ಕರ್ಕಿ ಔಟ್, ನೇಪಾಳಕ್ಕೆ ಘೀಸಿಂಗ್‌ ಮಧ್ಯಂತರ ಮುಖ್ಯಸ್ಥ?

| Published : Sep 12 2025, 12:07 AM IST

ಸಾರಾಂಶ

ಆಂತರಿಕ ದಂಗೆಯಿಂದ ನಲುಗಿರುವ ನೇಪಾಳದಲ್ಲಿ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ಪ್ರತಿಭಟನಾಕಾರರು ಇಂಜಿನಿಯರ್‌ ಕುಲಮನ್‌ ಘೀಸಿಂಗ್ ಅವರ ಹೆಸರನ್ನು ಹೊಸದಾಗಿ ಘೋಷಿಸಿದ್ದಾರೆ.

- ಘೀಸಿಂಗ್ ಹೆಸರಿಗೆ ಜನರೇಶನ್‌ ಝೀ ಸಮ್ಮತಿ

- ಜಡ್ಜ್ ಸುಶೀಲಾಗೆ ಮುಖ್ಯಸ್ಥೆ ಆಗಲು ಕಾನೂನು ಅಡ್ಡಿ

- ಹೀಗಾಗಿ ಘೀಸಿಂಗ್‌ ಹೆಸರಿಗೆ ಜೆನ್‌ ಝೀ ಸಮ್ಮತಿ

ಕಾಠ್ಮಂಡು: ಆಂತರಿಕ ದಂಗೆಯಿಂದ ನಲುಗಿರುವ ನೇಪಾಳದಲ್ಲಿ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ಪ್ರತಿಭಟನಾಕಾರರು ಇಂಜಿನಿಯರ್‌ ಕುಲಮನ್‌ ಘೀಸಿಂಗ್ ಅವರ ಹೆಸರನ್ನು ಹೊಸದಾಗಿ ಘೋಷಿಸಿದ್ದಾರೆ. ಈ ಹಿಂದೆ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹೆಸರನ್ನು ಅಂತಿಮಗೊಳಿಸಿದ್ದರು. ಆದರೆ ಅಚ್ಚರಿಯ ವಿದ್ಯಮಾನದಲ್ಲಿ ಅವರ ಬದಲಿಗೆ ಗುರುವಾರ ಹೊಸ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಬುಧವಾರ ‘ಜೆನ್‌ ಝೀ’ ಯುವಕರು ನ್ಯಾ. ಕರ್ಕಿಯವರನ್ನು ಆಯ್ಕೆ ಮಾಡಿದ್ದರು. ಆದರೆ ಅವರಿಗೆ 73 ವರ್ಷವಾಗಿರುವುದರಿಂದ ಯುವಸಮುದಾಯದ ನೇತೃತ್ವ ವಹಿಸಲು ಸೂಕ್ತ ವ್ಯಕ್ತಿಯಲ್ಲ ಎಂಬ ಕೂಗು ಪ್ರತಿಭಟನಾಕಾರರ ಮಧ್ಯದಿಂದಲೇ ಕೇಳಿಬಂದಿತ್ತು, ಇದರ ಜತೆಗೆ ಜಡ್ಜ್‌ ಆದವರಿಗೆ ಸರ್ಕಾರದ ಮುಖಸ್ಥರಾಗಲು ನೇಪಾಳ ಕಾನೂನು ಅಡ್ಡಿ ಬರುತ್ತದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಮಧ್ಯಂತರ ಸರ್ಕಾರಕ್ಕೆ ಕುಲ್ಮಾನ್ ಘೀಸಿಂಗ್ ಹೆಸರಿಗೆ ಜನರೇಶನ್‌ ಝೀ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ನಾಯಕನ ಆಯ್ಕೆ ಬಗ್ಗೆ ರಾಷ್ಟ್ರಾಧ್ಯಕ್ಷರು ಹಾಗೂ ಸೇನಾ ಮುಖ್ಯಸ್ಥರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಜನ್ ಝೀ ನಾಯಕರ ಅಭಿಪ್ರಾಯವನ್ನೂ ಆಲಿಸಿದ್ದಾರೆ. ಮಧ್ಯಂತರ ಮುಖ್ಯಸ್ಥನ ಆಯ್ಕೆಗೆ ರಾಷ್ಟ್ರಾಧ್ಯಕ್ಷರ ಸಮ್ಮತಿ ಕಡ್ಡಾಯ.

ಇದಕ್ಕೂ ಮೊದಲು ಕರ್ನಾಟಕದಲ್ಲಿ ಎಂಟೆಕ್‌ ಪದವಿ ಗಳಿಸಿದ ಕಾಠ್ಮಂಡು ಮೇಯರ್‌ ಬಲೇನ್‌ ಶಾ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಅವರು ಸಮ್ಮತಿಸದ ಕಾರಣ ಅವರ ಹೆಸರನ್ನು ಕೈಬಿಡಲಾಗಿತ್ತು.

--

ನೇಪಾಳದ ವಿದ್ಯುತ್‌ ಕ್ರಾಂತಿ ಹರಿಕಾರ ಘೀಸಿಂಗ್ನೇಪಾಳ ವಿದ್ಯುತ್ ಪ್ರಾಧಿಕಾರದ (ಎನ್‌ಇಎ) ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಘೀಸಿಂಗ್, ದೇಶದ ದೀರ್ಘಕಾಲದ ವಿದ್ಯುತ್ ಕೊರತೆಯನ್ನು ಕೊನೆಗಾಣಿಸಿ ದೇಶಾದ್ಯಂತ ಖ್ಯಾತರಾಗಿದ್ದಾರೆ. 2016ರಲ್ಲಿ ಅವರು ಎನ್‌ಇಎ ಚುಕ್ಕಾಣಿ ಹಿಡಿದಾಗ, ನೇಪಾಳ ದಿನಕ್ಕೆ 18 ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಅನುಭವಿಸುತ್ತಿತ್ತು. ವ್ಯವಹಾರ, ಶಿಕ್ಷಣ ಮತ್ತು ದೈನಂದಿನ ಜೀವನ ಅಸ್ತವ್ಯಸ್ತವಾಗಿತ್ತು. ಈ ಭೀಕರ ಸವಾಲನ್ನು ಎದುರಿಸಿದ ಘಿಸಿಂಗ್, ವಿದ್ಯುತ್ ಕಡಿತವನ್ನು ನಿರ್ಮೂಲನೆ ಮಾಡಿದ್ದಲ್ಲದೆ, ಎನ್‌ಇಎಯನ್ನು ಲಾಭದಾಯಕ ಸಂಸ್ಥೆಯಾಗಿ ಪರಿವರ್ತಿಸಿದರು. ತಮ್ಮ ಶುದ್ಧ ಚಾರಿತ್ರ್ಯದಿಂದ ದೇಶಾದ್ಯಂತ ಮನೆಮಾತಾಗಿದ್ದಾರೆ. ಹೀಗಾಗಿಯೇ ಜನರೇಶನ್ ಝೀ, ಅವರ ಹೆಸರನ್ನು ಆಯ್ಕೆ ಮಾಡಿದೆ.

==

ನೇಪಾಳ ಜನ್‌-ಝೀನಲ್ಲಿ ಒಡಕು: ಸೇನಾ ಕಚೇರಿ ಮುಂದೆ ಘರ್ಷಣೆ

ಕಾಠ್ಮಂಡು: ನೇಪಾಳಿ ಸೇನಾ ಪ್ರಧಾನ ಕಚೇರಿಯ ಹೊರಗೆ ಸತತ ಗುರುವಾರ ಜನರೇಶನ್‌ ಝೀ ಪ್ರತಿಭಟನಾಕಾರರ ನಡುವೆ ಭಿನ್ನಮತ ಭುಗಿಲೆದ್ದಿದ್ದು, 2 ಬಣಗಳು ಕಾದಾಡಿಕೊಂಡಿವೆ. ಮಧ್ಯಂತರ ನಾಯಕನ ಆಯ್ಕೆಯ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಗುರುವಾರ ಮಧ್ಯಾಹ್ನ, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಮತ್ತು ಕಠ್ಮಂಡು ಮೇಯರ್ ಬಾಲೆನ್ ಶಾ ಅವರನ್ನು ಬೆಂಬಲಿಸುವ ಪ್ರತಿಸ್ಪರ್ಧಿ ಬಣಗಳು ಸೇನಾ ಸಂಕೀರ್ಣದ ಹೊರಗೆ ಘರ್ಷಣೆ ನಡೆಸಿ, ಮಧ್ಯಂತರ ಸರ್ಕಾರದ ನೇತೃತ್ವ ಯಾರು ವಹಿಸಿಕೊಳ್ಳಬೇಕು ಎಂದು ವಾಗ್ವಾದ ನಡೆಸಿದದರು. ಒಬ್ಬರಿಗೊಬ್ಬರು ಗುದ್ದಾಡುವ ವಿಡಿಯೋಗಳೂ ವೈರಲ್‌ ಆಗಿವೆ.