--

ಜೋಶಿ ಇಲಾಖೆ ಏಕೆ ನಂ.1?ಪ್ರಹ್ಲಾದ್‌ ಜೋಶಿ ಅವರ ಗ್ರಾಹಕರ ವ್ಯವಹಾರಗಳ ಇಲಾಖೆಯು ಗ್ರಾಹಕರ ಕುಂದು-ಕೊರತೆ ಪರಿಹಾರ ಮತ್ತು ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಎದುರಾಗಿರುವ ಬಿಕ್ಕಟ್ಟು ನಿಭಾಯಿಸುವ ವಿಚಾರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇಲಾಖೆ ಎಂಬ ಗೌರವಕ್ಕೆ ಪಾತ್ರವಾಗಿದೆ. ವಿದ್ಯುತ್ ಪರಿಸ್ಥಿತಿ ನಿರ್ವಹಣೆ, ಆರೋಗ್ಯ ನಿರ್ವಹಣೆಗಾಗಿ ಕಲ್ಲಿದ್ದಲು, ವಿದ್ಯುತ್‌ ಹಾಗೂ ಆರೋಗ್ಯ ಸಚಿವಾಲಯಗಳು ನಂತರದ ಸ್ಥಾನ ಪಡೆದಿವೆ.

--

ಯಾವ್ಯಾವ ಇಲಾಖೆ ಅತ್ಯುತ್ತಮ?- ಗ್ರಾಹಕರ ವ್ಯವಹಾರಗಳು, ಕಲ್ಲಿದ್ದಲು, ವಿದ್ಯುತ್‌, ಆರೋಗ್ಯ ಇಲಾಖೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮೌಲ್ಯಮಾಪನ ಮಾಡಿ ರ್‍ಯಾಂಕಿಂಗ್‌ ನೀಡಿದ್ದು, ಇದರ ಆಧಾರದ ಮೇಲೆ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಗ್ರಾಹಕರ ವ್ಯವಹಾರಗಳ ಸಚಿವಾಲಯವು ನಂ.1 ಸ್ಥಾನ ಪಡೆದಿದೆ.


ನಂತರದ 3 ಸ್ಥಾನಗಳು ಜಿ.ಕಿಶನ್ ರೆಡ್ಡಿ ಅವರ ಕಲ್ಲಿದ್ದಲು, ಮನೋಹರ್‌ ಲಾಲ್‌ ಖಟ್ಟರ್‌ ಅವರ ವಿದ್ಯುತ್ ಮತ್ತು ಜೆ.ಪಿ.ನಡ್ಡಾ ಅವರ ಆರೋಗ್ಯ ಇಲಾಖೆಯ ಪಾಲಾಗಿವೆ. ಈ 4 ಸಚಿವಾಲಯಗಳು ಟಾಪ್-4 ಅತ್ಯುತ್ತಮ ಸಾಧನೆ ಮಾಡಿದ ಇಲಾಖೆಗಳಾಗಿ ಹೊರಹೊಮ್ಮಿವೆ.

ಕಡತಗಳ ವಿಲೇವಾರಿ, ಸಾರ್ವಜನಿಕ ಕುಂದು-ಕೊರತೆ ಪರಿಹಾರ ಸೇರಿ ವಿವಿಧ ಮಾನದಂಡಗಳ ಆಧಾರದಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ. 3 ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿಮಂಡಲದ ಸಭೆಯಲ್ಲಿ ಇದನ್ನು ಪ್ರಕಟಿಸಲಾಯಿತು ಎಂದು ‘ಹಿಂದುಸ್ತಾನ್ ಟೈಮ್ಸ್‌’ ವರದಿ ಮಾಡಿದೆ. ಆದರೆ ಇತರ ಇಲಾಖೆಗಳ ಸಾಧನೆ ಏನು? ಅವುಗಳ ರ್‍ಯಾಂಕಿಂಗ್ ಏನು ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ರೀತಿಯ ಮೌಲ್ಯಾಂಕನದ ಮೂಲ ಉದ್ದೇಶ- ಇಲಾಖೆಗಳು ಉತ್ತಮ ಸಾಧನೆ ತೋರುವುದು ಮತ್ತು ಎಲ್ಲಿ ಎಡವಿದ್ದೇವೆ ಎಂಬುದನ್ನು ಗುರುತಿಸಿ ಸುಧಾರಿಸಿಕೊಳ್ಳುವುದೇ ಆಗಿದೆ ಎಂದು ಸಚಿವ ಸಂಪುಟ ಕಾರ್ಯದರ್ಶಿ ಟಿ.ವಿ.ಸೋಮನಾಥನ್‌ ತಿಳಿಸಿದ್ದಾರೆ.