ಹೊಸ ವರ್ಷದ ಮೊದಲ ದಿನ ಮೋದಿ ನಿರ್ಧಾರ ರೈತ ಪರ : ಕೇಂದ್ರ ಮೂರು ಬಂಪರ್‌ ಕೊಡುಗೆ ಪ್ರಕಟ

| Published : Jan 02 2025, 01:45 AM IST / Updated: Jan 02 2025, 04:21 AM IST

ಸಾರಾಂಶ

2025ರ ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮೂರು ಬಂಪರ್‌ ಕೊಡುಗೆ ಪ್ರಕಟಿಸಿದೆ.  

ನವದೆಹಲಿ: 2025ರ ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮೂರು ಬಂಪರ್‌ ಕೊಡುಗೆ ಪ್ರಕಟಿಸಿದೆ. ಎರಡು ಕೃಷಿ ವಿಮಾ ಯೋಜನೆಗಳ ಅವಧಿಯನ್ನು ಮತ್ತೆ ಒಂದು ವಿಸ್ತರಣೆ ಮಾಡಿದ್ದರೆ, ಸಬ್ಸಿಡಿ ದರದಲ್ಲಿ ಡಿಎಪಿ ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ‘ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿ ಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ’ ಎಂದಿದ್ದಾರೆ.

ವಿಮಾ ಯೋಜನೆ ವಿಸ್ತರಣೆ:

ಕೃಷಿ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ (ಪಿಎಂಎಫ್‌ಬಿಐ) ಹಾಗೂ ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್‌ಡಬ್ಲ್ಯುಬಿಸಿಐಎಸ್‌) ಗಳಿಗೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಕಾರಣ ಅವುಗಳ ಅವಧಿಯನ್ನು ಇನ್ನೂ ಒಂದು ವರ್ಷ (2025-26 ವರೆಗೆ) ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈ 2 ಯೋಜನೆಗಳಿಗಾಗಿ 2020-21ರಿಂದ 2024-25 ವರೆಗೆ ಮೀಸಲಿರಿಸಿದ್ದ 66,550 ಕೋಟಿ ರು. ಮೊತ್ತವನ್ನು 2021-22ರಿಂದ 2025-26 ವರೆಗೆ 69,515.71 ಕೋಟಿ ರು.ಗೆ ಏರಿಕೆ ಮಾಡಲು ಸಂಪುಟ ಸಭೆ ನಿರ್ಧರಿಸಿದೆ.

ತಂತ್ರಜ್ಞಾನಕ್ಕೆ ಪ್ರತ್ಯೇಕ ನಿಧಿ:

ಕೃಷಿ ವಿಮಾ ಯೋಜನೆಗಳ ಜಾರಿಗೆ ಬಳಸಲಾಗುವ ತಂತ್ರಜ್ಞಾನ ಅಭಿವೃದ್ಧಿಗೆಂದು 824.77 ಕೋಟಿ. ಮೊತ್ತದ ಪ್ರತ್ಯೇಕ ಎಫ್‌ಐಎಟಿ ನಿಧಿ ಸ್ಥಾಪಿಸಲಾಗಿದೆ. ಇದನ್ನು ಬೆಳೆ ಹಾನಿ ಮೌಲ್ಯಮಾಪನ, ಕ್ಲೈಂಗಳ ಸೆಟಲ್‌ಮೆಂಟ್‌, ನೋಂದಣಿ ಪ್ರಕ್ರಿಯೆ ಸರಳೀಕರಣಕ್ಕೆ, ಯೆಸ್‌-ಟೆಕ್‌, ಹವಾಮಾನ ಮಾಹಿತಿ ಮತ್ತು ನೆಟ್‌ವರ್ಕ್ ಡೇಟಾ ವ್ಯವಸ್ಥೆ (ವಿಂಡ್ಸ್‌), ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಬಳಸಲಾಗುವುದು.

ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ:

ರೈತರಿಗೆ ಕೈಗೆಟುಕುವ ದರದಲ್ಲಿ ಗೊಬ್ಬರ ಒದಗಿಸುವ ಸಲುವಾಗಿ ಡಿ-ಅಮೋನಿಯಂ ಫಾಸ್ಫೇಟ್‌ (ಡಿಎಪಿ) ಗೊಬ್ಬರವನ್ನು ಇನ್ನೂ ಒಂದು ವರ್ಷಗಳ ಕಾಲ ಸಬ್ಸಿಡಿ ದರದಲ್ಲಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 3850 ಕೋಟಿ ರು. ನೆರವು ನೀಡಲು ಸಂಪುಟ ಸಭೆ ನಿರ್ಧರಿಸಿದೆ. ಪ್ರಸ್ತುತ ಪ್ರತಿ 50 ಕೆಜಿ ಡಿಎಪಿ ಗೊಬ್ಬರವನ್ನು ರೈತರಿಗೆ ಸರ್ಕಾರ 1350 ರು.ಗೆ ವಿತರಣೆ ಮಾಡುತ್ತಿದೆ. ಇದಕ್ಕಾಗಿ ಪ್ರತಿ ಟನ್‌ಗೆ 3500 ರು.ನಷ್ಟು ಸಬ್ಸಿಡಿ ನೀಡುತ್ತಿದೆ.ಸಬ್ಸಿಡಿ ಡಬಲ್‌:

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುವ ಮುನ್ನಾ 10 ವರ್ಷಗಳ ಅವಧಿಯಾದ 2004-14ರಲ್ಲಿ ರಸಗೊಬ್ಬರ ಸಬ್ಸಿಡಿಗೆ 5.5 ಲಕ್ಷ ಕೋಟಿ ರು. ವಿನಿಯೋಗಿಸಿದ್ದರೆ, 2014-24ರಲ್ಲಿ ಸಬ್ಸಿಡಿ ಮೊತ್ತ 11.9 ಲಕ್ಷ ಕೋಟಿ ರು.ಗೆ ಏರಿದೆ. ಅಂದರೆ ಡಬಲ್‌ ಆಗಿದೆ.

- 2 ವಿಮೆ ಯೋಜನೆ, ಗೊಬ್ಬರ ಸಬ್ಸಿಡಿ 1 ವರ್ಷ ವಿಸ್ತರಣೆ

- ಮೊದಲ ನಿರ್ಣಐ ರೈತರಿಗೆ ಅರ್ಪಣೆ: ಪ್ರಧಾನಿ ==

ರೈತಸ್ನೇಹಿ ನಿರ್ಣಯ

- ಫಸಲ್‌ ಬಿಮೆ, ಹವಾಮಾನ ವಿಮೆ ಅವಧಿ 1 ವರ್ಷ ಹೆಚ್ಚಳ

- 2 ಯೋಜನೆಗೆ ಮೀಸಲಿದ್ದ ಮೊತ್ತ ₹3000 ಕೋಟಿ ಏರಿಕೆ

- 66,550 ಕೋಟಿ ರು. ಅನುದಾನ 69,515 ಕೋಟಿಗೇರಿಕೆ

- ಡಿಎಪಿ ರಸಗೊಬ್ಬರ ಸಬ್ಸಿಡಿಗೆ 3850 ಕೋಟಿ ರು. ನೆರವು

- ಯುಪಿಎ ಅವಧಿಗಿಂತ ಎನ್‌ಡಿಎ ಅವಧಿಯಲ್ಲಿ ಡಬಲ್‌ ಸಬ್ಸಿಡಿ

ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ. ಇದರಡಿಯಲ್ಲಿ, ರೈತರ ಬೆಳೆಗಳಿಗೆ ಹೆಚ್ಚು ಭದ್ರತೆ ಒದಗಿಸುವ ಹಾಗೂ ಹಾನಿಗಳ ಬಗೆಗಿನ ಚಿಂತೆ ಕಡಿಮೆ ಮಾಡುವ ಬೆಳೆ ವಿಮಾ ಯೋಜನೆಗೆ ಹಂಚಿಕೆ ಹೆಚ್ಚಳ ಮಾಡುವ ನಿರ್ಣಯ ಕೈಗೊಂಡಿದ್ದೇವೆ.

ನರೇಂದ್ರ ಮೋದಿ, ಪ್ರಧಾನಿ