ನಾನು ಶಿವಭಕ್ತ, ವಿಷಕಂಠ. ಎಲ್ಲಟೀಕೆಗಳನ್ನೂ ನುಂಗುವೆ: ಮೋದಿ

| Published : Sep 15 2025, 01:00 AM IST

ಸಾರಾಂಶ

ನಾನು ಶಿವಭಕ್ತ, ವಿಷಕಂಠ. ವಿಪಕ್ಷಗಳು ನನ್ನ ವಿರುದ್ಧ ಏನೇ ಟೀಕೆ ಮಾಡಿದರೂ ಅದನ್ನು ನುಂಗುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಆರ್‌ಜೆಡಿಗೆ ಸವಾಲು ಹಾಕಿದ್ದಾರೆ.

- ಮತದಾರರೇ ನನ್ನ ರಿಮೋಟ್‌ ಕಂಟ್ರೋಲ್‌: ಕೈಗೆ ಚಾಟಿ

ಗುವಾಹಟಿ: ನಾನು ಶಿವಭಕ್ತ, ವಿಷಕಂಠ. ವಿಪಕ್ಷಗಳು ನನ್ನ ವಿರುದ್ಧ ಏನೇ ಟೀಕೆ ಮಾಡಿದರೂ ಅದನ್ನು ನುಂಗುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಆರ್‌ಜೆಡಿಗೆ ಸವಾಲು ಹಾಕಿದ್ದಾರೆ. ಜೊತೆಗೆ ‘ಮತದಾರರೇ ನನ್ನ ಗುರುಗಳು, ಅವರೇ ನನ್ನ ರಿಮೋಟ್‌ ಕಂಟ್ರೋಲ್‌’ ಎನ್ನುವ ಮೂಲಕ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಮತ್ತು ಹಾಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧೀ ಕುಟುಂಬ ನಿಯಂತ್ರಿಸುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಟಾಂಗ್‌ ನೀಡಿದ್ದಾರೆ.

ಭಾನುವಾರ ಅಸ್ಸಾಂ ರಾಜಧಾನಿ ಗುವಾಹಟಿ, ದರಾಂಗ್‌ನಲ್ಲಿ 18,500 ಕೋಟಿ ರು. ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಡೀ ಕಾಂಗ್ರೆಸ್‌ ವ್ಯವಸ್ಥೆ ನಾನು ಮತ್ತೆ ಕಣ್ಣೀರಿಟ್ಟೆ ಎಂದು ನನ್ನನ್ನು ಗುರಿ ಮಾಡುತ್ತದೆ. ಆದರೆ ಮತದಾರರೇ ನನ್ನ ದೇವರು; ಅವರ ಬಳಿ ನಾನು ನನ್ನ ನೋವು ಹೇಳಿಕೊಳ್ಳದೆ ಇನ್ಯಾರ ಬಳಿ ಹೇಳಿಕೊಳ್ಳಲಿ. ಅವರೇ ನನ್ನ ಗುರುಗಳು, ಅವರೇ ನನ್ನ ದೇವರು ಮತ್ತು ಅವರೇ ನನ್ನ ರಿಮೋಟ್‌ ಕಂಟ್ರೊಲ್‌’ ಎಂದು ಹೇಳಿದರು.ಇತ್ತೀಚೆಗೆ ಬಿಹಾರದಲ್ಲಿ ನಡೆದ ಕಾಂಗ್ರೆಸ್‌ನ ಮತಚೋರಿ ರ್‍ಯಾಲಿ ವೇಳೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು, ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್‌ ಬಗ್ಗೆ ಕೀಳುಪದ ಬಳಸಿ ಟೀಕಿಸಿದ್ದರು. ಈ ಬಗ್ಗೆ ಮೋದಿ ಮತ್ತು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಹೀರಾಬೆನ್‌ ಅವರು ಮೋದಿ ಅವರನ್ನು ಅಪನಗದೀಕರಣ, ಮತಗಳವು ವಿಷಯದಲ್ಲಿ ತರಾಟೆಗೆ ತೆಗೆದುಕೊಳ್ಳುವ ಕೃತಕ ಬುದ್ಧಿಮತ್ತೆ (ಎಐ) ಬಳಸಿದ ವಿಡಿಯೋವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿತ್ತು. ಹೀಗಾಗಿ ಉಭಯ ಪಕ್ಷಗಳನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.

==

ಭಾರತೀಯ ಸೇನೆ ಬದಲು ಉಗ್ರರಿಗೆ ಕಾಂಗ್ರೆಸ್‌ ಗೌರವ: ಮೋದಿ ಟೀಕೆ

- ದೇಶ ವಿರೋಧಿ ಶಕ್ತಿಗಳ ಬೆನ್ನಿಗೆ ಕಾಂಗ್ರೆಸ್‌ ನಿಲ್ಲುತ್ತೆ । ಅಸ್ಸಾಂನಲ್ಲಿ ಪ್ರಧಾನಿ ಮೋದಿ ಗಂಭೀರ ಆರೋಪ

==

ಮಂಗಲ್ಡೋಯ್‌ (ಅಸ್ಸಾಂ):ಕಾಂಗ್ರೆಸ್‌ ಪಕ್ಷವು ದೇಶದ ಸೇನೆಯನ್ನು ಬೆಂಬಲಿಸುವ ಬದಲು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರಿಗೆ ಬೆಂಬಲ ನೀಡುತ್ತದೆ. ನುಸುಳುಕೋರರು ಮತ್ತು ದೇಶ ವಿರೋಧಿ ಶಕ್ತಿಗಳ ಬೆನ್ನಿಗೆ ಆ ಪಕ್ಷ ನಿಲ್ಲುತ್ತದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

ಅಸ್ಸಾಂನ ಮಂಗಲ್ಡೋಯ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿಯು ಯಾವುದೇ ಕಾರಣಕ್ಕೂ ನುಸುಳುಕೋರರು ದೇಶದ ಜಮೀನು ವಶಪಡಿಸಿಕೊಳ್ಳಲು ಮತ್ತು ಇಲ್ಲಿನ ಜನಸಂಖ್ಯಾ ರಚನೆಯನ್ನೇ ಬದಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.ಆಪರೇಷನ್‌ ಸಿಂದೂರ ಕಾರ್ಯಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಲಭ್ಯವನ್ನು ನಾಶ ಮಾಡಿದ ನಮ್ಮ ಸೇನಾ ಪಡೆಗಳನ್ನು ಬೆಂಬಲಿಸಲಿಲ್ಲ. ಬದಲಾಗಿ ಒಳನುಸುಳುಕೋರರು ಮತ್ತು ದೇಶವಿರೋಧಿ ಶಕ್ತಿಗಳನ್ನು ಬೆಂಬಲಿಸುವ ಕೆಲಸ ಮಾಡಿತು. ಆದರೆ ಕಾಮಾಕ್ಯದೇವಿಯ ಆಶೀರ್ವಾದದಿಂದ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಯಶಸ್ವಿಯಾಯಿತು. ಈ ಪವಿತ್ರ ಭೂಮಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಇದೇ ವೇಳೆ ಅವರು ತಿಳಿಸಿದರು.

ಬಿಜೆಪಿಯು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು, ನಮ್ಮ ಮಹಿಳೆಯರು ಮತ್ತು ಮಕ್ಕಳಿಗೆ ಅವಮಾನ ಮಾಡಲು ಹಾಗೂ ಜನಸಂಖ್ಯಾರಚನೆಯನ್ನೇ ಬದಲಾಯಿಸಲು ಅವಕಾಶ ಮಾಡಿಕೊಡುವುದಿಲ್ಲ. ಯಾಕೆಂದರೆ ಇದು ರಾಷ್ಟ್ರೀಯ ಭದ್ರತೆಯ ಪಾಲಿಗೆ ಅಪಾಯಕಾರಿ ಎಂದರು.ಒಳನುಸುಳುಕೋರರು ಆಕ್ರಮಿಸಿಕೊಂಡಿರುವ ಭೂಮಿಯನ್ನು ವಾಪಸ್‌ ಪಡೆದು ಅಸ್ಸಾಂನ ರೈತರು ತಮ್ಮ ಜಮೀನಿನಲ್ಲಿ ಕೃಷಿ ಮಾಡಲು ಅ‍ವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಹಿಮಂತ್‌ ಶರ್ಮಾ ಅವರ ನಡೆಯನ್ನು ಇದೇ ವೇಳೆ ಪ್ರಧಾನಿ ಶ್ಲಾಘಿಸಿದರು.

ಹಝಾರಿಕಾಗೆ ಅವಮಾನ ಸಹಿಸಲ್ಲ:1962ರ ಚೀನಾ ಆಕ್ರಮಶೀಲತೆ ವೇಳೆ ಜವಾಹರ ಲಾಲ್‌ ನೆಹರೂ ಅವರು ಮಾಡಿದ ಗಾಯ ಇನ್ನೂ ವಾಸಿಯಾಗಿಲ್ಲ. ಇದೀಗ ಕಾಂಗ್ರೆಸ್‌ ಪಕ್ಷವು ಭೂಪೇನ್‌ ಹಝಾರಿಕಾ ಅವರಿಗೆ ಹೇಳಿಕೆಗಳ ಮೂಲಕ ಮಾಡಿದ ಅವಮಾನವು ಆ ಗಾಯಕ್ಕೆ ಉಪ್ಪು ಸವರಿದಂತಿದೆ ಎಂದು ಆರೋಪಿಸಿದರು. ಭೂಪೇನ್ ಅವರಿಗೆ ಮಾಡಿದ ಅವಮಾನದಿಂದ ನನಗೆ ನೋವಾಗಿದೆ. ಹಝಾರಿಕಾರಂಥ ತಮ್ಮ ದಂತಕತೆಗಳಿಗೆ ಯಾಕೆ ಅವಮಾನ ಮಾಡಿದರು ಎಂದು ಜನ ಪ್ರಶ್ನಿಸಬೇಕು ಎಂದರು.