ಸಾರಾಂಶ
ಕಾಂಗ್ರೆಸ್‌ನ ಉಚಿತ ವಿದ್ಯುತ್ ಯೋಜನೆಗಳನ್ನು ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು ಅಪಾಯಕಾರಿ ಎಂದರು. ಅವರು ನಿಮಗೆ ಉಚಿತ ವಿದ್ಯುತ್ ನೀಡುವ ಬದಲು, ವಿದ್ಯುತ್ ಸಿಗದಂತೆ ಮಾಡುತ್ತಾರೆ ಎಂದು ಆರೋಪಿಸಿದರು.
ನವದೆಹಲಿ: ‘ನಮಗೆ ಮತ ಕೊಡಿ, ನಾವು ನಿಮಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಾರೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಏಕೆಂದರೆ ಅವರು ನಿಮಗೆ ಉಚಿತವಾಗಿ ವಿದ್ಯುತ್ ನೀಡಲ್ಲ. ಬದಲಿಗೆ ವಿದ್ಯುತ್ ನಿಮಗೆ ಸಿಗದಂತೆ ಮಾಡುತ್ತಾರೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಸೇರಿ ಹಲವು ಕಾಂಗ್ರೆಸ್ ಆಡಳಿತದ ರಾಜ್ಯಗಳು ಜಾರಿಗೆ ತಂದ ಉಚಿತ ವಿದ್ಯುತ್ ಯೋಜನೆಗಳನ್ನು ಟೀಕಿಸಿದ್ದಾರೆ.ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, ‘ಉಚಿತ ವಿದ್ಯುತ್ ಒದಗಿಸುವುದು ನಿರಂತರವಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಸೂರ್ಯ ಘರ್ 300 ಯುನಿಟ್ ಉಚಿತ ವಿದ್ಯುತ್ ಯೋಜನೆ ನಿಜಕ್ಕೂ ನಿರಂತರವಾಗಿರುತ್ತದೆ’ ಎಂದರು.
‘ಪ್ರಧಾನಿ ಸೂರ್ಯಘರ್ ಯೋಜನೆಯಲ್ಲಿ ವಿದ್ಯುತ್ತನ್ನು ನವೀಕರಿಸಬಹುದಾದ ಮೂಲದಿಂದ (ಸೌರ) ನೀಡಲಾಗುತ್ತದೆ. ಇದು ಜನರಿಗೆ ಉಳಿತಾಯವನ್ನಷ್ಟೇ ಮಾಡುವುದಿಲ್ಲ. ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಅವರಿಗೆ ಆದಾಯವನ್ನೂ ತಂದುಕೊಡುತ್ತದೆ. ಈ ಯೋಜನೆಯಡಿ ಪ್ರತಿ ಕುಟುಂಬ ವಾರ್ಷಿಕ 15 ಸಾವಿರ ರು.ಗಳನ್ನು ಉಳಿಸಬಹುದಾಗಿದೆ’ ಎಂದು ಹೇಳಿದರು.
‘ದಶಕದ ಹಿಂದೆ ಅಂದರೆ, 2010-11ರಲ್ಲಿ ಪ್ರತಿ ಯುನಿಟ್ ಸೌರ ವಿದ್ಯುತ್‌ಗೆ ದರ 10.95 ರು. ಇತ್ತು. ಅದು ಈಗ 2.60 ರು.ಗೆ ಇಳಿಕೆಯಾಗಿದೆ. ಸೌರ ವಿದ್ಯುತ್ ವೆಚ್ಚಗಳು ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ’ ಎಂದು ತಿಳಿಸಿದರು.