ಸಾರಾಂಶ
ರಾಜ್ಯದ ಭೋವಿ ಅಭಿವೃದ್ಧಿ ನಿಗಮದಲ್ಲಿ 120 ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿ 60 ಕೋಟಿ ರು. ಅವ್ಯವಹಾರ ನಡೆಸಿದ್ದು, ಈ ಹಣವನ್ನು 100ಕ್ಕೂ ಹೆಚ್ಚಿನ ಖಾತೆಗಳಿಗೆ ವರ್ಗಾಯಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ಸೇರಿದಂತೆ 27 ಮಂದಿ ಜೇಬಿಗಿಳಿಸಿಕೊಂಡಿರುವ ಮಹತ್ವದ ಸಂಗತಿ ಬಯಲಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯದ ಭೋವಿ ಅಭಿವೃದ್ಧಿ ನಿಗಮದಲ್ಲಿ 120 ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿ 60 ಕೋಟಿ ರು. ಅವ್ಯವಹಾರ ನಡೆಸಿದ್ದು, ಈ ಹಣವನ್ನು 100ಕ್ಕೂ ಹೆಚ್ಚಿನ ಖಾತೆಗಳಿಗೆ ವರ್ಗಾಯಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ಸೇರಿದಂತೆ 27 ಮಂದಿ ಜೇಬಿಗಿಳಿಸಿಕೊಂಡಿರುವ ಮಹತ್ವದ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಯಲ್ಲಿ ಬಯಲಾಗಿದೆ.
ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಬೇಟೆಯನ್ನು ಕಾಂಗ್ರೆಸ್ ಆರಂಭಿಸಿದೆ. ಆ ಸಂಬಂಧ ಭೋವಿ ಹಗರಣ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ. ಹಗರಣ ಸಂಬಂಧ ಭೋವಿ ಅಭಿವೃದ್ಧಿ ನಿಗಮದಲ್ಲಿ ಸಂಗ್ರಹಿಸಿದ ದಾಖಲೆಗಳು ಹಾಗೂ ಬಂಧಿತ ಆರೋಪಿಯಾಗಿರುವ ನಿಗಮದ ಕಚೇರಿಯ ಅಧೀಕ್ಷಕ ಸುಬ್ಬಪ್ಪ ವಿಚಾರಣೆ ವೇಳೆ ಹೇಳಿದ ಮಾಹಿತಿ ಆಧರಿಸಿ ಅಕ್ರಮವು 60 ಕೋಟಿ ರು. ಎನ್ನುವುದು ಖಚಿತವಾಗಿದೆ. ದಾಖಲೆ ಶೋಧ ಮುಂದುವರೆದಿದ್ದು, ಅಕ್ರಮದ ಮೊತ್ತ ಇನ್ನಷ್ಟು ಹೆಚ್ಚಾಗಬಹುದು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಭೋವಿ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ಉತ್ತೇಜನ ನೀಡುವ ಸಾಲ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡ ನಿಗಮದ ಕೆಲ ಅಧಿಕಾರಿಗಳು, ಆ ತಳವರ್ಗದ ಜನರಿಗೆ ಸಿಗಬೇಕಾದ ಹಣವನ್ನು ಮಧ್ಯವರ್ತಿಗಳನ್ನು ಮುಂದಿಟ್ಟು ನುಂಗಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳು ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನ ವ್ಯವಸ್ಥಾಪಕ ಅಂಡ್ ಟೀಂ:
ನಿಗಮದ ಹಣ ದೋಚಲು ವ್ಯವಸ್ಥಿತವಾಗಿ ಸಂಘಟಿತ ತಂಡವೊಂದು ಕಾರ್ಯನಿರ್ವಹಿಸಿದ್ದು, ಈ ತಂಡಕ್ಕೆ ನಿಗಮದ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಮುಂದಾಳತ್ವವಿತ್ತು. ಅಲ್ಲದೆ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಪ್ಪ ಹಾಗೂ 24 ಮಂದಿ ಮಧ್ಯವರ್ತಿಗಳ ತಂಡ ಇದಾಗಿದೆ. ಈ ಕೃತ್ಯದಲ್ಲಿ ಸುಬ್ಬಪ್ಪ ಬಂಧನ ಬಳಿಕ ತಲೆಮರೆಸಿಕೊಂಡಿರುವ ಎಂಡಿ ನಾಗರಾಜಪ್ಪ ಹಾಗೂ ಲೀಲಾವತಿ ಸೇರಿದಂತೆ ಇತರೆ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ.
ಸಾಲ ಯೋಜನೆಗೆ ಫಲಾನುಭವಿಗಳನ್ನು ಗುರುತಿಸಿ ಅವರಿಂದ ಖಾಲಿ ಚೆಕ್‌ಗಳು ಹಾಗೂ ಸ್ವವಿವರವನ್ನು ಮಧ್ಯವರ್ತಿಗಳು ಸಂಗ್ರಹಿಸಿದರೆ, ಆ ದಾಖಲೆಗಳನ್ನು ಬಳಸಿಕೊಂಡು ಎಂಡಿ ಸೇರಿ ನಿಗಮದ ಅಧಿಕಾರಿಗಳು ಹಣ ವರ್ಗಾಯಿಸುತ್ತಿದ್ದರು. ಒಂದೇ ವರ್ಷದಲ್ಲಿ 60 ಕೋಟಿ ರು. ಹಣ ದುರ್ಬಳಕೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕೇಳದೆ ಇದ್ದರೂ ಸಾಲ ಕೊಟ್ಟು ಹಣ ಗುಳುಂ:
ನವೋದ್ಯಮ ಪ್ರೋತ್ಸಾಹಕ್ಕೆ ಭೋವಿ ಸಮುದಾಯದ ಉದ್ಯಮಿಗಳಿಗೆ 10 ಲಕ್ಷ ರು.ವರೆಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿತ್ತು. 2022- 23ರ ಅವಧಿಯಲ್ಲಿ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಆರೋಪಿಗಳು ಹಣ ಸ್ವಾಹ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಲಕ್ಕೆ ಅರ್ಜಿ ಸಲ್ಲಿಸದೆ ಇದ್ದರೂ ಕೆಲವು ಜನರಿಂದ ಆಧಾರ್ ಕಾರ್ಡ್ ಹಾಗೂ ಚೆಕ್ ಬುಕ್‌ಗಳನ್ನು ಪಡೆದು ಅವರನ್ನು ಫಲಾನುಭವಿಗಳೆಂದು ದಾಖಲೆಗಳಲ್ಲಿ ತೋರಿಸಿ ಸಾಲ ಮಂಜೂರಾತಿ ಮಾಡಿ ಆರೋಪಿಗಳು ಹಣ ದೋಚಿದ್ದಾರೆ. ಆದರೆ ಆ ಫಲಾನುಭವಿಗಳ ಪೈಕಿ ಬಹುತೇಕರಿಗೆ ಸಾಲ ಮರಳಿಸದ ಕಾರಣಕ್ಕೆ ಬ್ಯಾಂಕ್ ನೋಟಿಸ್ ಮನೆಗೆ ಬಂದಾಗಲೇ ತಮ್ಮ ಹೆಸರಿನಲ್ಲಿ ಲಕ್ಷ ಲಕ್ಷ ಸಾಲವಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 ಕಂಪನಿಗಳಿಗೆ ಹಣ, 100 ಖಾತೆಗಳಿಗೆ ಜಮೆ:
ಒಂದೇ ವರ್ಷದಲ್ಲಿ 120 ಫಲಾನುಭವಿಗಳ ಹೆಸರಿನಲ್ಲಿ 60 ಕೋಟಿ ರು. ಹಣವನ್ನು ಭೋವಿ ಅಭಿವೃದ್ಧಿ ನಿಗಮವು ಸಾಲ ಮಂಜೂರಾತಿ ಮಾಡಿತ್ತು. ಆದರೆ ಆ ಹಣವು ನಿಜವಾದ ಫಲಾನುಭವಿಗಳಿಗೆ ಸಂದಾಯವಾಗಲಿಲ್ಲ. ಸಾಲ ಕೊಡಿಸುವ ನೆಪದಲ್ಲಿ ಆ ಅರ್ಜಿದಾರರಿಂದ ಮೂರು ಖಾಲಿ ಚೆಕ್‌ಗಳನ್ನು ಮಧ್ಯವರ್ತಿಗಳು ಸಂಗ್ರಹಿಸಿದ್ದರು. ಹೀಗಾಗಿ ಸಾಲ ಮಂಜೂರಾತಿ ಯೋಜನೆಯಡಿ ಆ ಫಲಾನುಭವಿ ಖಾತೆಗಳಿಗೆ ಹಣ ಜಮೆಯಾದ ಕೂಡಲೇ ಖಾಲಿ ಚೆಕ್‌ಗಳನ್ನು ಬಳಸಿಕೊಂಡು ಆರೋಪಿಗಳು ಹಣ ಡ್ರಾ ಮಾಡಿದ್ದರು.
ನಂತರ ಆ ಹಣ ಅನಿಕಾ, ಸೋಮನಾಥ, ಆದಿತ್ಯ ಹಾಗೂ ನ್ಯೂ ಡ್ರೀಮ್ಸ್ ಹೆಸರಿನ 9 ಎಂಟರ್‌ಪ್ರೈಸಸ್‌ಗಳಿಗೆ ರವಾನೆಯಾಗಿದೆ. ಆ ಕಂಪನಿಗಳಿಂದ 100ಕ್ಕೂ ಹೆಚ್ಚಿನ ಖಾತೆಗಳಿಗೆ ತಲಾ 5ರಿಂದ 8 ಲಕ್ಷ ರು. ಗಳಂತೆ ವರ್ಗಾವಣೆ ಮಾಡಿಸಿ ನಗದು ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
------
ನಿಗಮದ ‘ಬಿಜೆಪಿ ಅಧ್ಯಕ್ಷರಿಗೆ’ ತನಿಖೆ ಬಿಸಿ
ಈ ಹಗರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ರಾಜಕಾರಣಗಳಿಗೆ ಸಿಐಡಿ ತನಿಖೆ ಉರುಳು ಸುತ್ತಿಕೊಳ್ಳುವ ಸಾಧ್ಯತೆಗಳಿದ್ದು, ಕೆಲವೇ ದಿನಗಳಲ್ಲಿ ಅವರಿಗೆ ವಿಚಾರಣೆ ಹಾಜರಾಗುವಂತೆ ತನಿಖಾಧಿಕಾರಿಗಳಿಂದ ನೋಟಿಸ್ ಜಾರಿಯಾಗಲಿದೆ ಎಂದು ಮೂಲಗಳು ಹೇಳಿವೆ.
-----
ವಾಲ್ಮೀಕಿ ನಿಗಮದಂತೆ ಅಕ್ರಮ ಹಣ ವರ್ಗಾವಣೆ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾದರಿಯಲ್ಲೇ ಭೋವಿ ಅಭಿವೃದ್ಧಿ ನಿಗಮದಲ್ಲೂ ಹಣ ಅಕ್ರಮ ವರ್ಗಾವಣೆಯಾಗಿದೆ. ಆದರೆ ವಾಲ್ಮೀಕಿ ನಿಗಮದ ಹಣವು ನೇರವಾಗಿ ಆರೋಪಿಗಳಿಗೆ ಸಂದಾಯವಾಗಿದ್ದರೆ, ಭೋವಿ ನಿಗಮದ ಹಣವು ಫಲಾನುಭವಿಗಳ ಖಾತೆ ಮೂಲಕ ಆರೋಪಿಗಳ ಕಿಸೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.