ಸಾರಾಂಶ
ಗುಜರಾತ್‌ನಲ್ಲಿ ದೇಶದ ಮೊದಲ ಸಬ್‌ಮರೀನ್ ಪ್ರವಾಸೋದ್ಯಮ ಆರಂಬಿಸಲು ಸಿದ್ಧತೆ ನಡೆಸಿದ್ದು, 2024ರ ದೀಪಾವಳಿ ವೇಳೆಗೆ ಕಾರ್ಯಾರಂಭ ಮಅಡುವ ಸಾಧ್ಯತೆಯಿದೆ. ಆದರೆ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ ಶೀಘ್ರದಲ್ಲೇ ಪ್ರಕಟ ಮಾಡಲಿದೆ ಎನ್ನಲಾಗಿದೆ.
ದ್ವಾರಕ: ದೇಶದಲ್ಲೇ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮವನ್ನು ಆರಂಭಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಶ್ರೀಕೃಷ್ಣ ನಿರ್ಮಿಸಿದ್ದ ಎಂದು ನಂಬಲಾಗಿರುವ ಮುಳುಗಿಹೋದ ದ್ವಾರಕ ನಗರದ ಅವಶೇಷಗಳಿವೆ ಎನ್ನಲಾಗುವ ಕಡಲ ತೀರದ ಬಳಿಯೇ ಈ ಯೋಜನೆ ಕೈಗೊಳ್ಳಲಾಗುತ್ತಿದೆ. ಇದು ಮುಂದಿನ ವರ್ಷ ದೀಪಾವಳಿ ವೇಳೆಗೆ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ದ್ವಾರಕ ನಗರವನ್ನು ಶ್ರೀಕೃಷ್ಣನು ನಿರ್ಮಿಸಿದ್ದು ಎಂಬ ನಂಬಿಕೆ ಇದ್ದು, ಇದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಹೀಗಾಗಿ ಇಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಯಲ್ಲಿ ಪ್ರವಾಸಿಗರನ್ನು ಸಮುದ್ರದಲ್ಲಿ 100 ಮೀ. ಆಳಕ್ಕೆ ಧುಮುಕಲು ಅವಕಾಶ ಒದಗಿಸಲಾಗುತ್ತದೆ. ಈ ಮೂಲಕ ಅವರು ದ್ವೀಪದ ಸುತ್ತಮುತ್ತಾ ಇರುವ ಕಡಲಾಳದ ಸೌಂದರ್ಯವನ್ನು ಸವಿಯಬಹುದು ಎಂದು ಹೇಳಲಾಗಿದೆ. ಈ ಯೋಜನೆಯನ್ನು ಮುಂಬರುವ ವೈಬ್ರಂಟ್ ಗುಜರಾತ್ ಜಾಗತಿಕ ಸಮಾವೇಶದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.ಹೇಗಿರಲಿದೆ ಯೋಜನೆ?:
ಈ ಯೋಜನೆಯಲ್ಲಿ ಬಳಕೆಯಾಗುವ ಜಲಾಂತರ್ಗಾಮಿ ಸುಮಾರು 35 ಟನ್ ತೂಕವಿರಲಿದ್ದು, 30 ಪ್ರವಾಸಿಗರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರಲಿದೆ. 24 ಪ್ರಯಾಣಿಕರು ಕಿಟಕಿಗಳ ಬದಿ ಕೂರುವ ವ್ಯವಸ್ಥೆಯಿದ್ದು, ಇವರು ಸಮುದ್ರದ ಸೌಂದರ್ಯವನ್ನು ಸವಿಬಹುದಾಗಿದೆ. ಇದು ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಗುಜರಾತ್ ಪ್ರವಾಸೋದ್ಯಮದ ನಿರ್ದೇಶಕ ಸೌರಭ್ ಪರ್ದಿ ಹೇಳಿದ್ದಾರೆ.