ಸಾರಾಂಶ
ನವದೆಹಲಿ: ಟೆಲಿಕಾಂ ಕಂಪನಿಗಳು 5ಜಿ ಮೊಬೈಲ್ ಹ್ಯಾಂಡ್‌ಸೆಟ್ ಹೊಂದಿರುವ ಬಳಕೆದಾರರಿಗೆ ಹಾಲಿ ನೀಡುತ್ತಿರುವ ಅನ್‌ಲಿಮಿಟೆಡ್ ಸೇವೆಗಳು ಶೀಘ್ರವೇ ರದ್ದಾಗಲಿವೆ. ಬದಲಿಗೆ 5ಜಿ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಿವೆ ಎಂದು ವರದಿಯೊಂದು ತಿಳಿಸಿವೆ.
ಹಾಲಿ ಜಿಯೋ, ಏರ್‌ಟೆಲ್ ಕಂಪನಿಗಳು, ತಮ್ಮ ಗ್ರಾಹಕರಿಗೆ 4ಜಿ ದರದಲ್ಲೇ 5ಜಿ ಸೇವೆಯನ್ನೂ ನೀಡುತ್ತಿವೆ. ಜೊತೆಗೆ ಆಯ್ದ ಬಳಕೆದಾರರಿಗೆ ಡಾಟಾ ಬಳಕೆಗೂ ದೈನಂದಿನ ಮಿತಿ ತೆಗೆದು ಹಾಕಿವೆ.
ಆದರೆ ಆದಾಯ ಮತ್ತು ಬಂಡವಾಳ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಭಾರ್ತಿ ಏರ್‌ಟೆಲ್ ಮತ್ತು ರಿಯಲನ್ಸ್ ಜಿಯೋ ಕಂಪನಿಗಳು ಈ ವರ್ಷದ ದ್ವಿತೀಯಾರ್ಧದಿಂದ ಬೆಲೆಯನ್ನು ಶೇ.5-10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿವೆ ಎಂದು ವರದಿ ತಿಳಿಸಿದೆ.
ಈ ಎರಡು ಕಂಪನಿಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ 5ಜಿ ಸೇವೆ ಒದಗಿಸುತ್ತಿವೆ. ಈ ಸಂಸ್ಥೆಗಳು 12.5 ಕೋಟಿ 5ಜಿ ಬಳಕೆದಾರರನ್ನು ಹೊಂದಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಾಗೂ ವೊಡಾಫೋನ್ ಐಡಿಯಾ ಒಡೆತನದ ವಿಐ ಇನ್ನು 5ಜಿ ಸೇವೆಯ ಆರಂಭಿಕ ಹಂತದಲ್ಲಿವೆ.