ಸಾರಾಂಶ
ರೋಮ್: ಫ್ರಾನ್ಸ್, ಸ್ವೀಡನ್ ಮಾದರಿಯಲ್ಲೇ ಇದೀಗ ಇಟಲಿ ಕೂಡ ದೇಶಾದ್ಯಂತ ಶಾಲೆಗಳು, ಕಚೇರಿಗಳು, ಅಂಗಡಿಗಳು ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಶಾಲೆಗಳು, ಬುರ್ಖಾ, ನಿಖಾಬ್ ನಿಷೇಧಕ್ಕೆ ಮುಂದಾಗಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಬ್ರದರ್ಸ್ ಆಫ್ ಇಟಲಿ ಪಕ್ಷ ಈ ಸಂಬಂಧ ಕರಡು ನಿಯಮ ರೂಪಿಸಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ 30 ಸಾವಿರದಿಂದ 3 ಲಕ್ಷ ರು. ವರೆಗೂ ದಂಡ ವಿಧಿಸಲು ಚಿಂತನೆ ನಡೆಸಿದೆ.
ದೇಶದಲ್ಲಿ ಇಸ್ಲಾಮಿಕ್ ಪ್ರತ್ಯೇಕವಾದವನ್ನು ನಿಯಂತ್ರಣ ಹಾಗೂ ಮಹಿಳಾ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಇಂಥ ಕ್ರಮ ಕೈಗೊಂಡಿದೆ.
ಇದರ ಜತೆಗೆ ಧಾರ್ಮಿಕ ಸಂಸ್ಥೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ವಿದೇಶಿ ನಿಧಿ ಮೇಲೆ ನಿಗಾ ಮತ್ತು ಕನ್ಯತ್ವ ಪರೀಕ್ಷೆ, ಬಲವಂತದ ಮದುವೆ ಮೇಲೆ ನಿರ್ಬಂಧದಂಥ ಪ್ರಸ್ತಾಪವೂ ಕರಡು ಕಾನೂನಲ್ಲಿದೆ. ಈ ಕ್ರಮಗಳು ಇಟಲಿಯ ಅಸ್ಮಿತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಮಾಡದೆ ಮಹಿಳಾ ಸ್ವಾತಂತ್ರ್ಯವನ್ನು ರಕ್ಷಿಸಲು ನೆರವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫ್ರಾನ್ಸ್, ಬೆಲ್ಜಿಯಂ, ಡೆನ್ಮಾರ್ಕ್ ಸೇರಿ ಈಗಾಗಲೇ 20ಕ್ಕೂ ಹೆಚ್ಚು ದೇಶಗಳಲ್ಲಿ ಬುರ್ಖಾ, ನಿಖಾಬ್ ನಿಷೇಧದ ಕಾನೂನು ಜಾರಿಯಲ್ಲಿದೆ.