ಒತ್ತಡ ಮೆಟ್ಟಿ ನಿಲ್ಲುತ್ತೇವೆ : ಪ್ರಧಾನಿ ನರೇಂದ್ರ ಮೋದಿ

| N/A | Published : Aug 26 2025, 01:03 AM IST / Updated: Aug 26 2025, 03:21 AM IST

ಒತ್ತಡ ಮೆಟ್ಟಿ ನಿಲ್ಲುತ್ತೇವೆ : ಪ್ರಧಾನಿ ನರೇಂದ್ರ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

‘ವಿಶ್ವದಲ್ಲಿನ ಒತ್ತಡವನ್ನು ಲೆಕ್ಕಿಸದೇ ನಮ್ಮ ಸರ್ಕಾರ ಒಂದು ಮಾರ್ಗ ಕಂಡುಕೊಳ್ಳುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಅಹಮದಾಬಾದ್‌ :  ‘ವಿಶ್ವದಲ್ಲಿನ ಒತ್ತಡವನ್ನು ಲೆಕ್ಕಿಸದೇ ನಮ್ಮ ಸರ್ಕಾರ ಒಂದು ಮಾರ್ಗ ಕಂಡುಕೊಳ್ಳುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ.50 ರಷ್ಟು ಸುಂಕ ಆ. 27 ರಿಂದ ಜಾರಿಗೆ ಬರಬೇಕಿದ್ದು, ಅದಕ್ಕಿಂತ 2 ದಿನ ಮುನ್ನ ಅವರು ಈ ಮಾತು ಹೇಳಿದ್ದಾರೆ.

ವಿವಿಧ ಯೋಜನೆ ಉದ್ಘಾಟಿಸಿ ಸೋಮವಾರ ರಾತ್ರಿ ಅಹಮದಾಬಾದ್‌ನಲ್ಲಿ ಮಾತನಾಡಿದ ಮೋದಿ, ‘ಎಷ್ಟೇ ಒತ್ತಡ ಬಂದರೂ, ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ. ಇಂದು ಆತ್ಮನಿರ್ಭರ ಭಾರತ ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನು ಪಡೆಯುತ್ತಿದೆ ಮತ್ತು ಇದರ ಹಿಂದೆ 2 ದಶಕಗಳ ಕಠಿಣ ಪರಿಶ್ರಮವಿದೆ’ ಎಂದರು.

‘ಇಂದು ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥವನ್ನು ಆಧರಿಸಿದ ನೀತಿಗಳನ್ನು ನೋಡುತ್ತಿದ್ದೇವೆ’ ಎಂದ ಮೋದಿ, ‘ಭಾರತವು ಇಂತಹ ರಕ್ಷಣಾವಾದಿ ಕ್ರಮಗಳ ವಿರುದ್ಧ ದೃಢವಾಗಿ ನಿಲ್ಲುತ್ತದೆ ಮತ್ತು ತನ್ನ ನಾಗರಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ’ ಎಂದರು.

ಇದಲ್ಲದೆ, ‘ಗಾಂಧಿ ಭೂಮಿಯಿಂದ, ನಾನು ಮತ್ತೆ ಮತ್ತೆ ಭರವಸೆ ನೀಡುತ್ತೇನೆ. ಮೋದಿಗೆ, ನಿಮ್ಮ ಹಿತಾಸಕ್ತಿಗಳೇ ಆದ್ಯತೆ. ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ಜಾನುವಾರು ಸಾಕಣೆದಾರರು ಅಥವಾ ರೈತರಿಗೆ ಯಾವುದೇ ಹಾನಿಯಾಗಲು ಎಂದಿಗೂ ಬಿಡಲ್ಲ’ ಎಂದು ಘೋಷಿಸಿದರು.

‘ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅನ್ಯ ದೇಶಗಳ ಮೇಲೆ ಜನ ಅವಲಂಬಿತ ಆಗುವಂತೆ ಮಾಡಿತು. ಈ ಮೂಲಕ ಆಮದು ಹಗರಣ ನಡೆಸಿತು’ ಎಂದು ಕಿಡಿಕಾರಿದರು.

ಇಂದು ಪ್ರಧಾನಿ ಕಚೇರಿ ಸಭೆ

ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ.50 ರಷ್ಟು ಸುಂಕ ಆ. 27 ರಿಂದ ಜಾರಿಗೆ ಬರಬೇಕಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಲು ಪ್ರಧಾನಿ ಕಚೇರಿ ಸಭೆ ಕರೆದಿದೆ.

ಫಿಜಿ-ಭಾರತ ನಡುವೆ ರಕ್ಷಣಾ ಸಹಭಾಗಿತ್ವ 

 ನವದೆಹಲಿ: ಭಾರತ ಮತ್ತು ಫಿಜಿ ದೇಶಗಳು ರಕ್ಷಣೆ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 7 ವಿಸ್ತೃತ ಕಾರ್ಯ ಯೋಜನೆಗಳಿಗೆ ಸಹಿಹಾಕಿವೆ. ಇಂಡೋ-ಫೆಸಿಫಿಕ್‌ ಸಮುದ್ರ ಮಾರ್ಗದಲ್ಲಿ ಚೀನಾದ ಪ್ರಾಬಲ್ಯ ವಿಸ್ತರಣೆ ಹಿನ್ನೆಲೆಯಲ್ಲಿ ರಕ್ಷಣಾ ಸಹಭಾಗಿತ್ವ ಮತ್ತಷ್ಟು ಬಲಪಡಿಸಲು ನಿರ್ಧರಿಸಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತ ಮತ್ತು ಫಿಜಿಯ ಕಡಲು ಬೇರೆ ಬೇರೆ ಇರಬಹುದು. ಆದರೆ ನಮ್ಮ ಆಕಾಂಕ್ಷೆಗಳು ಮಾತ್ರ ಒಂದೇ ಹಡಗಿನಲ್ಲಿ ಪ್ರಯಾಣಿಸುತ್ತವೆ ಎಂದು ಹೇಳಿದರು.ಫಿಜಿ ಹಾಗೂ ಭಾರತ ಸ್ವತಂತ್ರ, ಎಲ್ಲರನ್ನೂ ಒಳಗೊಂಡ, ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗೆ ಬೆಂಬಲ ವ್ಯಕ್ತಪಡಿಸುತ್ತದೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಭಾಗಿತ್ವ ಬಲವರ್ಧನೆಗೆ ನಿರ್ಧರಿಸಿದ್ದೇವೆ. ಇದಕ್ಕಾಗಿ ಕಾರ್ಯ ಯೋಜನೆಯೊಂದನ್ನೂ ಸಿದ್ಧಫಡಿಸಲಾಗಿದೆ ಎಂದ ಮೋದಿ, ಭಾರತವು ಗ್ಲೋಬಲ್‌ ಸೌತ್‌ (ಅಭಿವೃದ್ಧಿಹೊಂದುತ್ತಿರುವ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ರಾಷ್ಟ್ರಗಳು)ನ ಅಭಿವೃದ್ಧಿಯ ಸಹಪ್ರಯಾಣಿಕ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಫಿಜಿಯ ಕಡಲ ಸುರಕ್ಷತೆಗಾಗಿ ತರಬೇತಿ ಮತ್ತು ಯಂತ್ರಗಳ ಬೆಂಬಲವನ್ನು ಭಾರತ ನೀಡಲಿದೆ. ಹವಾಮಾನ ಬದಲಾವಣೆಯು ಫಿಜಿ ಪಾಲಿನ ಅತಿದೊಡ್ಡ ಬೆದರಿಕೆ. ಇದನ್ನು ಎದುರಿಸಲು ಭಾರತವು ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.ರಬುಕಾ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

Read more Articles on