30 ವರ್ಷದ ನ್ಯಾಯಾಧೀಶರೊಬ್ಬರು ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ನಲ್ಲಿನ ತಮ್ಮ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ನವದೆಹಲಿ: 30 ವರ್ಷದ ನ್ಯಾಯಾಧೀಶರೊಬ್ಬರು ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ನಲ್ಲಿನ ತಮ್ಮ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನ್ಯಾ. ಅಮನ್ ಕುಮಾರ್ ಶರ್ಮಾ ಮೃತರು. ಶರ್ಮಾ 2021ರ ಜೂ.19ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರಿದ್ದರು. 2018ರಲ್ಲಿ ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಪದವಿ ಪಡೆದಿದ್ದರು.

ತಮ್ಮ ಸೇವಾ ಅವಧಿಯಲ್ಲಿ, ಹಲವಾರು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದರು. 2025ರ ಅಕ್ಟೋಬರ್‌ನಿಂದ ಅವರನ್ನು ಈಶಾನ್ಯ ಜಿಲ್ಲೆಯ ಕರ್ಕಾರ್ಡೂಮಾ ಕೋರ್ಟ್‌ನ ಡಿಎಲ್‌ಎಸ್‌ಎಯಲ್ಲಿ ಪೂರ್ಣ ಸಮಯದ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

 ಇಂದು ದೇಶಾದ್ಯಂತ ನೀಟ್‌ ಯುಜಿ ಪರೀಕ್ಷೆ ಪರೀಕ್ಷಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯು (ನೀಟ್‌ ಯುಜಿ) ದೇಶಾದ್ಯಂತ ಭಾನುವಾರ ನಡೆಯಲಿದೆ. ಪರೀಕ್ಷೆಗೆ ಯಾವ ರೀತಿಯ ಉಡುಪು ಧರಿಸಬೇಕು, ಏನೆಲ್ಲ ನಿಯಮಗಳನ್ನು ಪಾಲಿಸಬೇಕು ಎನ್ನುವ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಈ ಬಾರಿ ಒಟ್ಟು 22.79 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಶೇ.58ರಷ್ಟು ವಿದ್ಯಾರ್ಥಿನಿಯರು ಎಂಬುದು ವಿಶೇಷ. ದೇಶಾದ್ಯಂತ ಅಂದಾಜು 1.37 ಲಕ್ಷ ಎಂಬಿಬಿಎಸ್‌ ಸೀಟುಗಳು ಲಭ್ಯವಿದ್ದು ಅದರ ಪ್ರವೇಶಕ್ಕಾಗಿ ಈ ಪರೀಕ್ಷೆ ಆಯೋಜನೆಗೊಂಡಿದೆ. ಈ ಪೈಕಿ ಅತಿ ಹೆಚ್ಚು 13000 ಸೀಟುಗಳು ಕರ್ನಾಟಕವೊಂದರಲ್ಲೇ ಇದೆ.

ಪಾರದರ್ಶಕ ನೀರಿನ ಬಾಟಲಿಗಳನ್ನು ಇಟ್ಟುಕೊಳ್ಳಬೇಕು. ಧಾರ್ಮಿಕ ಗುರುತುಗಳಿಗೆ ಅನುಮತಿ ಇದೆ, ಆದರೆ ಪರಿಶೀಲನೆಗಾಗಿ ಕಡ್ಡಾಯವಾಗಿ 2 ಗಂಟೆ ಮುಂಚಿತವಾಗಿ ಆಗಮಿಸಬೇಕು. ಅರ್ಧ ತೋಳಿನ ಬಟ್ಟೆ ಧರಿಸಬೇಕು. ಅಗತ್ಯವಿದ್ದರೆ ಮಾತ್ರ ಪೂರ್ತಿ ತೋಳಿನ ಬಟ್ಟೆ ಧರಿಸಬಹುದು. ಆದರೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ.

ತಡೆಯಲ್ಲೂ ಮತ್ತೊಂದು ಹಡಗು ಹೋರ್ಮುಜ್‌ ದಾಟಿ ಭಾರತದತ್ತ

ನವದೆಹಲಿ: ಹೋರ್ಮುಜ್‌ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇರಾನ್‌ ಮತ್ತು ಅಮೆರಿಕದ ನಡುವೆ ಹಗ್ಗಜಗ್ಗಾಟ ಮುಂದುವರೆದಿರುವ ನಡುವೆ ಯುಎಇಯಿಂದ ಭಾರತದತ್ತ ಹೊರಟಿರುವ ಎಲ್‌ಪಿಜಿ ತುಂಬಿದ ಹಡಗು ಶನಿವಾರ ಆ ಜಲಸಂಧಿಯನ್ನು ದಾಟಿರುವುದು ಸಾಗರ ಸಂಚಾರ ಡೇಟಾದಿಂದ ತಿಳಿದುಬಂದಿದೆ. ಮಾರ್ಶಲ್‌ ದ್ವೀಪದ ಧ್ವಜ ಹೊಂದಿರುವ ‘ಸರ್ವಶಕ್ತ’ ನೌಕೆಯಲ್ಲಿ 45,000 ಟನ್‌ ಎಲ್‌ಪಿಜಿ ತುಂಬಿದ್ದು, ಇದರಲ್ಲಿರುವ ಸಿಬ್ಬಂದಿಯಲ್ಲಿ 18 ಜನ ಭಾರತೀಯರಿದ್ದಾರೆ ಎನ್ನಲಾಗಿದೆ. ಮೇ 13ರಂದು ವಿಶಾಖಪಟ್ಟಣಂಗೆ ಬರಲಿರುವ ಇದು ತನ್ನ ಗುರಿ ತಲುಪಿದಲ್ಲಿ, ಕದನಾರಂಭದ ಬಳಿಕ ಭಾರತಕ್ಕೆ ಬಂದ ಮೊದಲ ಎಲ್‌ಪಿಜಿ ಹಡಗು ಎನಿಸಿಕೊಳ್ಳಲಿದೆ.

ಬಿಜೆಪಿಗೆ ಜಿಗಿದ ಸಂಸದ ಪಾಠಕ್‌ ವಿರುದ್ಧ ಕೇಸ್‌: ಬಂಧನ ಭೀತಿ, ನಾಪತ್ತೆ

ಚಂಡೀಗಢ/ನವದೆಹಲಿ: ಇತ್ತೀಗೆಷ್ಟೇ ರಾಘವ್‌ ಚಡ್ಢಾ ಅವರ ಜತೆಗೂಡಿ ಆಪ್‌ ತೊರೆದು ಬಿಜೆಪಿ ಸೇರಿದ್ದ ರಾಜ್ಯಸಭಾ ಸಂಸದ ಸಂದೀಪ್‌ ಪಾಠಕ್‌ ವಿರುದ್ಧ ಪಂಜಾಬ್‌ನಲ್ಲಿ ಜಾಮೀನುರಹಿತ ಸೆಕ್ಷನ್‌ಗಳ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ಪಂಜಾಬ್‌ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಅತ್ತ ಬಂಧನದ ಭೀತಿಯಿಂದ ಶನಿವಾರ ಮನೆಯಿಂದ ಹೊರಬಿದ್ದ ಪಾಠಕ್‌ ಸಂಪರ್ಕಕ್ಕೂ ಸಿಗದಂತೆ ಅಜ್ಞಾತ ಸ್ಥಳ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ‘ಪಂಜಾಬ್‌ ಪೊಲೀಸರು ಪಾಠಕ್‌ರ ಮನೆ ಮೇಲೆ ದಾಳಿಗೆ ಯತ್ನಿಸಿದರು. ಮಶಾವಸ್ತು ಜಾಲದ ವಿರುದ್ಧ ಕಾರ್ಯಾಚರಣೆಗಿಳಿಯಲು ಅಶಕ್ತರಾಗಿರುವ ಅವರನ್ನು ಹೀಗೆ ಬಳಸಿಕೊಳ್ಳಲಾಗುತ್ತಿದೆ. ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.