾಜು, ಕಾರ್ಯದರ್ಶಿ ಎಂ.ಮಹೇಶ್ , ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಹಿರಿಯ ವಕೀಲರಾದ ಎಚ್.ವಿ.ಬಾಲರಾಜು, ಬಿ.ಅಪ್ಪಾಜಿಗೌಡ, ವಿ.ಟಿ.ರವಿಕುಮಾರ್ ಹಲವರು ಇದ್ದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ವಕೀಲರಾದ ಬಿ.ಮಾಯಣ್ಣ, ಎಚ್.ಕೆ.ಸತ್ಯಮೂರ್ತಿ, ಎನ್.ಬಿ.ಗುರುಸ್ವಾಮಿ, ಚನ್ನೇಗೌಡ, ಎನ್ .ವಿನಯಪ್ರಸಾದ್, ಎಂ.ಕಮಲಮ್ಮ, ಎನ್.ಆರ್.ರವಿಶಂಕರ್ ಅವರಿಗೆ ಜಿಲ್ಲಾ ಮಟ್ಟದ ವಕೀಲರ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.