ಜಮ್ಮುವಿನಲ್ಲಿ ನಡೆದ ಖಾಸಗಿ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಕಾಶ್ಮೀರದ ಕ್ರಿಕೆಟಿಗನೊಬ್ಬ ಪ್ಯಾಲೆಸ್ತೀನಿ ಧ್ವಜವಿರುವ ಹೆಲ್ಮೆಟ್ ಧರಿಸಿದ್ದ ಪ್ರಕರಣದ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ತನಿಖೆಗೆ ಆದೇಶಿಸಿದ್ದಾರೆ.

ಪಿಟಿಐ ಜಮ್ಮು

ಜಮ್ಮುವಿನಲ್ಲಿ ನಡೆದ ಖಾಸಗಿ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಕಾಶ್ಮೀರದ ಕ್ರಿಕೆಟಿಗನೊಬ್ಬ ಪ್ಯಾಲೆಸ್ತೀನಿ ಧ್ವಜವಿರುವ ಹೆಲ್ಮೆಟ್ ಧರಿಸಿದ್ದ ಪ್ರಕರಣದ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ತನಿಖೆಗೆ ಆದೇಶಿಸಿದ್ದಾರೆ.ಗುರುವಾರ ನಡೆದ ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ವೇಳೆ ಕ್ರಿಕೆಟಿಗ ಫುರ್ಖಾನ್ ಉಲ್ ಹಕ್ ತನ್ನ ಹೆಲ್ಮೆಟ್ ಮೇಲೆ ಧ್ವಜ ಹೊಂದಿರುವುದು ಕಂಡುಬಂದ ನಂತರ ವಿಡಿಯೋ ವೈರಲ್‌ ಆಗಿದೆ.

ವಿಷಯದ ಸೂಕ್ಷ್ಮತೆ ಮತ್ತು ಅದರ ಸಂಭಾವ್ಯ ಸಾರ್ವಜನಿಕ ಸುವ್ಯವಸ್ಥೆಯ ಪರಿಣಾಮಗಳನ್ನು ವಿಚಾರಣೆ ಆರಂಭಿಸಲಾಗಿದೆ. ಕ್ರಿಕೆಟಿಗನಿಗೂ ವಿಚಾರಣೆಗೆ ಬರಹೇಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

==

ಅಧ್ಯಕ್ಷೆ ಶೀನ್‌ಬಾಮ್‌ ಸುದ್ದಿಗೋಷ್ಠಿ ವೇಳೆಯೇ ಮೆಕ್ಸಿಕೊದಲ್ಲಿ ಭೂಕಂಪ

ಮೆಕ್ಸಿಕೊ: ದಕ್ಷಿಣ ಮತ್ತು ಕೇಂದ್ರ ಮೆಕ್ಸಿಕೊದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆಯೇ ಕಂಪನದ ಅನುಭವವಾಗಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.ಶೀನ್‌ಬಾಮ್‌ ಹೊಸ ವರ್ಷದ ಮೊದಲ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಆಗಲೇ ಭೂಕಂಪದ ಅನುಭವವಾಗಿದ್ದರಿಂದ ಗೋಷ್ಠಿಯನ್ನು ಅಲ್ಲಿಯೇ ನಿಲ್ಲಿಸಿ, ಸ್ವಲ್ಪ ಸಮಯದ ನಂತರ ಪುನರಾರಂಭಿಸಿದರು.ಭೂಕಂಪದ ತೀವ್ರತೆ 6.5ರಷ್ಟಿತ್ತು. ಅದರ ಕೇಂದ್ರಬಿಂದು ದಕ್ಷಿಣ ರಾಜ್ಯವಾದ ಗೆರೆರೊದ ಸ್ಯಾನ್ ಮಾರ್ಕೋಸ್ ಪಟ್ಟಣದ ಬಳಿ ಇತ್ತು. ಇದುವರೆಗೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಸರ್ಕಾರ ತಿಳಿಸಿದೆ.

==

ಯುಎಇ ಬೆಂಬಲಿತ ಉಗ್ರರ ಮೇಲೆ ದಕ್ಷಿಣ ಯೆಮೆನ್‌ನಲ್ಲಿ ಸೌದಿ ದಾಳಿ

ಯೆಮೆನ್‌ ಇಬ್ಭಾಗಕ್ಕೆ ಯುಎಇ ಬೆಂಬಲಕ್ಕೆ ಸೌದಿ ಕಿಡಿ

ಏಡನ್‌ (ಯೆಮೆನ್‌): ದಕ್ಷಿಣ ಯೆಮೆನ್‌ನನ್ನು ಪ್ರತ್ಯೇಕ ದೇಶವನ್ನಾಗಿ ಮಾಡಬೇಕು ಎಂದು ಹೋರಾಡುತ್ತಿರುವ ಯುಎಇ ಬೆಂಬಲಿತ ಪ್ರತ್ಯೇಕತಾವಾದಿಗಳ ನೆಲೆಗಳ ಮೇಲೆ ಸೌದಿ ಅರೇಬಿಯಾ ಪುನಃ ವಾಯುದಾಳಿ ಮಾಡಿದೆ. ಇದು 1 ವಾರದಲ್ಲಿನ 2ನೇ ದಾಳಿಯಾಗಿದೆ.

ಯೆಮೆನ್‌ನಲ್ಲಿ ಹೌತಿ ಹಾಗೂ ಕೆಲವು ಉಗ್ರ ಸಂಘಟನೆಗಳು ಪ್ರತ್ಯೇಕತಾ ಹೋರಾಟ ನಡೆಸುತ್ತಿವೆ. ಇವುಗಳಿಗೆ ಯುಎಇ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದ ಸೌದಿ, ಇತ್ತೀಚೆಗೆ ಯುಎಇ ಕಳಿಸಿದ್ದ 2 ಶಸ್ತ್ರಾಸ್ತ್ರ ಹಡಗುಗಳ ಮೇಲೆ ದಾಳಿ ಮಾಡಿತ್ತು. ಶನಿವಾರವೂ ಉಗ್ರರ ವಿರುದ್ಧ ಹೋರಾಡಲು ರಚಿಸಲಾಗಿರುವ ಸೌದಿ ಬೆಂಬಲಿತ ನ್ಯಾಷನಲ್‌ ಶೀಲ್ಡ್‌ ಫೋರ್ಸ್‌ ತಂಡವು, ಅವರ ನೆಲೆಗಳ ಮೇಲೆ ಪುನಃ ವಾಯುದಾಳಿ ಮಾಡಿದೆ. ಸಾವು ನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ.

==

ಮಧ್ಯಂತರದಲ್ಲಿ 26.340ಕ್ಕೆ ಏರಿದ ನಿಫ್ಟಿ: ಹೊಸ ದಾಖಲೆ

ಮುಂಬೈ: ಭಾರತೀಯ ಷೇರುಪೇಟೆಗೆ ಹೊಸ ವರ್ಷದ 2 ದಿನಗಳು ಲಾಭಗಳಲ್ಲಿಯೇ ಮುಕ್ತಾಯಗೊಂಡಿವೆ. ಶುಕ್ರವಾರ ನಿಫ್ಟಿಯು ಮಧ್ಯಂತರ ವಹಿವಾಟಿನಲ್ಲಿ ಬರೋಬ್ಬರಿ 193.45 ಅಂಕ ಏರಿಕೆ ಕಂಡು ಸಾರ್ವಕಾಲಿಕ ದಾಖಲೆಯಾದ 26,340ಕ್ಕೆ ತಲುಪಿತ್ತು. ದಿನದಾಂತ್ಯದಲ್ಲಿ ಕೊಂಚ ಇಳಿಕೆ ಕಂಡ ಅದು, 182 ಅಂಕ ಏರಿ 26,328.55ಕ್ಕೆ ಅಂತ್ಯಗೊಂಡಿದೆ.ಮತ್ತೊಂದೆಡೆ ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 573.41 ಅಂಕಗಳ ಏರಿಕೆಯಿಂದಾಗಿ 85,762.01ಕ್ಕೆ ತಲುಪಿದೆ.

ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಹೂಡಿಕೆ, ಇಂಧನ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಷೇರು ಖರೀದಿಯು ವಹಿವಾಟನ್ನು ಹಸಿರಿನಲ್ಲಿ ಅಂತ್ಯಗೊಳಿಸಿದೆ.ಸೆನ್ಸೆಕ್ಸ್‌ನಲ್ಲಿ ಎನ್‌ಟಿಪಿಸಿ, ಟ್ರಂಟ್‌, ಬಜಾಜ್‌ ಫೈನಾನ್ಸ್‌, ಪವರ್‌ ಗ್ರಿಡ್‌ ಸೇರಿದಂತೆ ಅನೇಕ ಕಂಪನಿಗಳು ಲಾಭಗಳಿಸಿದವು. ಐಟಿಸಿ, ಕೊಟಕ್‌ ಮಹೀಂದ್ರಾ ಬ್ಯಾಂಕ್‌ ನಷ್ಟ ಅನುಭವಿಸಿದವು.

==

ಬೆಂಗಳೂರಿನಲ್ಲಿ ಬೆಳ್ಳಿ ₹2.52 ಲಕ್ಷಕ್ಕೆ: ನಿನ್ನೆ ₹9800 ಏರಿಕೆ

ನವದೆಹಲಿ: 2025ರ ಕೊನೆಯ 2 ದಿನ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯು ಶುಕ್ರವಾರ ಮತ್ತೆ ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೇಜಿಗೆ 9800 ರು. ಜಿಗಿದು 2,52,100 ರು.ಗೆ ತಲುಪಿದೆ. ಅದೇ ರೀತಿ ಚಿನ್ನದಲ್ಲಿ 22 ಕ್ಯಾರಟ್‌ 10 ಗ್ರಾಂಗೆ 1100 ರು. ಏರಿ 1,28,600ಗೆ, 24 ಕ್ಯಾರಟ್‌ 1150 ರು. ಜಿಗಿದು 1,40,250 ರು.ಗೆ ತಲುಪಿದೆ.ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ 4000 ರು. ಹೆಚ್ಚಳವಾಗಿ 2,41,400 ರು.ಗೆ, ಚಿನ್ನದ ಬೆಲೆಯು 1100 ರು.ಗಳ ಏರಿಕೆಯಿಂದ 1,39,440 ರು.ಗೆ ತಲುಪಿದೆ.

==

ಪವನ್‌ ಕಲ್ಯಾಣ್‌ ಫೋಟೋ, ವಿಡಿಯೋ ದುರ್ಬಳಕೆಗೆ ಹೈಕೋರ್ಟ್‌ ಬ್ರೇಕ್‌

ನವದೆಹಲಿ: ಆಂಧ್ರಪ್ರದೇಶದ ಡಿಸಿಎಂ ಹಾಗೂ ನಟ ಪವನ್‌ ಕಲ್ಯಾಣ್‌ರ ವ್ಯಕ್ತಿತ್ವ ಹಕ್ಕು ರಕ್ಷಣೆಗೆ ಆದೇಶಿಸಿರುವ ದೆಹಲಿ ಹೈಕೋರ್ಟ್‌, ಅವರ ಹೆಸರು ಹಾಗೂ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡದಂತೆ ವೆಬ್‌ಸೈಟ್‌ ಹಾಗೂ ಆನ್‌ಲೈನ್‌ ವೇದಿಕೆಗಳಿಗೆ ನಿರ್ಬಂಧ ವಿಧಿಸಿದೆ.ನಟರೂ ಆಗಿರುವ ಕಲ್ಯಾಣ್‌ರ ಹೆಸರು, ಎಐ ಹಾಗೂ ಡೀಪ್‌ಫೇಕ್‌ ಸೃಷ್ಟಿತ ಫೋಟೋ, ಧ್ವನಿಯನ್ನು ತಮ್ಮ ಪ್ರಚಾರಕ್ಕಾಗಿ ಹಲವು ಆನ್‌ಲೈನ್‌ ಪ್ಲ್ಯಾಟ್‌ಫಾರ್ಮ್‌ಗಳು ಬಳಕೆ ಮಾಡುತ್ತಿವೆ. ಇದರ ವಿರುದ್ಧ ಕಲ್ಯಾಣ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಮನಮೀತ್‌ ಸಿಂಗ್‌, ಮುಂದಿನ ವಿಚಾರಣೆ ವರೆಗೆ ಅವರ ವ್ಯಕ್ತಿತ್ವವನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡದಂತೆ ಆದೇಶಿಸಿದ್ದಾರೆ. ಜತೆಗೆ, ಕಲ್ಯಾಣ್‌ರ ಹೆಸರನ್ನು ಸೃಷ್ಟಿಸಲಾಗಿರುವ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ಫ್ಯಾನ್‌ ಅಕೌಂಟ್‌’ ಎಂದು ಉಲ್ಲೇಖಿಸಲು ಸೂಚಿಸಿದ್ದಾರೆ.ಈ ಮೊದಲು ತಾರೆಗಳಾದ ಐಶ್ವರ್ಯಾ ರೈ ದಂಪತಿ, ಹೃತಿಕ್‌ ರೋಶನ್‌, ಗಾಯಕ ಆರ್. ಮಾಧವನ್‌ ಸೇರಿ ಹಲವರು ವ್ಯಕ್ತಿತ್ವ ರಕ್ಷಣೆ ಕೋರಿ ಇದೇ ಕೋರ್ಟ್‌ ಮೆಟ್ಟಿಲೇರಿದ್ದರು.