ಸಾರಾಂಶ
ವಾಷಿಂಗ್ಟನ್: 2024ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಪರಾಜಿತರಾಗಿದ್ದ ಅಂದಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ‘ನಾನಿನ್ನು ರಾಜಕೀಯ ಜೀವನ ಮುಗಿಸಿಲ್ಲ. 2028ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದ್ದಾರೆ. ಬಿಬಿಸಿ ಜತೆ ಸಂದರ್ಶನದಲ್ಲಿ ಮಾತನಾಡಿದ ಕಮಲಾ, ‘ನನ್ನ ಜೀವನವನ್ನೇ ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದೇನೆ. ನನ್ನ ಮೂಳೆ ತುಂಬಾ ಸೇವೆಯೇ ತುಂಬಿದೆ. ನನ್ನ ಮೊಮ್ಮಕ್ಕಳು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಸಹ ಮಹಿಳಾ ಅಧ್ಯಕ್ಷರನ್ನು ನೋಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದರು. ಅದು ನೀವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲಾ, ‘ಇದ್ದರೂ ಇರಬಹುದು’ ಎಂದು ಹೇಳಿದರು.
ಪ್ಯಾರಿಸ್‌ನ ಪ್ರಸಿದ್ಧ ಲೂವ್ ಮ್ಯೂಸಿಯಂನಿಂದ ಆಭರಣ ಕದ್ದಿದ್ದ ಆರೋಪಿಗಳ ಸೆರೆ
ಪ್ಯಾರಿಸ್: ಫ್ರಾನ್ಸ್‌ನ ವಿಶ್ವಪ್ರಸಿದ್ಧ ಲೂವ್ ವಸ್ತುಸಂಗ್ರಹಾಲಯದಿಂದ ಆಭರಣ ಕಳ್ಳತನ ಮಾಡಿದ್ದ ಹಲವರು ಶಂಕಿತ ಆರೋಪಿಗಳನ್ನು ಶನಿವಾರ ಸಂಜೆ ಬಂಧಿಸಲಾಗಿದೆ.ಆರೋಪಿಗಳ ಪೈಕಿ ಒಬ್ಬ ರಾಯ್ಸಿ ವಿಮಾನ ನಿಲ್ದಾಣದಿಂದ ದೇಶ ಬಿಟ್ಟು ಪರಾರಿಯಾಗಲು ಯೋಜಿಸಿದ್ದ. ಆತ ಸೇರಿ ಹಲವರನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲಿಯೋನಾರ್ಡೋ ಡಾವಿಂಚಿ ರಚಿಸಿದ ಜಗದ್ವಿಖ್ಯಾತ ಮೊನಾಲಿಸಾ ವರ್ಣಚಿತ್ರವನ್ನು ಒಳಗೊಂಡಿರುವ ಲೂವ್ ವಸ್ತುಸಂಗ್ರಹಾಲಯದಲ್ಲಿ ಅ.17ರಂದು ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿತ್ತು. ಕೇವಲ 7 ನಿಮಿಷಗಳ ಅವಧಿಯಲ್ಲಿ ನೆಪೋಲಿಯನ್ ಕಾಲದ ಸಾವಿರಾರು ಕೋಟಿ ರು. ಮೌಲ್ಯದ 9 ಅಮೂಲ್ಯ ಆಭರಣಗಳನ್ನು ಗುಂಪೊಂದು ಕಳ್ಳತನ ಮಾಡಿ ಪರಾರಿಯಾಗಿತ್ತು.
5 ವರ್ಷದ ಬಳಿಕ ಚೀನಾಗೆ ನೇರ ವಿಮಾನ ಆರಂಭ: ಕೋಲ್ಕತಾ-ಗ್ವಾಂಗ್ಜು ನಡುವೆ ಶುರು
ನವದೆಹಲಿ: ಭಾರತ-ಚೀನಾ ನಡುವೆ 5 ವರ್ಷಗಳ ಬಳಿಕ ನೇರ ವಿಮಾನ ಸೇವೆ ಆರಂಭವಾಗಿದೆ. 2019ರ ಕೋವಿಡ್ ಮತ್ತು 2020ರ ಗಲ್ವಾನ್ ಸಂಘರ್ಷದಿಂದಾಗಿ ನಿಂತಿದ್ದ ನೇರ ವಿಮಾನಯಾನ ಸೇವೆಯು ಭಾನುವಾರದಿಂದ ಮರಳಿ ಆರಂಭವಾಗಿದೆ.ಇಂಡಿಗೋ ಕಂಪನಿಯು ಕೋಲ್ಕತಾದಿಂದ ಚೀನಾದ ಗ್ವಾಂಗ್‌ಜು ನಡುವೆ ಭಾನುವಾರ ನೇರ ವಿಮಾನ ಆರಂಭಿಸಿದೆ. ಈ ಮೂಲಕ ಸೇವೆ ಶುರು ಮಾಡಿದೆ ಮೊದಲ ಕಂಪನಿ ಎನಿಸಿಕೊಂಡಿದೆ. ಇದರ ಜೊತೆಗೆ ನ.2ರಿಂದ ದೆಹಲಿ ಮತ್ತು ಶಾಂಘೈ ನಡುವೆ ನೇರ ಸೇವೆ ಆರಂಭವಾಗಲಿದೆ. ನ.9ರಂದು ಚೀನಾ ಈಸ್ಟರ್ನ್ ಏರ್‌ಲೈನ್ಸ್ ಸಹ ಭಾರತಕ್ಕೆ ಬರಲಿದೆ.
ಭಾರತದ ಸಂಬಂಧ ಬಲಿಗೊಟ್ಟು ಪಾಕ್ ಜತೆ ಸ್ನೇಹವಿಲ್ಲ: ಅಮೆರಿಕ
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರವಾಗಿ ಭಾರತ-ಅಮೆರಿಕ ಸಂಬಂಧ ಹಳಸುತ್ತಿರುವುದು ಮತ್ತು ಪಾಕಿಸ್ತಾನ ಅಮೆರಿಕಕ್ಕೆ ಹತ್ತಿರವಾಗಲು ಯತ್ನಿಸುತ್ತಿರುವ ನಡುವೆಯೇ ‘ಭಾರತದೊಂದಿಗಿನ ಸಂಬಂಧವನ್ನು ಬಲಿಗೊಟ್ಟು ಪಾಕಿಸ್ತಾನದ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಶನಿವಾರ ಹೇಳಿಕೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುಬಿಯೋ, ‘ರಾಜತಾಂತ್ರಿಕತೆ ಮತ್ತು ಆ ರೀತಿಯ ವಿಷಯಗಳಿಗೆ ಬಂದಾಗ ಭಾರತೀಯರು ತುಂಬಾ ಪ್ರಬುದ್ಧರು. ಪಾಕಿಸ್ತಾನ ಭಾರತದೊಂದಿಗೆ ಹೊಂದಿರುವ ಸವಾಲುಗಳ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ ಉಗ್ರನಿಗ್ರಹದ ರೀತಿಯ ವಿಷಯಗಳಲ್ಲಿ ಪಾಕಿಸ್ತಾನದೊಂದಿಗೆ ಸಹಭಾಗಿತ್ವ ಹೊಂದಿರುವ ದೀರ್ಘ ಇತಿಹಾಸವನ್ನು ನಾವು ಹೊಂದಿದ್ದೇವೆ. ಸಾಧ್ಯವಾದರೆ, ಅದನ್ನು ಮೀರಿ ನಮ್ಮ ಸಂಬಂಧವನ್ನು ವಿಸ್ತರಿಸಲು ಬಯಸುತ್ತೇವೆ. ಆದರೆ ನಾವು ಪಾಕಿಸ್ತಾನದೊಂದಿಗೆ ಮಾಡುತ್ತಿರುವ ಯಾವುದೇ ಕೆಲಸವು ಭಾರತದೊಂದಿಗಿನ ನಮ್ಮ ಆಳವಾದ ಮತ್ತು ಐತಿಹಾಸಿಕವಾದ ಸಂಬಂಧ ಅಥವಾ ಸ್ನೇಹವನ್ನು ಹಾಳುಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ’ ಎಂದಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))