ಹುಬ್ಬಳ್ಳಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ನೇಮಕಾತಿಗೆ ಆದ್ಯತೆ ನೀಡಲಾಗುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಉದ್ಯೋಗ ಪರ್ವ ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಇಲ್ಲಿನ ಕೇಶ್ವಾಪುರದ ಹುಬ್ಬಳ್ಳಿ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ 19ನೇ ರೋಜಗಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರವು ರೈಲ್ವೆ, ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳ ಖಾಲಿಯಿರುವ ಹುದ್ದೆಗಳ ಭರ್ತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯವಿಲ್ಲದ ಹುದ್ದೆಗಳನ್ನು ರದ್ದುಗೊಳಿಸುವಂತೆ ಪ್ರಧಾನಿಗಳು ಸೂಚನೆ ನೀಡಿದ್ದಾರೆ. ದೇಶಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ರೋಜಗಾರ ಮೇಳಗಳು ನಡೆಯುತ್ತಿದ್ದು, ಸುಮಾರು 12 ಲಕ್ಷ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ಉಂಟಾದರೂ ಭಾರತ ಅದನ್ನು ಸಮರ್ಪಕವಾಗಿ ನಿರ್ವಹಿಸಿದೆ. ಭಾರತ ಇಂದು ಜಗತ್ತಿನ ಮೂರನೇ ಅತಿ ದೊಡ್ಡ ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದೆ. ರೈಲ್ವೆಯಲ್ಲಿ ವಿದ್ಯುಧೀಕರಣದ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ದೇಶದಲ್ಲಿ ಮುಂದಿನ 350 ವರ್ಷಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಹೆಚ್ಚಿನ ರೈಲುಗಳು ಡೀಸೆಲ್ ಆಧಾರಿತವಾಗಿದ್ದವು. ಆದರೆ, ಈಗ ಶೇ. 90ರಷ್ಟು ರೈಲ್ವೆ ಮಾರ್ಗಗಳು ವಿದ್ಯುದೀಕರಣಗೊಂಡಿದ್ದು, ಇದರಿಂದ ಕೋಟ್ಯಂತರ ರುಪಾಯಿ ಮೌಲ್ಯದ ಡೀಸೆಲ್ ಉಳಿತಾಯವಾಗಿದೆ ಎಂದರು.ಸೌಜನ್ಯದಿಂದ ವರ್ತಿಸಿ:
ಹೊಸದಾಗಿ ನೇಮಕವಾಗುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರಕ್ಕೆ ಮುಂದಾಗಬೇಕು. ಅಂದಾಗ ಮಾತ್ರ ನಿಮ್ಮ ಸಾರ್ವಜನಿಕ ಕ್ಷೇತ್ರದ ಸೇವೆ ಸಾರ್ಥಕವಾಗಲು ಸಾಧ್ಯ. ಪ್ರತಿಯೊಬ್ಬ ನೌಕರನು ಭ್ರಷ್ಟಾಚಾರದಿಂದ ದೂರವಿದ್ದು ದೇಶದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈಲ್ವೆ, ಬ್ಯಾಂಕಿಂಗ್, ಅಂಚೆ ಇಲಾಖೆ, ಸಹಾಯಕ ಉಪನ್ಯಾಸಕ ಹುದ್ದೆಗಳು ಸೇರಿದಂತೆ ಸುಮಾರು 7 ಇಲಾಖೆಗಳ 150 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್, ಪ್ರಧಾನ ಹಿರಿಯ ಸಿಬ್ಬಂದಿ ಅಧಿಕಾರಿ ಸೂರ್ಯ ಪ್ರಕಾಶ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಸ್ವಾಗತಿಸಿದರು.