ಸಾರಾಂಶ
ನವದೆಹಲಿ : ‘ಖನಿಜಗಳ ಮೇಲಿನ ರಾಯಧನವು (ರಾಯಲ್ಟಿ) ತೆರಿಗೆ ಅಲ್ಲ. ಗಣಿಗಳು ಹಾಗೂ ಖನಿಜವನ್ನು ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರವನ್ನು ರಾಜ್ಯಗಳು ಮಾತ್ರವೇ ಹೊಂದಿವೆ’ ಎಂದು ಸುಪ್ರೀಂಕೋರ್ಟ್ 8:1 ಬಹುಮತದ ಐತಿಹಾಸಿಕ ತೀರ್ಪು ನೀಡಿದೆ. 9 ಸದಸ್ಯ ಬಲದ ಸಾಂವಿಧಾನಿಕ ಪೀಠದ ಈ ತೀರ್ಪಿನಿಂದಾಗಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಜಾರ್ಖಂಡ್ ಹಾಗೂ ಒಡಿಶಾ ಸೇರಿದಂತೆ ಖನಿಜ ಸಂಪತ್ತನ್ನು ಹೊಂದಿರುವ ರಾಜ್ಯಗಳಿಗೆ ಈ ತೀರ್ಪು ಭಾರಿ ಆದಾಯದ ನಿರೀಕ್ಷೆಯನ್ನು ಹುಟ್ಟುಹಾಕಿದೆ.
‘ಖನಿಜಗಳ ಮೇಲಿನ ರಾಯಧನ ಎಂಬುದು ತೆರಿಗೆಯೇ? ಖನಿಜಗಳನ್ನು ಹೊರತೆಗೆಯುವುದಕ್ಕೆ ತೆರಿಗೆ ಹೇರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆಯೇ? ಅಥವಾ ರಾಜ್ಯಗಳೂ ಅದರಲ್ಲಿ ಅಧಿಕಾರ ಹೊಂದಿವೆಯೇ? ಅಥವಾ ತಮ್ಮ ವ್ಯಾಪ್ತಿಯಲ್ಲಿ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇದೆಯೇ?’ ಎಂಬುದು ಬಹಳ ಬಿಕ್ಕಟ್ಟಿನ ವಿಷಯವಾಗಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಇತರೆ ಏಳು ನ್ಯಾಯಮೂರ್ತಿಗಳು ಗುರುವಾರ 200 ಪುಟಗಳ ತೀರ್ಪು ಪ್ರಕಟಿಸಿ, ‘ಗಣಿಗಳು ಹಾಗೂ ಖನಿಜ ಅಭಿವೃದ್ಧಿ ನಿಯಂತ್ರಣ ಕುರಿತ ಸಂವಿಧಾನದ 1ನೇ ಪಟ್ಟಿಯಲ್ಲಿರುವ 54ನೇ ನಮೂದಿನ ಪ್ರಕಾರ, ಖನಿಜ ಹಕ್ಕಿನ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರ ಸಂಸತ್ತಿಗೆ ಇಲ್ಲ. ಆದರೆ, ಖನಿಜ ಹಕ್ಕುಗಳ ಮೇಲೆ ತೆರಿಗೆ ಹೇರುವ ರಾಜ್ಯಗಳ ಅಧಿಕಾರದ ಮೇಲೆ ಯಾವುದೇ ಮಿತಿಯನ್ನು ಹೇರುವ ಶಾಸನಾತ್ಮಕ ಅಧಿಕಾರ ಸಂಸತ್ತಿಗೆ ಇದೆ’ ಎಂದು ಬಹುಮತದ ತೀರ್ಪು ನೀಡಿದರು.
ಇದಕ್ಕೆ ಭಿನ್ನ ತೀರ್ಪು ನೀಡಿದ ಕನ್ನಡಿಗ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ‘ಗಣಿ ಹಾಗೂ ಖನಿಜಯುಕ್ತ ಜಾಗಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇಲ್ಲ’ ಎಂದು ಹೇಳಿದರು. ಆದರೆ ತೀರ್ಪು 8:1 ಆಗಿರುವುದರಿಂದ ಬಹುಮತದ ತೀರ್ಪೇ ಜಾರಿಗೆ ಬರಲಿದೆ.
1989ರಲ್ಲಿ ಸುಪ್ರೀಂಕೋರ್ಟ್‌ನ ಸಪ್ತಸದಸ್ಯ ಪೀಠವು ‘ರಾಯಧನ ಎಂಬುದು ತೆರಿಗೆ’ ಎಂದು ಹೇಳಿತ್ತು. ‘ಅದು ಸರಿಯಲ್ಲ’ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಏನಿದು ಪ್ರಕರಣ?:
ಇಂಡಿಯಾ ಸಿಮೆಂಟ್ ಕಂಪನಿ ತಮಿಳುನಾಡಿನಲ್ಲಿ ಗಣಿ ಗುತ್ತಿಗೆಯನ್ನು ಪಡೆದುಕೊಂಡಿತ್ತು. ರಾಜ್ಯ ಸರ್ಕಾರಕ್ಕೆ ರಾಯಧನವನ್ನೂ ಪಾವತಿಸುತ್ತಿತ್ತು. ರಾಯಧನದ ಮೇಲೆ ತಮಿಳುನಾಡು ಸರ್ಕಾರ ಸೆಸ್ ವಿಧಿಸಿತ್ತು. ರಾಯಧನದ ಮೇಲೆ ಸೆಸ್ ಹಾಕಿದರೆ ಅದು ತೆರಿಗೆ ಇದ್ದಂತೆ ಎಂದು ಇಂಡಿಯಾ ಸಿಮೆಂಟ್ ಕೋರ್ಟ್ ಮೆಟ್ಟಿಲೇರಿತ್ತು. 1989ರಲ್ಲಿ ಸುಪ್ರೀಂಕೋರ್ಟ್‌ನ ಸಪ್ತಸದಸ್ಯ ಪೀಠ ಇಂಡಿಯಾ ಸಿಮೆಂಟ್ ಪರ ತೀರ್ಪು ನೀಡಿತ್ತು. ‘ರಾಜ್ಯಗಳು ರಾಯಧನವನ್ನು ಸಂಗ್ರಹಿಸಬಹುದು. ಆದರೆ ಗಣಿಗಾರಿಕೆ ಹಾಗೂ ಖನಿಜ ಅಭಿವೃದ್ಧಿಯ ಮೇಲೆ ಮತ್ತಷ್ಟು ಸೆಸ್ (ತೆರಿಗೆ) ಹೇರುವಂತಿಲ್ಲ. ರಾಯಧನ ಎಂಬುದು ತೆರಿಗೆ’ ಎಂದು ಹೇಳಿತ್ತು. ಈ ಮೂಲಕ ರಾಜ್ಯಗಳು ಸಂಗ್ರಹಿಸುವ ಗಣಿಗಾರಿಕೆ ತೆರಿಗೆಗೆ ನಿರ್ಬಂಧ ಹೇರಿತ್ತು.
ಆದರೆ 2004ರಲ್ಲಿ ಸುಪ್ರೀಂಕೋರ್ಟ್‌ನ ಪಂಚಸದಸ್ಯ ಪೀಠ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ, ‘ರಾಯಧನ ಎಂಬುದು ತೆರಿಗೆ ಅಲ್ಲ. 1989ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಮುದ್ರಣ ದೋಷವಾಗಿದೆ. ರಾಯಧನದ ಮೇಲೆ ವಿಧಿಸಲಾಗುವ ಸೆಸ್ ಎಂಬುದು ತೆರಿಗೆ’ ಎಂದು ಅಭಿಪ್ರಾಯ ಪಟ್ಟಿತ್ತು.
ಅದಾದ ಬಳಿಕ ಸುಪ್ರೀಂಕೋರ್ಟ್‌ನಲ್ಲಿ 80ಕ್ಕೂ ಅರ್ಜಿಗಳು ವಿವಿಧ ಸಮಯದಲ್ಲಿ ಸಲ್ಲಿಕೆಯಾಗಿದ್ದವು. ರಾಜ್ಯಗಳಿಗೆ ತೆರಿಗೆ ಅಧಿಕಾರವೇ ಇಲ್ಲ ಎಂದು ಖಾಸಗಿ ಹಾಗೂ ಸರ್ಕಾರಿ ಕಂಪನಿಗಳು ವಾದಿಸಿದ್ದವು. ಇಂಡಿಯಾ ಸಿಮೆಂಟ್ ಪ್ರಕರಣವನ್ನು ಸಪ್ತ ಸದಸ್ಯ ಪ್ರಕರಣ ವಿಚಾರಣೆ ನಡೆಸಿದ್ದ ಹಿನ್ನೆಲೆಯಲ್ಲಿ 9 ಸದಸ್ಯ ಬಲದ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಯಿತ್ತು. ಫೆಬ್ರವರಿಯಿಂದ ವಿಚಾರಣೆ ನಡೆದು ಈಗ ತೀರ್ಪು ಬಂದಿದೆ.
ಏನು ಪರಿಣಾಮ?
- ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರು.ಗಳ ಖನಿಜ ತೆರಿಗೆ ನಷ್ಟ
- ರಾಜ್ಯಗಳಿಗೆ ಇಷ್ಟು ವರ್ಷ ನಷ್ಟವಾಗುತ್ತಿದ್ದ ಸಾವಿರಾರು ಕೋಟಿ ರು.ಗಳ ಖನಿಜ ತೆರಿಗೆ ಲಾಭ
- ಎಷ್ಟು ತೆರಿಗೆ ವಿಧಿಸಬಹುದು ಎಂಬ ಕಾನೂನನ್ನು ಮಾತ್ರ ಕೇಂದ್ರ ಸರ್ಕಾರ ರೂಪಿಸಬಹುದು
- ರಾಜ್ಯ ಸರ್ಕಾರಗಳಿಗೆ ಖನಿಜಗಳ ಮೇಲಿನ ರಾಯಧನದ ಜೊತೆಗೆ ತೆರಿಗೆ ಡಬಲ್ ಆದಾಯ
- ಜಿಎಸ್‌ಟಿಯಿಂದ ಹೊರಗಿರುವ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ನೋಂದಣಿ ಶುಲ್ಕದ ಜೊತೆಗೆ ರಾಜ್ಯಗಳಿಗೆ ಇನ್ನೊಂದು ದೊಡ್ಡ ಆದಾಯದ ಮೂಲ
ಹಳೆಯ ಎಲ್ಲಾ ತೆರಿಗೆ ಹಣ ವಾಪಸ್ ಕೊಡಿಸಿ: ರಾಜ್ಯಗಳಿಂದ ಮನವಿ
ನವದೆಹಲಿ: ಈವರೆಗೂ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜಗಳ ಮೇಲೆ ವಿಧಿಸಿರುವ ಸಹಸ್ರಾರು ಕೋಟಿ ರು. ಹಣವನ್ನು ವಸೂಲಿ ಮಾಡಿ ತಮಗೆ ಹಂಚಬೇಕು ಎಂದು ಜಾರ್ಖಂಡ್ ಹಾಗೂ ಒಡಿಶಾದಂತಹ ರಾಜ್ಯಗಳು ನ್ಯಾಯಾಲಯಕ್ಕೆ ಮನವಿ ಮಾಡಿವೆ. ಆದರೆ ತೀರ್ಪು ಇನ್ನು ಮುಂದೆ ಜಾರಿಗೆ ಬರುವಂತೆ ಆದೇಶಿಸಬೇಕು ಎಂದು ಕೇಂದ್ರ ಸರ್ಕಾರ ವಾದಿಸಿದೆ. ಈ ಸಂಬಂಧ ಲಿಖಿತ ಹೇಳಿಕೆ ಸಲ್ಲಿಸಿದರೆ, ಜು.31ರಂದು ನಿರ್ಧಾರ ಕೈಗೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.