ಗಂಗೂಲಿ ಎರಡನೇ ಬಾರಿಬಂಗಾಳ ಕ್ರಿಕೆಟ್‌ ಅಧ್ಯಕ್ಷ,ಇಂದು ಅವಿರೋಧ ಆಯ್ಕೆ

| Published : Sep 22 2025, 01:00 AM IST

ಗಂಗೂಲಿ ಎರಡನೇ ಬಾರಿಬಂಗಾಳ ಕ್ರಿಕೆಟ್‌ ಅಧ್ಯಕ್ಷ,ಇಂದು ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಎರಡನೇ ಬಾರಿಗೆ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತವಾಗಿದೆ.

ಕೋಲ್ಕತಾ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಎರಡನೇ ಬಾರಿಗೆ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತವಾಗಿದೆ. ಸೋಮವಾರ ನಡೆಯಲಿರುವ ಸಿಎಬಿ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಗಂಗೂಲಿ ಅವರ ಜತೆಗೆ ಬಬ್ಲು ಕೋಲೆ ಕಾರ್ಯದರ್ಶಿ, ಮದನ್‌ ಮೋಹನ್‌ ಘೋಷ್‌ ಜಂಟಿ ಕಾರ್ಯದರ್ಶಿ, ಸಂಜಯ್‌ ದಾಸ್‌ ಖಜಾಂಜಿ ಮತ್ತು ಅನು ದತ್ತ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ. ಗಂಗೂಲಿ ಅವರು ಈ ಹಿಂದೆ 2019ರವರೆಗೆ ಬಂಗಾಳ ಕ್ರಿಕೆಟ್‌ ಅಧ್ಯಕ್ಷರಾಗಿದ್ದರು. ಬಳಿಕ 2022ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕದ ಶಿವಶಂಕರ್‌,

ರಾಜೇಶ್‌ಗೆ ದಿವ್ಯಂ ಪ್ರಶಸ್ತಿ

ಜೈಪುರ: ಅಂಗವಿಕಲ ಕ್ರಿಕೆಟಿಗರ ಸಾಧನೆಗಳನ್ನು ಗುರುತಿಸಿ ಕೊಡಮಾಡುವ ದಿವ್ಯಂ ಕ್ರಿಕೆಟ್‌ ಪ್ರಶಸ್ತಿಗೆ ಕರ್ನಾಟಕದ ರಾಜೇಶ್‌ ಕಣ್ಣೂರು, ಶಿವಶಂಕರ್‌ ಭಾಜನರಾಗಿದ್ದಾರೆ. ಭಾರತೀಯ ವಿಕಲಚೇತನ ಕ್ರಿಕೆಟ್‌ ಮಂಡಳಿಯು ರಾಜಸ್ಥಾನ ಅಂಗವಿಕಲ ಕ್ರಿಕೆಟ್‌ ಸಂಘದ ಸಹಯೋಗದಲ್ಲಿ ಈ ಪ್ರಶಸ್ತಿ ನೀಡುತ್ತಿದೆ. ಜೈಪುರದಲ್ಲಿ ಭಾನುವಾರ ನಡೆದ ದಿವ್ಯಂ ಕ್ರಿಕೆಟ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಾಜೇಶ್‌ ಅವರು ವಾರ್ಷಿಕ ಆಟಗಾರ ಪ್ರಶಸ್ತಿ ಪಡೆದರೆ, ಶಿವಶಂಕರ್‌ ಅವರು ಐಕಾನಿಕ್‌ ಆಟಗಾರ ಗೌರವಕ್ಕೆ ಭಾಜನರಾದರು. ಮುಂಬೈನ ಅನುಭವಿ ಕ್ರಿಕೆಟಿಗ ರವೀಂದ್ರ ಪಾಟೀಲ್‌ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.

ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ

ಭಾರತಕ್ಕೆ 1 ಚಿನ್ನ, 4 ಬೆಳ್ಳಿ

ನವದೆಹಲಿ: ಚೀನಾದಲ್ಲಿ ನಡೆಯುತ್ತಿರುವ 2025ನೇ ಸಾಲಿನ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪ್ರಮೋದ್‌ ಭಗತ್‌, ಸುಕಾಂತ್‌ ಕದಮ್‌, ಕೃಷ್ಣ ನಗರ್‌ ಪದಕ ಗೆದ್ದಿದ್ದಾರೆ.ಪ್ರಮೋದ್‌ ಇಂಡೊನೇಷ್ಯಾದ ಮುಹ್ ಅಲ್ ಇಮ್ರಾನ್ ವಿರುದ್ಧ ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದ ಫೈನಲ್‌ನಲ್ಲಿ 15-2, 21-19, 21-16 ಅಂತರದಲ್ಲಿ ಗೆದ್ದು ಚಿನ್ನ ತಮ್ಮದಾಗಿಸಿಕೊಂಡರು. ಡಬಲ್ಸ್‌ನಲ್ಲಿ ಪ್ರಮೋದ್‌ ಅವರು ಸುಕಾಂತ್‌ ಜತೆಗೂಡಿ ಬೆಳ್ಳಿ ಗೆದ್ದರು. ಇನ್ನು ಎಸ್‌ಎಲ್‌4 ವಿಭಾಗದಲ್ಲಿ ಸುಕಾಂತ್‌ ಫ್ರಾನ್ಸ್‌ನ ಲ್ಯೂಕಸ್ ಮಜುರ್ ಅವರ ವಿರುದ್ಧ ಫೈನಲ್‌ನಲ್ಲಿ 9-21, 8-21 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು. ಮತ್ತೊಬ್ಬ ಆಟಗಾರ ಕೃಷ್ಣ ಎಸ್‌ಎಚ್‌6 ವಿಭಾಗದಲ್ಲಿ ಥಾಯ್ಲೆಂಡ್‌ನ ನತ್ತಪಾಂಗ್ ಮೀಚಾ ವಿರುದ್ಧ 22-20, 7-21, 17-21 ಅಂತರದಲ್ಲಿ ಸೋತು ಬೆಳ್ಳಿ ಪಡೆದರು.