ಸಾರಾಂಶ
ನವದೆಹಲಿ: ಉದಯೋನ್ಮುಖ ಮಾರುಕಟ್ಟೆಗಳ ಹೂಡಿಕೆಯ ಮಾರುಕಟ್ಟೆ ಸೂಚ್ಯಂಕದಲ್ಲಿ (ಎಂಎಸ್‌ಸಿಐ) ಭಾರತವು ಚೀನಾವನ್ನು ಹಿಂದಿಕ್ಕಿದೆ. ಚೀನಾವನ್ನು ಭಾರತ ಹಿಂದಿಕ್ಕುತ್ತಿರುವುದು ಇದೇ ಮೊದಲು.
ಭಾರತೀಯ ಷೇರುಗಳು ಸೂಚ್ಯಂಕದಲ್ಲಿ ಒಟ್ಟು ಶೇ.22.27ರಷ್ಟು ಪಾಲು ಹೊಂದಿದ್ದು, ಚೀನೀ ಷೇರುಗಳಿಗಿಂತ ಮುಂದಿವೆ. ಚೀನಾ ದೇಶದ ಸಂಯೋಜಿತ ಷೇರುಗಳ ಪಾಲು ಈಗ ಶೇ.21.58 ಕ್ಕೆ ಇಳಿದಿದೆ ಎಂದು ಆರ್ಥಿಕ ವ್ಯವಹಾರಗಳ ಬಗ್ಗೆ ವಿಶ್ಲೇಷಣೆ ಮಾಡುವ ಕಂಪನಿಯಾದ ‘ಮಾರ್ಗನ್ ಸ್ಟಾನ್ಲಿ’ ಹೇಳಿದೆ. ನಂತರದ ಸ್ಥಾನಗಳಲ್ಲಿ ತೈವಾನ್, ದಕ್ಷಿಣ ಕೊರಿಯಾ ಹಾಗೂ ಬ್ರೆಜಿಲ್ ಇವೆ.
ಎಂಎಸ್‌ಸಿಐ ಸೂಚ್ಯಂಕವು 24 ಉದಯೋನ್ಮುಖ ಮಾರುಕಟ್ಟೆ ದೇಶಗಳ ದೊಡ್ಡ, ಮಧ್ಯಮ ಮತ್ತು ಸಣ್ಣ-ಕ್ಯಾಪ್ ಷೇರುಗಳನ್ನು ಒಳಗೊಂಡಿರುವ ಒಂದು ಸಮಗ್ರ ಸೂಚ್ಯಂಕವಾಗಿದೆ.ಚೀನೀ ಷೇರುಪೇಟೆಯು ಹಾಗೂ ಅದರಲ್ಲಿನ ಕಂಪನಿಗಳು ಕಳೆದ 2 ವರ್ಷದಿಂದ ಕಳಾಹೀನವಾಗುತ್ತಿವೆ. ಆದರೆ ಇದೇ ಅವಧಿಯಲ್ಲಿ ಭಾರತದ ಷೇರುಪೇಟೆಗಳಲ್ಲಿ ಹೂಡಿಕೆದಾರರು ಉತ್ಸಾಹದಿಂದ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದು ಭಾರತದ ಚೇತರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.