ತೆರಿಗೆ ಪಾಲಿನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದರೆ ಹಣಕಾಸು ಆಯೋಗದ ಜತೆ ಚರ್ಚಿಸಲಿ

| N/A | Published : Feb 04 2025, 08:09 AM IST

Nirmala sitharaman budget 2025

ಸಾರಾಂಶ

ತೆರಿಗೆ ಪಾಲು ಹಂಚಿಕೆಯ   ಪ್ರಮಾಣದ ಕುರಿತು ಅಸಮಾಧಾನ ಹೊಂದಿರುವ ರಾಜ್ಯಗಳ ಈ ಕುರಿತ ಹಣಕಾಸು ಆಯೋಗದ ಜೊತೆ ಚರ್ಚೆ ನಡೆಸಲಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ

ನವದೆಹಲಿ: ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಮಗೆ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಸೇರಿದಂತೆ ದಕ್ಷಿಣದ ವಿವಿಧ ರಾಜ್ಯಗಳು ಕಾನೂನೂ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ, ಹಂಚಿಕೆ ಪ್ರಮಾಣದ ಕುರಿತು ಅಸಮಾಧಾನ ಹೊಂದಿರುವ ರಾಜ್ಯಗಳ ಈ ಕುರಿತ ಹಣಕಾಸು ಆಯೋಗದ ಜೊತೆ ಚರ್ಚೆ ನಡೆಸಲಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.

ವಿಶೇಷವೆಂದರೆ ನಿರ್ಮಲಾ ಸೀತಾರಾಮನ್‌ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಚಿವೆ ನಿರ್ಮಲಾ, ‘ಹಣಕಾಸು ಆಯೋಗದ ಶಿಫಾರಸಿನ ಮೇಲೆ ತೆರಿಗೆ ಪಾಲನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಯಾವ ರಾಜ್ಯಕ್ಕೆ ಎಷ್ಟು ಹಂಚಿಕೆ ಮಾಡಬೇಕು ಎಂಬುದನ್ನು ಹಣಕಾಸು ಆಯೋಗವೇ ನಿರ್ಧರಿಸುತ್ತದೆ. ಕೇಂದ್ರ ಸರ್ಕಾರ ಅದರ ಶಿಫಾರಸು ಪಾಲನೆ ಮಾಡುತ್ತದೆ ಅಷ್ಟೆ. ಒಂದು ವೇಳೆ ದಶಕಗಳಿಂದ ಅನ್ಯಾಯ ಆಗುತ್ತಿದೆ ಎಂದು ಅನಿಸಿದರೆ ಹಣಕಾಸು ಆಯೋಗದ ಮುಂದೆ ಈ ವಿಚಾರ ಪ್ರಸ್ತಾಪಿಸಲಿ. ತೆರಿಗೆ ಹಂಚಿಕೆ ಕುರಿತ ನಿಯಮಾವಳಿಗಳನ್ನು ಬದಲಾಯಿಸಲು ಮನವಿ ಮಾಡಲಿ’ ಎಂದರು.

ಕೆಲ ರಾಜ್ಯಗಳು ತಮಗೆ ಹೆಚ್ಚಿನ ಪಾಲು ಬೇಕು ಎಂದು ಕೇಂದ್ರವನ್ನು ಕೇಳುವುದು ಸರಿಯೇ ತಪ್ಪೇ ಎಂಬ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದ ನಿರ್ಮಲಾ ಸೀತಾರಾಮನ್‌, ಅವರಲ್ಲಿ ಏನೇ ಅಸಮಾಧಾನಗಳಿದ್ದರೂ ಅದನ್ನು ಹಣಕಾಸು ಆಯೋಗದ ಮುಂದೆ ಪ್ರಸ್ತಾಪಿಸಬೇಕು ಎಂದು ಅವರು ಸಲಹೆ ನೀಡಿದರು.

ದಕ್ಷಿಣಕ್ಕೆ ಕತ್ತರಿ: 2014-15ರಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಒಟ್ಟು ತೆರಿಗೆ ಪಾಲು ಶೇ.18.62 ಇದ್ದಿದ್ದು, 2021-22 ಮತ್ತು 2024-25ರ ಅವಧಿಯಲ್ಲಿ ಶೇ.15.8ಕ್ಕೆ ಕಡಿತವಾಗಿದೆ. ಈ ಬಗ್ಗೆ ಈ ರಾಜ್ಯಗಳು ಪದೇ ಪದೇ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದರೂ ಅದು ಫಲಕೊಟ್ಟಿಲ್ಲ.

ಮಾನದಂಡ ಏನು?

ತೆರಿಗೆ ಪಾಲಿನ ಹಂಚಿಕೆ ವಿಚಾರದಲ್ಲಿ ಜನಸಂಖ್ಯೆಯು ಒಂದು ಪ್ರಮುಖ ಮಾನದಂಡವಾಗಿದೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಪಾಲು ಹೋಗುತ್ತಿದೆ. ಹೀಗಾಗಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಜನಸಂಖ್ಯೆ ನಿಯಂತ್ರಣಕ್ಕೆ ಆದ್ಯತೆ ನೀಡಿರುವ ದಕ್ಷಿಣದ ರಾಜ್ಯಗಳು ತಮಗೆ ಅನ್ಯಾಯ ಆಗುತ್ತಿದೆ ಎಂದು ಅವಲತ್ತುಕೊಳ್ಳುತ್ತಿವೆ.