ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟವರ ಸಂಖ್ಯೆಯು10ಕ್ಕೆ ಏರಿಕೆಯಾಗಿದೆ. ಅಸ್ವಸ್ಥರ ಸಂಖ್ಯೆಯೂ 1400ಕ್ಕೆ ಏರಿಕೆಯಾಗಿದೆ. ಇದರ ನಡುವೆ, ಇಂದೋರ್‌ ಮಹಾನಗರ ಪಾಲಿಕೆಯ ಹಲವು ಅಧಿಕಾರಿಗಳನ್ನು ಮುಖ್ಯಮಂತ್ರಿ ಮೋಹನ ಯಾದವ್ ಅವರು ಶುಕ್ರವಾರ ಅಮಾನತು ಮಾಡಿದ್ದಾರೆ.

- ಕುಡಿವ ನೀರಿನಲ್ಲಿ ತ್ಯಾಜ್ಯ ಸೇರಿ ಸಾವು

- ಇಂದೋರ್‌ ಪಾಲಿಕೆಯ ಹಲವು ಅಧಿಕಾರಿಗಳು ಸಸ್ಪೆಂಡ್‌

- ಶುದ್ಧ ನೀರು, ಗಾಳಿ ನೀಡಲು ಮೋದಿ ಸರ್ಕಾರ ವಿಫಲ: ಖರ್ಗೆ, ರಾಗಾ

-----

6 ತಿಂಗಳ ಮಗು ಬಲಿ

ಇಂದೋರ್‌: ತಮಗೆ ಮಕ್ಕಳಿಲ್ಲ ಎಂದು ದಂಪತಿ 10 ವರ್ಷಗಳ ಕಾಲ ನೊಂದಿದ್ದರು. ಕೊನೆಗೆ ತಪಸ್ಸಿನ ಫಲ ಎಂಬಂತೆ ಅಯ್ಯಾನ್‌ ಎಂಬ ಮಗು 6 ತಿಂಗಳ ಹಿಂದೆ ಜನಿಸಿತ್ತು. ಆದರೆ ಇಂದೋರ್ ಕಲುಷಿತ ನೀರಿಗೆ ಈ 6 ತಿಂಗಳ ಮಗುವೂ ಸಾವನ್ನಪ್ಪಿದೆ. ಹೀಗಾಗಿ ಪೋಷಕರ ಗೋಳು ಹೇಳತೀರದಾಗಿದೆ.

=

ಇಂದೋರ್‌: ಇಲ್ಲಿನ ಭಾಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟವರ ಸಂಖ್ಯೆಯು10ಕ್ಕೆ ಏರಿಕೆಯಾಗಿದೆ. ಅಸ್ವಸ್ಥರ ಸಂಖ್ಯೆಯೂ 1400ಕ್ಕೆ ಏರಿಕೆಯಾಗಿದೆ. ಇದರ ನಡುವೆ, ಇಂದೋರ್‌ ಮಹಾನಗರ ಪಾಲಿಕೆಯ ಹಲವು ಅಧಿಕಾರಿಗಳನ್ನು ಮುಖ್ಯಮಂತ್ರಿ ಮೋಹನ ಯಾದವ್ ಅವರು ಶುಕ್ರವಾರ ಅಮಾನತು ಮಾಡಿದ್ದಾರೆ.

ಕುಡಿಯುವ ನೀರಿನ ಪೈಪ್‌ ಒಡೆದು ಹೋಗಿದ್ದು, ಅದರ ಮೇಲೆಯೇ ಇದ್ದ ಶೌಚಾಲಯದ ನೀರು ಬೆರೆತು ಸಂಪೂರ್ಣ ನೀರು ಕಲುಷಿತಗೊಂಡಿದೆ. ಪರಿಣಾಮ 9 ದಿನದಲ್ಲಿ 1400ಕ್ಕೂ ಹೆಚ್ಚಿನ ಜನರು ಅಸ್ವಸ್ಥಗೊಂಡಿದ್ದರು. ಪ್ರಸ್ತುತ 272ಕ್ಕೂ ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸ್ಥಳೀಯರು ಮಾತ್ರ 6 ತಿಂಗಳ ಮಗು ಸೇರಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ವಾದಿಸಿದ್ದಾರೆ.

ವಿಷಪೂರೈಕೆ-ರಾಹುಲ್, ಖರ್ಗೆ ಕಿಡಿ:

‘ಇಂದೋರ್‌ನಲ್ಲಿ ಜನರಿಗೆ ನೀರಲ್ಲಿ ವಿಷವನ್ನು ಪೂರೈಸಲಾಗುತ್ತಿದೆ. ಈ ಬಗ್ಗೆ ಮೋದಿ ಏನೂ ಮಾತನಾಡುತ್ತಿಲ್ಲ. ಇದು ಅವರ ಬಡವರ ಪರ ಕಾಳಜಿ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮಧ್ಯ ಪ್ರದೇಶದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮೋದಿ ಸರ್ಕಾರ ಮತ್ತು ಬಿಜೆಪಿ ದೇಶಕ್ಕೆ ಶುದ್ಧ ನೀರು ಅಥವಾ ಶುದ್ಧ ಗಾಳಿಯನ್ನು ಒದಗಿಸುವಲ್ಲಿ ವಿಫಲವಾಗಿವೆ’ ಎಂದಿದ್ದಾರೆ.