ಸಾರಾಂಶ
ಕಾಂಗ್ರೆಸ್, ಇದೀಗ ಅದರ ಮೇಲ್ವಿಚಾರಣೆ ನಡೆಸಿ ಆಯೋಗದ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ‘ಈಗಲ್’ (ಚುನಾವಣಾ ಆಯೋಗದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದರ ಮೇಲ್ವಿಚಾರಣೆ ಮಾಡಲು ನಾಯಕರು ಮತ್ತು ತಜ್ಞರ ಗುಂಪು) ಎಂಬ ಸಮಿತಿ ರಚಿಸಿದೆ.
ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಆಗಾಗ ತಕರಾರು ತೆಗೆಯುವ ಕಾಂಗ್ರೆಸ್, ಇದೀಗ ಅದರ ಮೇಲ್ವಿಚಾರಣೆ ನಡೆಸಿ ಆಯೋಗದ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ‘ಈಗಲ್’ (ಚುನಾವಣಾ ಆಯೋಗದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದರ ಮೇಲ್ವಿಚಾರಣೆ ಮಾಡಲು ನಾಯಕರು ಮತ್ತು ತಜ್ಞರ ಗುಂಪು) ಎಂಬ ಸಮಿತಿ ರಚಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್, ‘ಈ ಸಮಿತಿಯು ಮೊದಲು ಮಹಾರಾಷ್ಟ್ರ ಮತದಾರ ಪಟ್ಟಿಯಲ್ಲಿ ನಡೆದ ಅಕ್ರಮದ ತನಿಖೆ ನಡೆಸಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸುತ್ತದೆ. ಬಳಿಕ ಅನ್ಯ ರಾಜ್ಯಗಳ ಹಿಂದಿನ ಚುನಾವಣೆಗಳನ್ನೂ ವಿಶ್ಲೇಷಿಸಿ, ಮುಂಬರುವ ಚುನಾವಣೆಗಳ ಮೇಲೂ ನಿಗಾ ಇಡಲಿದೆ’ ಎಂದು ತಿಳಿಸಿದೆ.
ಈ ಮೊದಲು ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಗಳ ವೇಳೆ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳನ್ನು ಸೇರಿಸುವ ಹಾಗೂ ತೆಗೆದುಹಾಕುವ ಕೆಲಸ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಸಮಿತಿ ಸದಸ್ಯರು:
‘ಈಗಲ್’ ಸಮಿತಿಯು ಕಾಂಗ್ರೆಸ್ ಖಜಾಂಚಿ ಅಜಯ್ ಮಾಖನ್, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸೇರಿದಂತೆ ಪಕ್ಷದ ಅನೇಕ ನಾಯಕರನ್ನು ಒಳಗೊಂಡಿದ್ದು, ಈವರೆಗೆ ಯಾರನ್ನೂ ಅದರ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿಲ್ಲ. ಆದರೆ ಖಜಾಂಚಿ ಆಗಿರುವ ಕಾರಣ ಮಾಖನ್ ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.