ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆ ಫೆ.26ರಂದು ನಡೆಯಲಿದ್ದು, ಇಬ್ಬರೂ ಸೋಮವಾರ ಬೆಳಿಗ್ಗೆ ರಾಜಸ್ಥಾನದ ಉದಯಪುರಕ್ಕೆ ಬಂದಿಳಿದಿದ್ದಾರೆ. ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಇಬ್ಬರ ಮದುವೆ ನಡೆಯಲಿದೆ

ಜೈಪುರ: ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆ ಫೆ.26ರಂದು ನಡೆಯಲಿದ್ದು, ಇಬ್ಬರೂ ಸೋಮವಾರ ಬೆಳಿಗ್ಗೆ ರಾಜಸ್ಥಾನದ ಉದಯಪುರಕ್ಕೆ ಬಂದಿಳಿದಿದ್ದಾರೆ.

ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಇಬ್ಬರ ಮದುವೆ ನಡೆಯಲಿದೆ. ಮೂಲಗಳ ಪ್ರಕಾರ ಇಬ್ಬರ ಮದುವೆ ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, 100 ಮಂದಿಗಷ್ಟೇ ಆಹ್ವಾನ ನೀಡಲಾಗಿದೆ. 50 ಮಂದಿ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಭಾಗವಹಿಸಲಿದ್ದಾರೆ. ಸಿನಿಮಾ ರಂಗದ ಪ್ರಮುಖ ತಾರೆಯರು ಭಾಗವಹಿಸುವ ಸಾಧ್ಯತೆ ಕಡಿಮೆ.

ರಶ್ಮಿಕಾ ಮತ್ತು ವಿಜಯ್‌ ಇಬ್ಬರೂ ಪ್ರೀತಿಯಲ್ಲಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ನಾನಾ ವದಂತಿಗಳ ನಡುವೆಯೇ ಭಾನುವಾರವಷ್ಟೇ ಜೋಡಿ ಮೊದಲ ಬಾರಿಗೆ ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು.

ನನ್ನ ಬಂಧನ ವಿರೋಧಿಸಲ್ಲ: ಸ್ವಾಮಿ ಅವಿಮುಕ್ತೇಶ್ವರಾನಂದ 

ವಾರಾಣಸಿ: ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರ ಮೇಲಿನ ಲೈಂ*ಕ ದೌರ್ಜನ್ಯದ ಆರೋಪದ ಮೇಲೆ ತಮ್ಮ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದ ಬಳಿಕ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ‘ಸಾರ್ವಜನಿಕರು ಪ್ರತಿಯೊಂದನ್ನೂ ಗಮನಿಸುತ್ತಿದ್ದಾರೆ. ನನ್ನ ಬಂಧನವನ್ನು ವಿರೋಧಿಸುವುದಿಲ್ಲ’ ಎಂದಿದ್ದಾರೆ.

ಲೈಂ*ಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸ್ವಾಮೀಜಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಒಟ್ಟು 3 ಕೋರ್ಟ್‌ಗಳಿವೆ. ಒಂದು ಸಾರ್ವಜನಿಕ ನ್ಯಾಯಾಲಯ. ಅದು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದೆ. 2ನೆಯದು ನನ್ನ ಆತ್ಮಸಾಕ್ಷಿ ಮತ್ತು 3ನೆಯದು ಸುಪ್ರೀಂ ಕೋರ್ಟ್‌. ಯಾರು ಸರಿ ಮತ್ತು ಯಾರು ತಪ್ಪು ಎಂಬುದು ಅದಕ್ಕೆ ಗೊತ್ತಿದೆ. ಈ ಮೂರರಿಂದಲೂ ನಾನು ಕ್ಲೀನ್‌ಚಿಟ್‌ ಪಡೆದಿದ್ದೇನೆ’ ಎಂದರು.

ತ.ನಾಡು ಅಂತಿಮ ಮತಪಟ್ಟಿ ಪ್ರಕಟ: 70 ಲಕ್ಷ ಹೆಸರು ಡಿಲೀಟ್‌

ಚೆನ್ನೈ: ಚುನಾವಣಾ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ರಾಜ್ಯ ಚುನಾವಣಾ ಆಯೋಗವು ಮತಪಟ್ಟಿ ಪರಿಷ್ಕರಣೆ ಬಳಿಕ ಅಂತಿಮ ಮತಪಟ್ಟಿ ಪ್ರಕಟಿಸಿದೆ. ಅದರಲ್ಲಿ 70 ಲಕ್ಷ ಮತದಾರ ಹೆಸರನ್ನು ಡಿಲೀಟ್‌ ಮಾಡಲಾಗಿದೆ.ಚುನಾವನಾ ಆಯೋಗ ಬಿಡುಗಡೆ ಮಾಡಿರುವ ಮತಪಟ್ಟಿಯಲ್ಲಿ 5.67 ಕೋಟಿ ಮತದಾರರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ 18-19 ವರ್ಷದ 7.40 ಲಕ್ಷ ಹೊಸ ಮತದಾರರು ಹೆಸರೂ ಸೇರ್ಪಡೆಯಾಗಿದೆ. ಮತಪಟ್ಟಿ ಪರಿಷ್ಕರಣೆಗೂ ಮುನ್ನ 6.41 ಕೋಟಿ ಮಂದಿ ಹೆಸರು ಮತಪಟ್ಟಿಯಲ್ಲಿತ್ತು.

ಹರ್ಯಾಣ ಐಡಿಎಪ್‌ಸಿ ಬ್ಯಾಂಕಲ್ಲಿ ₹590 ಕೋಟಿ ಹಗರಣ ಪತ್ತೆ 

ಚಂಡೀಗಢ: ಹರ್ಯಾಣದ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನಲ್ಲಿ 590 ಕೋಟಿ ರು. ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಸರ್ಕಾರಿ ಹಾಗೂ ಇತರರ ಖಾತೆಗಳಲ್ಲಿನ ಹಣವನ್ನು ರಹಸ್ಯವಾಗಿ ದುರ್ಬಳಕೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ 4 ಉದ್ಯೋಗಿಗಳನ್ನು ಅಮಾನತು ಮಾಡಲಾಗಿದೆ.ಹರ್ಯಾಣ ಸರ್ಕಾರದ ಹಲವು ಇಲಾಖೆಗಳ ಹಣ ಈ ಬ್ಯಾಂಕಲ್ಲಿತ್ತು. ಇತ್ತೀಚೆಗೆ ಇಲಾಖೆಯೊಂದು ತನ್ನ ಖಾತೆ ಕ್ಲೋಸ್‌ ಮಾಡಲು ಕೋರಿಕೆ ಸಲ್ಲಿಸಿತ್ತು. ಆಗ ಇಲಾಖೆಯು ಹೊಂದಿದ್ದ ಹಣಕಾಸು ದಾಖಲೆಗೂ, ಬ್ಯಾಂಕ್‌ ಖಾತೆಯಲ್ಲಿನ ಮೊತ್ತಕ್ಕೂ ವ್ಯತ್ಯಾಸವಿತ್ತು. ಇತರ ಕೆಲವು ಇಲಾಖೆಗಳ ಹಣದಲ್ಲೂ ಇದೇ ರೀತಿ ವ್ಯತ್ಯಾಸ ಕಂಡುಬಂತು.

ಆಗ ಹಗರಣ ಬೆಳಕಿಗೆ ಬಂದಿದ್ದು, ಬ್ಯಾಂಕ್‌ ಹಣವನ್ನು ಕೆಲವು ನೌಕರರೇ ದುರುಪಯೋಗ ಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಎಂ ಸೈನಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಬೆಳ್ಳಿ ₹25,000 ಏರಿಕೆ, ಬೆಂಗ್ಳೂರಲ್ಲಿ ₹3 ಲಕ್ಷಕ್ಕೆ

ನವದೆಹಲಿ: ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಭಾನುವಾರ ಕೆ.ಜಿ.ಗೆ 2,75,000 ರು. ಇದ್ದ ದರ 25,000 ರು. ಏರಿಕೆಯೊಂದಿಗೆ 3 ಲಕ್ಷ ರು. ಗೆ ತಲುಪಿದೆ.ಅತ್ತ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,900 ರು. ಏರಿಕೆ ಆಗಿ 1,47,900 ರು.ಗೆ ತಲುಪಿದೆ. 24 ಕ್ಯಾರಟ್‌ನ 10 ಗ್ರಾಂ ಹೊನ್ನಿಗೆ 2,070 ರು. ಹೆಚ್ಚಳವಾಗಿದ್ದು, 1,61,350 ರು. ಆಗಿದೆ.