ಧಾರವಾಡ: ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ಹೋರಾಟ ಹಂತ-ಹಂತವಾಗಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯಪಾಲರಿಗೆ ಪತ್ರ ಬರೆದು ಹೋರಾಟಗಾರರ ನಿಯೋಗದೊಂದಿಗೆ ಚರ್ಚಿಸಲು ಸಮಯ ಕೇಳಿದ್ದಾರೆ.

ಮೇ 13ರಂದು ರಾಜ್ಯಪಾಲರಿಗೆ ಬರೆದಿರುವ ಪತ್ರದ ಜತೆಗೆ ರಾಜ್ಯಪಾಲರ ಕಚೇರಿಯಿಂದ ಸಮಯ ನಿಗದಿ ಮಾಡಿದ ಕೂಡಲೇ ಹೋರಾಟಗಾರರ ನಿಯೋಗವನ್ನು ರಾಜ್ಯಪಾಲರ ಬಳಿ ಕರೆದುಕೊಂಡು ಹೋಗುವುದಾಗಿ ಜೋಶಿ ನೀಡಿದ ಪತ್ರವನ್ನು ಶನಿವಾರ ಪಾಲಿಕೆ ಕಚೇರಿ ಬಳಿ ಎರಡು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಕುಳಿತಿರುವ ಹೋರಾಟಗಾರರಿಗೆ ಮಾಜಿ ಮೇಯರ್‌ ಶಿವು ಹಿರೇಮಠ ಹಾಗೂ ನ್ಯಾಯವಾದಿ ಅರುಣ ಜೋಶಿ ನೀಡಿದರು.

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ, ಬೃಹತ್‌ ಮಹಾನಗರ ಪಾಲಿಕೆ ಮಾಡುವುದಾಗಿ ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಆಗಿತ್ತು. ಈ ಹಿನ್ನೆಲೆಯಲ್ಲಿ ಶುರುವಾದ ಹೋರಾಟ ಇದೀಗ ಅನಿರ್ದಿಷ್ಟಾವಧಿಗೆ ಬಂದು ತಲುಪಿದೆ. ಜತೆಗೆ ಬಿಜೆಪಿ ಮುಖಂಡರೇ ಇದಕ್ಕೆ ಕಾರಣವೆಂದು ಹೋರಾಟಗಾರರ ಪ್ರಹ್ಲಾದ ಜೋಶಿ ಅವರಿಗೂ ಮನವಿ ಸಲ್ಲಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಈ ಹಿನ್ನೆಲೆಯಲ್ಲಿ ಜೋಶಿ ಅವರು ರಾಜ್ಯಪಾಲರಿಗೆ ಚರ್ಚಿಸಲು ಸಮಯ ಕೋರಿದ್ದಾರೆ. ಪ್ರತ್ಯೇಕ ಪಾಲಿಕೆಯ ಹೋರಾಟಕ್ಕೆ ಬೆಂಬಲವಾಗಿಯೇ ನಾವು ಸಹ ಬಂದಿದ್ದು, ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಲು ಬಂದಿದ್ದೇವೆ ಎಂಬ ಭಾವನೆ ಬೇಡ. ಕೇಂದ್ರ ಸಚಿವರ ಸೂಚನೆಯಂತೆ ಅವರು ರಾಜ್ಯಪಾಲರಿಗೆ ಬರೆದ ಪತ್ರ ತಮಗೆ ತಲುಪಿಸಿದ್ದು ಬೇಗನೆ ರಾಜ್ಯಪಾಲರು ಸಮಯ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಅರುಣ ಜೋಶಿ ಹೋರಾಟಗಾರರಿಗೆ ತಿಳಿಸಿದರು.

2ನೇ ದಿನಕ್ಕೆ ಹೋರಾಟ:


ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ರಾಜಕೀಯದಿಂದಲೇ ಅನುಮತಿ ನೀಡಲು ಮೀನಾಮೇಷ ಎಣಿಸಲಾಗುತಿದೆ ಎಂದು ಪಾಲಿಕೆ ಕಚೇರಿ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಭಜನೆ ಮಾಡುವ ಮೂಲಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವರ ಪತ್ರ ಹಾಗೂ ತಮ್ಮ ಹೋರಾಟಕ್ಕೆ ಜಯ ಸಿಗಲು ತಾವು ಚರ್ಚಿಸಲು ಬೇಗನೆ ಸ್ಪಂದಿಸಬೇಕು. ಪ್ರತ್ಯೇಕ ಮಹಾನಗರ ಪಾಲಿಕೆ ಶಿಫಾರಸಿಗೆ ಕೂಡಲೇ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ವೆಂಕಟೇಶ ಮಾಚಕನೂರ, ಗುರುರಾಜ ಹುಣಸೀಮರದ, ಮನೋಜ ಪಾಟೀಲ, ಮಹಾದೇವ ಹೊರಟ್ಟಿ, ಅರವಿಂದ ಏಗನಗೌಡರ, ವೀರಣ್ಣ ಮತ್ತಿಕಟ್ಟಿ, ವಸಂತ ಅರ್ಕಾಚಾರಿ, ಈಶ್ವರ ಶಿವಳ್ಳಿ ಸೇರಿದಂತೆ ನೂರಾರು ಹೋರಾಟಗಾರರು ಇದ್ದರು.