ಮೈಕ್ರೋಫೈನಾನ್ಸ್‌ ಸಾಲ ವಸೂಲಿ ಕಾಯ್ದೆ ಪರಿಣಾಮ

ದೇಶಾದ್ಯಂತ ಬ್ಯಾಂಕುಗಳಿಂದ ಕಿರು ಸಾಲಕ್ಕೆ ಬ್ರೇಕ್‌

ಮುಂಬೈ: ಫೈನಾನ್ಸ್‌ ಕಂಪನಿಗಳ ಕಿರುಕುಳಕ್ಕೆ ಕಡಿವಾಣ ಹಾಕಲು ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ತಡೆ) ಕುರಿತ ಕಾನೂನು ಜಾರಿಗೆ ತಂದ ಬಳಿಕ ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ ಸಾಲ ವಿತರಣೆ ಪ್ರಮಾಣ ಗಣನೀಯವಾಗಿ ಕುರಿಸಿದೆ. ಸಾಲ ವಿತರಣೆ ಶೇ.34ರಷ್ಟು ಕುಸಿತ ಕಂಡಿದೆ. ಇದು ದೇಶದಲ್ಲೇ ಅತಿ ಹೆಚ್ಚು ಎಂದು ವರದಿಯೊಂದು ಹೇಳಿದೆ.

ಮೈಕ್ರೋಫೈನಾನ್ಸ್‌ ಕ್ಷೇತ್ರದಲ್ಲಿ ಡೀಫಾಲ್ಟ್‌ (ಸಾಲಮರುಪಾವತಿಯಲ್ಲಿ ವಿಫಲ) ಪ್ರಮಾಣ ಹೆಚ್ಚುತ್ತಿರುವುದು, ಸಾಲವಸೂಲಾತಿಗೆ ಕಾನೂನು ತೊಡಕು ಮತ್ತಿತರ ಕಾರಣಗಳಿಂದಾಗಿ ಸರ್ಕಾರಿ ಬ್ಯಾಂಕ್‌ಗಳು ಸೇರಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕೂಡ ಸಣ್ಣ ಸಾಲಗಳನ್ನು ನೀಡಲು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮವಾಗಿ ದೇಶಾದ್ಯಂತ ಬ್ಯಾಂಕ್‌ಗಳ ಮೈಕ್ರೋಫೈನಾನ್ಸ್‌ ವಿಭಾಗದಿಂದ ನೀಡಲಾಗುವ ಸಾಲದ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮೂರನೇ ತ್ರೈಮಾಸಿಕದಲ್ಲಿ ಮೈಕ್ರೋ ಫೈನಾನ್ಸ್‌ನ ಸಾಲದ ಪ್ರಮಾಣ ಶೇ.40ರಷ್ಟು ಕುಸಿತ ಕಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಮೈಕ್ರೋಫೈನಾನ್ಸ್‌ ಸಾಲದ ಪ್ರಮಾಣ 65,687 ಕೋಟಿ ರು.ಗೆ ಇಳಿಮುಖವಾಗಿದೆ ಎಂದು ಈಕ್ವಿಫ್ಯಾಕ್ಸ್‌ ಮತ್ತು ಸಿಡ್ಬಿ ವರದಿ ಹೇಳಿದೆ.

==


ಸ್ಪೀಕರ್‌ ಮೇಲೆ ಪೇಪರ್‌ ಎಸೆದ 8 ವಿಪಕ್ಷ ಸದಸ್ಯರ ಅಮಾನತು ಇಂದು ರದ್ದು

ನವದೆಹಲಿ: ಬಜೆಟ್‌ ಅಧಿವೇಶನದ ಮೊದಲ ಭಾಗದಲ್ಲಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ಮೇಲೆ ಪೇಪರ್‌ ಎಸೆದಿದ್ದ ಕಾರಣಕ್ಕೆ ಅಧಿವೇಶನ ಮುಗಿಯುವವರೆಗೆ (ಏ.2) ಅಮಾನತಾಗಿದ್ದ 8 ಸಂಸದರ ಅಮಾನತು ಮಂಗಳವಾರ ರದ್ದುಗೊಳ್ಳುವ ಸಾಧ್ಯತೆಯಿದೆ. ಫೆ.3ರಂದು ಕಾಂಗ್ರೆಸ್‌ನ 7, ಸಿಪಿಐ(ಎಂ)ನ ಓರ್ವ ಸಂಸದರು ಸಂಸತ್‌ನಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ಅಧಿವೇಶನ ಮುಗಿಯುವ ತನಕ ಅಮಾನತುಗೊಳಿಸಿ ಸ್ಪೀಕರ್‌ ಆದೇಶಿಸಿದ್ದರು. ಆದರೆ ವಿಪಕ್ಷಗಳು ಸ್ಪೀಕರ್‌ ಅವರಿಗೆ ಈ ಆದೇಶ ರದ್ದು ಮಾಡುವಂತೆ ಮನವಿ ಮಾಡಿದ್ದವು. ಬಜೆಟ್‌ ಅಧಿವೇಶನದ ಎರಡನೇ ಹಂತ ಆರಂಭವಾದ ಬಳಿಕ ಆಡಳಿತ, ವಿಪಕ್ಷಗಳು ಸಭೆ ನಡೆಸಿದ್ದು, ಅಶಿಸ್ತಿನ ವರ್ತನೆ ತೋರುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಬಿರ್ಲಾ ಸಂಸದ ಅಮಾನತು ವಾಪಸ್‌ ಪಡೆಯಬಹುದು ಎನ್ನಲಾಗಿದೆ.

==

ಡ್ರಗ್ಸ್‌ ಕೇಸಿನಲ್ಲಿ ಸಿಕ್ಕಿಬಿದ್ದ ಎಂಪಿಗೆ ಟಿಡಿಪಿ ನೋಟಿಸ್‌

ನಾನು ಯಾವುದೇ ತಪ್ಪು ಮಾಡಿಲ್ಲ: ಸಂಸದ

ಟಿಡಿಪಿ ತೆಲುಗು ಡ್ರಗ್ಸ್‌ ಪಾರ್ಟಿ: ವಿಪಕ್ಷ

ಸಂಸದ ರಾಜೀನಾಮೆಗೆ ನಾಯಕರ ಆಗ್ರಹ

ಅಮರಾವತಿ: ಬಿಆರ್‌ಎಸ್‌ ಮಾಜಿ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿಯ ರೇವ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದಿದ್ದ ಎಲೂರು ಕ್ಷೇತ್ರದ ಟಿಡಿಪಿಯ ಸಂಸದ ಪುಟ್ಟ ಮಹೇಶ್‌ ಕುಮಾರ್‌ ಪ್ರಕರಣ ಸದ್ಯ ಆಂಧ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು ಅವರ ರಾಜೀನಾಮೆಗೆ ಆಗ್ರಹ ಕೇಳಿ ಬಂದಿದೆ. ಈ ಬೆನ್ನಲ್ಲೇ ತೆಲುಗು ದೇಶಂ ಪಕ್ಷ ಅವರಿಗೆ ನೋಟಿಸ್‌ ನೀಡಿದೆ.

ಟಿಡಿಪಿ ನೋಟಿಸ್‌ನಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರ ಇರುವಂತೆ ಸಂಸದರಿಗೆ ಸೂಚಿಸಿದೆ. ಜತೆ ಐದು ದಿನಗಳಲ್ಲಿ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿದೆ.ಆರೋಪ ನಿರಾಕರಿಸಿದ ಸಂಸದ:

ಇನ್ನು ತಮ್ಮ ಮೇಲಿನ ಡ್ರಗ್ಸ್ ಸೇವನೆ ಆರೋಪವನ್ನು ಸಂಸದ ನಿರಾಕರಿಸಿದ್ದಾರೆ. ಅಲ್ಲಿ ತಂಗಿದ್ದ ಹಲವರು ನನ್ನನ್ನು ಭೇಟಿಯಾಗಲು ವಿನಂತಿಸಿದ್ದಕ್ಕೆ ಭೋಜನಕೂಟದಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾರೆ. ‘ ನಾನು ಭೋಜನದ ಸಮಯದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಎಂದಿಗೂ ದ್ರೋಹ ಮಾಡುವುದಿಲ್ಲ’ ಎಂದು ಎಕ್ಸ್‌ನಲ್ಲಿ ಮಾಡಿದ್ದಾರೆ,ರಾಜೀನಾಮೆಗೆ ಆಗ್ರಹ:

ಟಿಡಿಪಿ ಸಂಸದರ ಪ್ರಕರಣಕ್ಕೆ ವೈಎಸ್‌ಆರ್‌ಸಿಪಿ ಕಿಡಿಕಾರಿದ್ದು ಸಂಸದರ ರಾಜೀನಾಮೆಗೆ ಆಗ್ರಹಿಸಿದೆ. ‘ಸಂಸದರು ಸಾಂವಿಧಾನಿಕ ಸಂಸ್ಥೆಗೆ ಅಪಖ್ಯಾತಿ ತಂದಿದ್ದಾರೆ. ಟಿಡಿಪಿ ತೆಲುಗು ಡ್ರಗ್ಸ್‌ ಪಾರ್ಟಿಯಾಗಿ ಮಾರ್ಪಟ್ಟಿದೆ’ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಗಂಭೀರ ಆರೋಪ ಕೇಳಿ ಬಂದೂ ಸರ್ಕಾರ ಮೌನವಾಗಿರುವುದನ್ನು ಟೀಕಿಸಿದ್ದಾರೆ.ಇನ್ನು ಮಾಜಿ ಶಾಸಕನ ಫಾರ್ಮ್‌ ಹೌಸ್‌ನಲ್ಲಿ ನಡೆದದ ಈ ರೇವ್‌ ಪಾರ್ಟಿಯಲ್ಲಿ ಬೆಂಗಳೂರಿನ ವಕೀಲ ಕೌಶಿಕ್ ರವಿ ಎನ್ನುವವರೂ ಕೂಡ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

==

ಯುದ್ಧದಿಂದ ಭಾರತದ 4335, ವಿದೇಶ 1187 ವಿಮಾನ ಸಂಚಾರ ರದ್ದು

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಕಳೆದ 17 ದಿನಗಳಲ್ಲಿ ಭಾರತದಿಂದ ವಿದೇಶಕ್ಕೆ ಸಂಚರಿಸಬೇಕಿದ್ದ ಭಾರತೀಯ ಸಂಸ್ಥೆಗಳ 4335 ವಿಮಾನಗಳ ಸಂಚಾರ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 1187 ವಿಮಾನಗಳ ಹಾರಾಟ ರದ್ದಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ. ಜತೆಗೆ ಇದೇ ಅವಧಿಯಲ್ಲಿ 2.19 ಲಕ್ಷ ಜನರು ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣಿಸಿದ್ದಾರೆ ಎಂದು ಅವರು ಹೇಳಿದ್ದಾರೆ.