ಸಾರಾಂಶ
ಧರ್ಮ ಯುದ್ಧದ ನಡುವೆ ನಡುವೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ
ಧರ್ಮ, ಶಿಕ್ಷಣ, ಹಣಕಾಸು, ಕಾಯಿಲೆ ಸೇರಿ 60 ರೀತಿ ಪ್ರಶ್ನೆಗಳು2 ಲಕ್ಷ ಜನರಿಂದ 16 ದಿನದಲ್ಲಿ 7 ಕೋಟಿ ಜನರ ಮಾಹಿತಿ ಸಂಗ್ರಹ
==ಈ ದಾಖಲೆ ಸಿದ್ಧವಾಗಿಟ್ಟುಕೊಳ್ಳಿ
- ಪ್ರತಿ ವ್ಯಕ್ತಿಯ ಆಧಾರ್ ಕಾರ್ಡ್- ಆಧಾರ್ ಲಿಂಕ್ ಆಗಿರುವ ಮೊಬೈಲ್
- ಪಡಿತರ ಚೀಟಿ/ಮತ ಗುರುತಿನ ಚೀಟಿ- ಅಂಗವಿಕಲರ ಯುಡಿಐಡಿ ಸಂಖ್ಯೆ/ ಕಾರ್ಡ್
==ಏನೇನು ಮಾಹಿತಿ ಸಂಗ್ರಹ?
ವಯಸ್ಸು, ವಿದ್ಯಾರ್ಹತೆ, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಿತಿಗತಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯತೆ, ಕುಲಕಸುಬು, ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರ, ಮೂಲಸೌಕರ್ಯ, ಆರೋಗ್ಯ ಸೇವೆ, ಅಪೌಷ್ಟಿಕತೆ, ನ್ಯಾಯಾಲಯದಲ್ಲಿ ಪ್ರಕರಣ ಇದೆಯೇ? ಸಾಲ ಇವೆಯೇ? ಇದ್ದರೆ ಯಾವ ಸಾಲ? ಸರ್ಕಾರದಿಂದ ಸಬ್ಸಿಡಿ ಸಿಗುತ್ತಾ? ಸ್ವಂತ ಮನೆ ಹೊಂದಿದ್ದೀರಾ? ಅಡುಗೆಗೆ ಬಳಸುವ ಇಂಧನ, ಶೌಚಾಲಯ ಇದೆಯೇ? ಎಂಬುದೂ ಸೇರಿ ಹಲವು ಪ್ರಶ್ನೆಗಳನ್ನು ಗಣತಿದಾರರು ಕೇಳಲಿದ್ದಾರೆ.==
ಕನ್ನಡಪ್ರಭ ವಾರ್ತೆ ಬೆಂಗಳೂರುಕೆಲ ವಿವಾದ, ಗೊಂದಲಗಳ ನಡುವೆಯೇ ರಾಜ್ಯಾದ್ಯಂತ ಸೋಮವಾರದಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಆಡಳಿತಾತ್ಮಕ ವಿಚಾರ, ಸಿಬ್ಬಂದಿ ಕೊರತೆ, ಸಿದ್ಧತೆ ವಿಳಂಬದ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಸಮೀಕ್ಷೆ ಸೋಮವಾರದಿಂದ ಪ್ರಾರಂಭವಾಗುತ್ತಿಲ್ಲ. ಬದಲಿಗೆ ಜಿಬಿಎ ಹಾಗೂ ಆಯೋಗ ಸೇರಿ ಸಮೀಕ್ಷೆಯ ಆರಂಭದ ದಿನಾಂಕ ಪ್ರಕಟಿಸಲಿವೆ.ಈ ಸಮೀಕ್ಷೆ ಮೂಲಕ ಬೆಂಗಳೂರು ಸೇರಿ ರಾಜ್ಯದ 7 ಕೋಟಿ ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅಧ್ಯಯನ ನಡೆಯಲಿದೆ. ಇದಕ್ಕಾಗಿ 60 ಕಾಲಂಗಳಲ್ಲಿ ನೂರಾರು ಪ್ರಶ್ನೆಗಳನ್ನು ಕೇಳಲಿದ್ದು, ಎಲ್ಲದಕ್ಕೂ ಕರಾರುವಾಕ್ ಮಾಹಿತಿ ಪಡೆಯಲು ಗಣತಿದಾರರಿಗೆ ಸೂಚಿಸಲಾಗಿದೆ.
1,528 ಜಾತಿಗಳ ಮಾಹಿತಿ ಸಂಗ್ರಹ:ರಾಜ್ಯದಲ್ಲಿರುವ ಒಟ್ಟು 1,561 ಜಾತಿಗಳ ಪಟ್ಟಿಯನ್ನು ಆಯೋಗ ಪ್ರಕಟಿಸಿದ್ದು, ಈ ಪೈಕಿ ಕ್ರಿಶ್ಚಿಯನ್ ಹೆಸರಿನೊಂದಿಗಿನ 33 ಹಿಂದೂ ಜಾತಿಗಳ ಪಟ್ಟಿಯನ್ನು ನಮೂನೆಯಿಂದ ಕೈಬಿಡಲಾಗಿದೆ. ಉಳಿದಂತೆ 1,528 ಜಾತಿಗಳ ಪಟ್ಟಿ ನೀಡಲಾಗಿದೆ. ಇಷ್ಟೂ ಜಾತಿಗಳಲ್ಲಿ ಮಾಹಿತಿದಾರರ ಜಾತಿ ಇಲ್ಲದಿದ್ದರೆ ಇತರೆಯಲ್ಲಿ ತಮ್ಮ ಜಾತಿಯ ಹೆಸರು ನಮೂದಿಸಬಹುದು. ಜಾತಿ ಹೆಸರು ತಿಳಿಸಲು ಇಚ್ಛೆ ಇಲ್ಲದಿದ್ದರೆ ಇದು ಅನ್ವಯಿಸಲ್ಲ, ಜಾತಿ ಹೆಸರು ಹೇಳಲು ನಿರಾಕರಿಸಿರುತ್ತಾರೆ ಅಥವಾ ಜಾತಿ ಹೆಸರು ಗೊತ್ತಿಲ್ಲ ಎಂಬ ಆಯ್ಕೆಗಳನ್ನೂ ಆಯ್ದುಕೊಳ್ಳಬಹುದು.
ಇದು ಜಾತಿಗಣತಿ ಮಾತ್ರವಲ್ಲ:ಇದು ನಾಗರಿಕರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದ್ದು, ಕೇವಲ ಜಾತಿಗಣತಿ ಮಾತ್ರವೇ ಅಲ್ಲ. ಬದಲಿಗೆ ಕುಟುಂಬದ ಪ್ರತಿಯೊಬ್ಬರ ವಯಸ್ಸು, ವಿದ್ಯಾರ್ಹತೆ, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಿತಿಗತಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯತೆ, ಕುಲಕಸುಬು, ಸ್ಥಿರಾಸ್ತಿಯ ವಿವರ, ಚರಾಸ್ತಿಯ ವಿವರ (ದ್ವಿಚಕ್ರ ವಾಹನ, ಕಾರು, ಫ್ರಿಡ್ಜ್, ಮೊಬೈಲ್, ಇಂಟರ್ನೆಟ್ ಸಂಪರ್ಕ), ಕುಲಕಸುಬಿನಿಂದ ಯಾವುದಾದರೂ ಕಾಯಿಲೆಗೆ ತುತ್ತಾಗಿದ್ದಾರೆಯೇ? ಸಂಬಂಧಿಸಿದ ಗ್ರಾಮಗಳಿಗೆ ಮೂಲಸೌಕರ್ಯ, ಕುಡಿಯುವ ನೀರು, ಸೇತುವೆ, ಶಾಲೆಗಳ ಗುಣಮಟ್ಟ, ಮಕ್ಕಳು ಶಾಲೆ ಬಿಡುತ್ತಿದ್ದರೆ ಶಾಲೆ ಬಿಡುತ್ತಲು ಕಾರಣವೇನು? ಆರೋಗ್ಯ ಸೇವೆ ಹೇಗಿದೆ? ಆಸ್ಪತ್ರೆ ಎಷ್ಟು ದೂರದಲ್ಲಿದೆ? ಅಪೌಷ್ಟಿಕತೆ ಇದೆಯೇ? ಎಂಬಿತ್ಯಾದಿ ಮಾಹಿತಿಯನ್ನೂ ಪಡೆಯಲಿದ್ದಾರೆ.
ಅಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣ ಇದೆಯೇ? ಸಾಲಗಳು ಇವೆಯೇ? ಇದ್ದರೆ ಯಾತಕ್ಕಾಗಿ ಮಾಡಿರುವ ಸಾಲಗಳು? ಯಾವ ರೀತಿಯ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಸರ್ಕಾರದಿಂದ ಯಾವುದಾದರೂ ಸಹಾಯಧನ, ಸಾಲ ಅಥವಾ ಯೋಜನೆಯ ಫಲಾನುಭವಿ ಆಗಿದ್ದೀರಾ? ಸ್ವಂತ ಮನೆ ಹೊಂದಿದ್ದೀರಾ? ಹೊಂದಿದ್ದರೆ ಯಾವ ಮನೆ? ಅಡುಗೆಗೆ ಬಳಸುವ ಇಂಧನ (ಗ್ಯಾಸ್ ಅಥವಾ ಸೌದೆ ಒಲೆ ಇತ್ಯಾದಿ), ಶೌಚಾಲಯ ಇದೆಯೇ?, ಅನಿವಾಸಿ ಭಾರತೀಯರು ಯಾರಾದರೂ ಇದ್ದಾರಾ? ಎಂಬುದು ಸೇರಿ ನೂರಾರು ಪ್ರಶ್ನೆಗಳನ್ನು ಕೇಳಲಿದ್ದಾರೆ.ಅಂಗವಿಕಲರಿದ್ದರೆ ಯುಡಿಐಡಿ ನಂಬರ್, ಯುಡಿಐಡಿ ನಂಬರ್ ಇಲ್ಲದಿದ್ದರೆ ವಿಶೇಷ ಚೇತನರ ಪ್ರಮಾಣ ಪತ್ರದ ಫೋಟೋ ಅಪ್ಲೋಡ್ ಮಾಡುವುದು. ಯುಡಿಐಡಿ ನಂ/ವಿಶೇಷ ಚೇತನತೆಯ ಪ್ರಮಾಣಪತ್ರ ಇಲ್ಲ ಎಂದಾದಲ್ಲಿ ಅಂಗವಿಕಲತೆಯ ವಿಧ, ನಿತ್ಯದ ಚಟುವಟಿಕೆ ನಡೆಸಲು ಆರೈಕೆದಾರರು ಇರುವರೇ, ನಿತ್ಯದ ಚಟುವಟಿಕೆಗಳಲ್ಲಿ ವಿಕಲಚೇತನತೆಗೆ ಅನುಗುಣವಾಗಿ ಸಾಧನ ಸಲಕರಣೆ ಬಳಸುತ್ತಿದ್ದೀರಾ, ವೈವಾಹಿಕ ಸ್ಥಾನಮಾನ, ವಿವಾಹ ಆದ ಸಮಯದಲ್ಲಿ ವಯಸ್ಸಿನ ಮಾಹಿತಿಯನ್ನೂ ಕೇಳಲಾಗುತ್ತದೆ.
ಈ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿ ಆಯೋಗವು ಡಿಸೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಿದ್ದು, ಇದರ ಆಧಾರದ ಮೇಲೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಲು ಪರಿಗಣಿಸಬಹುದಾಗಿದೆ.2 ಲಕ್ಷ ಸಿಬ್ಬಂದಿ, 16 ದಿನಗಳ ಕಾಲ ಸಮೀಕ್ಷೆ:
ಸೆ.22 ರಿಂದ ಅ.7 ರವರೆಗೆ 16 ದಿನಗಳ ಕಾಲ ನಡೆಯುವ ಸಮೀಕ್ಷೆಯಲ್ಲಿ 1.75 ಲಕ್ಷ ಸರ್ಕಾರಿ ಶಾಲೆ ಶಿಕ್ಷಕರು ಸೇರಿ 2 ಲಕ್ಷ ಸಿಬ್ಬಂದಿ ಭಾಗವಹಿಸಲಿದ್ದಾರೆ. ಸಮೀಕ್ಷೆ ವೇಳೆ ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಮೂಲ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಆನ್ಲೈನ್ ಸಮೀಕ್ಷೆ ಮಾಡಲಿದ್ದಾರೆ.ಗಣತಿದಾರರು 60 ಪ್ರಶ್ನೆಗಳನ್ನು ಕೇಳಲಿದ್ದಾರೆ. ಆಶಾ ಕಾರ್ಯಕರ್ತೆಯರು ಮುಂಚಿತವಾಗಿಯೇ ಈ 60 ಪ್ರಶ್ನೆಗಳ ನಮೂನೆಯನ್ನು ಪ್ರತಿ ಮನೆಗಳಿಗೆ ತೆರಳಿ ನೀಡಲಿದ್ದಾರೆ. ಆ ಮೂಲಕ ಸಾರ್ವಜನಿಕರು ಪ್ರಶ್ನೆಗಳನ್ನು ಓದಿ ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದು. ಬಳಿಕ ಗಣತಿದಾರರು ಮನೆಗೆ ಬಂದು 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿದ್ದಾರೆ.
ಆಧಾರ್ ಕಾರ್ಡ್ ಸಿದ್ಧವಾಗಿಟ್ಟಿಕೊಳ್ಳಿಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳ ವಿವರ ಕಡ್ಡಾಯ. ಜತೆಗೆ ಯಾವ ಮೊಬೈಲ್ ನಂಬರ್‌ಗಳಿಗೆ ಲಿಂಕ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಆಧಾರ್ ಕಾರ್ಡ್ ನಂಬರ್‌ಗೆ ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಲಿಂಕ್ ಆಗಿರದಿದ್ದರೆ, ಲಿಂಕ್ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಇದ್ದು, ಲಿಂಕ್ ಆಗಿರುವ ಮೊಬೈಲ್ ನಂಬರ್ ಇಲ್ಲದಿದ್ದರೆ, ಹತ್ತಿರದ ಆಧಾರ್ ಎನ್ರೋಲ್ಮೆಂಟ್ ಸೆಂಟರ್/ಗ್ರಾಮ ಒನ್ ಸೆಂಟರ್‌ಗೆ ಭೇಟಿ ನೀಡಿ, ಈಗ ಬಳಸುತ್ತಿರುವ ಮೊಬೈಲ್ ನಂಬರ್‌ಗೆ ಲಿಂಕ್ ಮಾಡಿಸಿಕೊಳ್ಳಬೇಕಾಗುತ್ತದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವೆಬ್‌ಸೈಟ್‌ನಲ್ಲಿ (https://kscbc.karnataka.gov.in) ಅಂಚೆ ಇಲಾಖೆ ಸಿಬ್ಬಂದಿ ವಿವರ ಪ್ರಕಟಿಸಲಾಗಿದೆ. ಅವರ ನೆರವಿನಿಂದ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.==
ಆದಾಯದ ಮಾಹಿತಿ ಸಂಗ್ರಹಸಮೀಕ್ಷೆಯಲ್ಲಿ ಆದಾಯದ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ವೈಯಕ್ತಿಕ ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿದಾರರೇ, ನೀವು ಬ್ಯಾಂಕ್ ಅಕೌಂಟ್ ಹೊಂದಿದ್ದೀರಾ, ನೀವು ಯಾವ ಕೌಶಲ್ಯಾಭಿವೃದ್ಧಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುತ್ತೀರಿ, ನೀವು ಕಂಪ್ಯೂಟರ್ ಸಾಕ್ಷರತೆ ಹೊಂದಿದ್ದೀರಾ ಹಾಗೂ ಆರೋಗ್ಯ ವಿಮೆಯ ವಿವರಗಳು ಮತ್ತಿತರ ಮಾಹಿತಿ ಪಡೆಯಲಾಗುತ್ತದೆ. ಅಲ್ಲದೆ, ರಾಜಕೀಯ ಪ್ರಾತಿನಿಧ್ಯದ ವಿವರಗಳನ್ನೂ ಪಡೆಯಲಾಗುತ್ತದೆ. ಜನಪ್ರತಿನಿಧಿ, ಪದಾಧಿಕಾರಿಗಳಾಗಿದ್ದಲ್ಲಿ ವಿವರಗಳು, ನಿಗಮ ಮಂಡಳಿ, ಸಹಕಾರಿ ಸಂಘ, ಪದಾಧಿಕಾರಿಯಾಗಿದ್ದಲ್ಲಿ ಆ ಕುರಿತ ವಿವರಗಳನ್ನೂ ಪಡೆಯಲಾಗುತ್ತದೆ.
==ಏನಿದು ಸ್ಟಿಕ್ಕರ್?
ಸಮೀಕ್ಷೆಗೆ ಅರ್ಹವಾದ ಪ್ರತಿ ಮನೆಗೂ ಈಗಾಗಲೇ ಯುಎಚ್‌ಐಡಿ ಎಂದರೆ ಯೂನಿಕ್ ಹೌಸ್ ಹೋಲ್ಡ್ ಐಡೆಂಟಿಫಿಕೇಶನ್ ಸ್ಟಿಕ್ಕರ್ ಅಂಟಿಸಲಾಗಿದೆ. ಈ ಮೂಲಕ ರಾಜ್ಯದ ಪ್ರತಿ ಮನೆಗೂ ಒಂದು ಗುರುತಿಸುವಿಕೆಯ ಸಂಖ್ಯೆ ನೀಡಲಾಗುತ್ತಿದೆ. ಈ ಸಂಖ್ಯೆ ಆಧಾರವಾಗಿಟ್ಟುಕೊಂಡು ಗಣತಿದಾರರು ಮುಂದಿನ ಹಂತದ ಸಮೀಕ್ಷೆ ನಡೆಸಲಿದ್ದಾರೆ.ಹೀಗಾಗಿ ವಿದ್ಯುತ್ ಸಿಬ್ಬಂದಿ ಅಂಟಿಸುವ ಸ್ಟಿಕ್ಕರ್ ಗಳನ್ನು ಯಾವುದೇ ಕಾರಣಕ್ಕೂ ಜನ ತೆಗೆದು ಹಾಕುವುದು, ಮುಚ್ಚುವುದು ಅಥವಾ ನಾಶ ಪಡಿಸುವ ಕೆಲಸ ಮಾಡಬಾರದು. ಒಂದು ವೇಳೆ ಮಾಡಿದ್ದಲ್ಲಿ ಸಮೀಕ್ಷೆ ಕಾರ್ಯಕ್ಕೆ ಅಡಚಣೆ ಉಂಟಾಗಲಿದ್ದು, ಸಮೀಕ್ಷೆ ಕಾರ್ಯದ ಸಂಗ್ರಹಕ್ಕೂ ಅಡಚಣೆ ಆಗಲಿದೆ.
==ಸಮೀಕ್ಷೆಯ ಮಹತ್ವವೇನು?
ಹಿಂದುಳಿದ ವರ್ಗಗಳ ಆಯೋಗವು ಈ ಡೇಟಾವನ್ನು ಬಳಸಿ, ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಸರಿಯಾದ ಮೀಸಲಾತಿ, ಶಿಕ್ಷಣ ಸೌಲಭ್ಯಗಳು, ಉದ್ಯೋಗ ಅವಕಾಶಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ. ಉದಾಹರಣೆಗೆ, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಶಾಲೆಗಳು ಅಥವಾ ಸ್ಕಾಲರ್ ಶಿಪ್‌ಗಳನ್ನು ಒದಗಿಸಬಹುದು. ಸಾಮಾಜಿಕವಾಗಿ, ಜಾತಿ ಆಧಾರಿತ ಅಸಮಾನತೆಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಹುದು.==
ಸಹಾಯವಾಣಿ ಸಂಖ್ಯೆ8050770004
ಆನ್ಲೈನ್ ಸಮೀಕ್ಷೆಯಲ್ಲೂ ಭಾಗವಹಿಸಬಹುದುಕೆಲಸದ ಮೇಲೆ ಹೊರಗೆ ಹೋಗಿರುವವರ ಮಾಹಿತಿ ಪಡೆಯುವ ದೃಷ್ಟಿಯಿಂದ ಆಧಾರ್ ಪರಿಶೀಲನೆ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಈ ಕುರಿತು https://kscbc.karnataka.gov.in ರಲ್ಲಿ ಮಾಹಿತಿ ನೀಡಲಾಗಿದೆ.
==ಜಾತಿಗಣತಿ ವೇಳೆ ಎದುರಾಗುವ
ಕೆಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ1.ಮಾಹಿತಿದಾರ ಕುಟುಂಬದ ಮುಖ್ಯಸ್ಥ ಫೋಟೋ ತೆಗೆಸಿಕೊಳ್ಳುವುದು ಕಡ್ಡಾಯವೇ?
-ಮಾಹಿತಿದಾರ ಕುಟುಂಬದ ಮುಖ್ಯಸ್ಥ ಅಥವಾ ಮಾಹಿತಿದಾರನ ಫೋಟೋ ತೆಗೆಯುವುದು ಕಡ್ಡಾಯ.2.ಕುಟುಂಬದ ಮುಖ್ಯಸ್ಥ ಮೊಬೈಲ್ ನಂಬರ್ ಕೊಡುವುದು ಕಡ್ಡಾಯವೇ?
-ಮೊಬೈಲ್ ನಂಬರ್ ನೀಡುವುದು ಕಡ್ಡಾಯ. ಮೊಬೈಲ್ ಬಳಕೆ ಮಾಡದಿದ್ದರೆ ಪರಿಚಯಸ್ಥರ ಮೊಬೈಲ್ ಮೂಲಕ ಸಮೀಕ್ಷೆಗೆ ನೆರವಾಗಬಹುದು.3.ಅಂತರ್ಜಾತಿ ವಿವಾಹವಾದ ಮನೆಯಲ್ಲಿ ಯಜಮಾನನ ಪತ್ನಿ ತನ್ನ ಮಕ್ಕಳಿಗೆ ತನ್ನ ಜಾತಿ ನಮೂದಿಸಲು ಹೇಳಿದರೆ?
- ಮಕ್ಕಳ ಜಾತಿ ತಂದೆಯ ಜಾತಿಯನ್ನು ಅವಲಂಬಿಸಿ ನಿರ್ಧರಿಸಲಾಗುತ್ತದೆ. ಆದ ಕಾರಣ ಪತ್ನಿಯ ಜಾತಿ ಆಧಾರದ ಮೇಲೆ ಮಕ್ಕಳ ಜಾತಿ ಪರಿಗಣಿಸಲು ಅವಕಾಶವಿಲ್ಲ.4.ಗಣತಿ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆಯಾದರೆ ಸರ್ವೆ ಮಾಡಲು ತೊಂದರೆಯಲ್ಲವೇ?
-ನೆಟ್‌ವರ್ಕ್ ಇಲ್ಲದಿದ್ದರೆ ಆಫ್‌ಲೈನ್ ಮೋಡ್‌ನಲ್ಲಿ ದಾಖಲಿಸಲು ಸಾಧ್ಯವಿಲ್ಲ. ಹೀಗಾಗಿ ನೆಟ್‌ವರ್ಕ್ ಸಂಪರ್ಕ ಬಂದ ಬಳಿಕ ಸಮೀಕ್ಷೆ ನಡೆಸಬೇಕು. ಅಲ್ಲಿಯವರೆಗೆ ಮೂರು ಮನೆಗಳ ಸಮೀಕ್ಷೆಯ ಮಾಹಿತಿಯನ್ನು ಡ್ರಾಫ್ಟ್‌ನಲ್ಲಿಟ್ಟು ಮಾಡಲು ಅವಕಾಶವಿದೆ. ನೆಟ್‌ವರ್ಕ್ ಸಂಪರ್ಕವೇ ಇಲ್ಲದ ಕಡೆ ಅಂಗನವಾಡಿ ಕಾರ್ಯಕರ್ತರ ಶಿಬಿರ ಮೂಲಕ ಮಾಡಬೇಕು.5.ಹೆಣ್ಣು ಮಗಳು ಇತ್ತೀಚೆಗೆ ಮದುವೆಯಾಗಿ ಗಂಡನ ಮನೆಗೆ ಬಂದಾಗ ತವರು ಮನೆ ಅಥವಾ ಗಂಡನ ಮನೆ ಯಾವುದನ್ನು ಬರೆಸಬೇಕು?
-ಪಡಿತರ ಚೀಟಿಯಲ್ಲಿ ಹೆಸರು ತವರು ಮನೆಯಲ್ಲಿ ಇದ್ದರೆ ಅಲ್ಲೇ ನೀಡಬೇಕು.6.ಎಸ್ಸಿ ಪ್ರಮಾಣಪತ್ರ ಇಲ್ಲದಿರುವಾಗ ವಿವಾದಿತ ಜಾತಿಗಳ ಸಮೀಕ್ಷೆ ವೇಳೆ ಹೇಗೆ ಮಾಡಲಿದ್ದಾರೆ?
-101 ಜಾತಿಗಳ ಪಟ್ಟಿಯಲ್ಲಿರುವ ಹೆಸರನ್ನು ಮಾತ್ರ ನಮೂದಿಸುತ್ತಾರೆ.7.ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಇದ್ದರೆ?
-ಪಡಿತರ ಚೀಟಿವಾರು ಪ್ರತ್ಯೇಕ ಕುಟುಂಬಗಳೆಂದು ಪರಿಗಣಿಸಿ ಸಮೀಕ್ಷೆ.8.ಹೊರ ರಾಜ್ಯದವರು ಇಲ್ಲಿ ನೆಲೆಸಿದ್ದರೆ?
-ಹೊರ ರಾಜ್ಯದ ಆಧಾರ್ ಸಂಖ್ಯೆ ಇದ್ದರೂ ಸಮೀಕ್ಷೆ ನಡೆಸಲಾಗುವುದು.9.ಗಣತಿ ಬಳಿಕ ಮಾಹಿತಿ ಬದಲಿಸಲು ಕೋರಬಹುದೇ?
-ಸಮೀಕ್ಷೆಯ ನಮೂನೆಯನ್ನು ಮಾಹಿತಿ ಸಹಿತ ಸಬ್ಮಿಟ್ ಮಾಡುವ ಮೊದಲು ತಿದ್ದುಪಡಿ ಮಾಡಲು ಅವಕಾಶವಿದೆ. ನಂತರ ತಿದ್ದುಪಡಿಗೆ ಅವಕಾಶವಿಲ್ಲ.