ಲೈವ್‌ ವೇಳೆ ಖ್ಯಾತ ಗಾಯಕ ಸೋನುಗೆ ಸ್ನಾಯು ಸೆಳೆತ ನಡೆಯಲು ಆಗದೇ ಒದ್ದಾಟ, ಆಸ್ಪತ್ರೆಗೆ

| N/A | Published : Feb 04 2025, 12:33 AM IST / Updated: Feb 04 2025, 03:43 AM IST

ಸಾರಾಂಶ

ಖ್ಯಾತ ಗಾಯಕ ಸೋನು ನಿಗಮ್‌ ಲೈವ್‌ ಶೋ ಒಂದರಲ್ಲಿ ಹಾಡುತ್ತಿದ್ದ ವೇಳೆ ತೀವ್ರ ಸ್ನಾಯುಸೆಳೆತಕ್ಕೆ ಒಳಗಾಗಿ ನಡೆಯಲೂ ಆಗದ ಘಟನೆ ನಡೆದಿದೆ.

ನವದೆಹಲಿ: ಖ್ಯಾತ ಗಾಯಕ ಸೋನು ನಿಗಮ್‌ ಲೈವ್‌ ಶೋ ಒಂದರಲ್ಲಿ ಹಾಡುತ್ತಿದ್ದ ವೇಳೆ ತೀವ್ರ ಸ್ನಾಯುಸೆಳೆತಕ್ಕೆ ಒಳಗಾಗಿ ನಡೆಯಲೂ ಆಗದ ಘಟನೆ ನಡೆದಿದೆ. ಪುಣೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಹಾಡುತ್ತಾ ಹೆಜ್ಜೆ ಹಾಕುತ್ತಿದ್ದ ಸೋನು ಅವರ ಬೆನ್ನಿನಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿದೆ. 

ಕೂಡಲೇ ಅವರನ್ನು ವೇದಿಕೆಯಿಂದ ಈಚೆಗೆ ಕರೆತರಲಾಯಿತು. ನೋವಿನಿಂದ ಮುಖ ಕಿವುಚಿಕೊಂಡು ನರಳುತ್ತಾ, ಕುಂಟಿಕೊಂಡು ಬಂದ ಸೋನು ಬೆನ್ನಿಗೆ ಅವರ ತಂಡದವರು ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. 

ಇನ್‌ಸ್ಟಾಗ್ರಾಂನಲ್ಲಿ ಈ ಕುರಿತ ವಿಡಿಯೋ ಹಂಚಿಕೊಂಡಿರುವ ಸೋನು, ‘ನನ್ನ ಜೀವನದ ಅತಿ ನೋವಿನ ದಿನವಾಗಿತ್ತು. ನಾನು ಓಡಾಡಿಕೊಂಡು ಹಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನನ್ನ ಬೆನ್ನುಮೂಳೆಯ ಸಮೀಪ ಸೂಜಿ ಹಾಕಿ ತಿವಿದಂತೆ ಭಾಸವಾಯಿತು. ಆದರೂ ಹಾಡು ಮುಂದುವರೆಸಿದೆ. ಕಾರಣ, ಜನ ನನ್ನಿಂದ ನಿರೀಕ್ಷಿಸುವುದಕ್ಕಿಂತ ಕಡಿಮೆ ನೀಡಲು ನನಗಿಷ್ಟವಿಲ್ಲ’ ಎಂದಿದ್ದು, ತಾಯಿ ಸರಸ್ವತಿ ನನ್ನ ಕೈಹಿಡಿದರು ಎಂದು ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ವರ್ಷದಲ್ಲಿ 38000 ಕೋಟಿ ರು.ಮೊತ್ತದ2 ಲಕ್ಷ ಹಣಕಾಸು ವಂಚನೆ

ಮುಂಬೈ: ಕಳೆದ ವರ್ಷ ಮಹಾರಾಷ್ಟ್ರದಲ್ಲಿ 2,19,047 ಹಣಕಾಸು ವಂಚನೆ ಪ್ರಕರಣಗಳು ನಡೆದಿದ್ದು ಅದರಲ್ಲಿ ಒಟ್ಟು 38,872.14 ಕೋಟಿ ರು.ಗಳ ಅವ್ಯವಹಾರ ನಡೆದಿದೆ. ಮುಂಬೈನಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 51,873 ಪ್ರಕರಣಗಳಲ್ಲಿ 12,404.12 ಕೋಟಿ ರು.ಗಳ ಅವ್ಯವಹಾರ ನಡೆದಿದೆ ಎಂದು ರಾಜ್ಯ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಪುಣೆ 42,802 ಪ್ರಕರಣಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಥಾಣೆ, ಮಿರಾ ಭಾಯಿಂದರ್, ವಸಾಯಿ ವಿರಾರ್, ನಾಗಪುರಗಳು ನಂತರದ ಸ್ಥಾನಗಳಲ್ಲಿವೆ.

ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಐಶ್‌ ಪುತ್ರಿ ಆರಾಧ್ಯಾ ಹೈಕೋರ್ಟ್‌ಗೆ

ಮುಂಬೈ: ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿಗಳ ಸಂಬಂಧ ಕ್ರಮ ಕೋರಿ ಖ್ಯಾತ ನಟರಾದ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌, ಪ್ರತಿಕ್ರಿಯೆ ಕೇಳಿ ಗೂಗಲ್‌ ಹಾಗೂ ಇತರೆ ಕೆಲವು ವೆಬ್‌ಸೈಟ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ. ಈ ಹಿಂದೆ, ಏಪ್ರಿಲ್ 2023ರಲ್ಲಿ, ದೆಹಲಿ ಹೈಕೋರ್ಟ್ ಆರಾಧ್ಯಾ ಅವರ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡದಂತೆ ವಿವಿಧ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿತ್ತು.

ಲಿಪ್‌ಕಿಸ್‌ ವಿವಾದ ಬೆನ್ನಲ್ಲೇ ಶ್ರೇಯಾ, ಅಲ್ಕಾ ಕೆನ್ನೆಗೆ ಉದಿತ್‌ ಮುತ್ತು ವೈರಲ್‌

ಮುಂಬೈ: ಅಭಿಮಾನಿಯ ತುಟಿಗೆ ಗಾಯಕ ಉದಿತ್‌ ನಾರಾಯಣ್‌ ಅವರು ಚುಂಬಿಸಿದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌, ಅಲ್ಕಾ ಯಾಜ್ಞಿಕ್‌ ಮತ್ತು ನಟಿ ಕರೀಷ್ಮಾ ಕಪೂರ್‌ ಕೆನ್ನೆಗೆ ಉದಿತ್‌ ಚುಂಬಿಸಿದ್ದ ಹಳೆಯ ವಿಡಿಯೋ ಭಾರಿ ವೈರಲ್‌ ಆಗಿದೆ. ಕಾರ್ಯಕ್ರಮವೊಂದರಲ್ಲಿ ಶ್ರೇಯಾಗೆ ಪ್ರಶಸ್ತಿ ಪ್ರದಾನ ಮಾಡುವಾಗ ಉದಿತ್‌ ಆಕೆಯನ್ನು ಹಿಡಿದು ಕೆನ್ನೆಗೆ ಚುಂಬಿಸಿದ್ದರು. ಮತ್ತೊಂದೆಡೆ ಇಂಡಿಯಾ ಐಡಲ್ಸ್‌ನಲ್ಲಿ ಆಲ್ಕಾ ಅವರಿಗೂ ಸಹ ಮುತ್ತಿಟ್ಟಿದ್ದು, ಆಕೆ ಮುಜುಗರಕ್ಕೆ ಒಳಗಾಗಿದ್ದರು. ಕರೀಷ್ಮಾ ಅವರು ಸಹ ಇದೇ ರೀತಿ ಅನುಭವಿಸಿದ್ದರು.