ಸಾರಾಂಶ
ಹೈದರಾಬಾದ್: ಭಾರಿ ವಿವಾದಕ್ಕೆ ಕಾರಣವಾಗಿದ್ದ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಜಾತಿ ಗಣತಿ ಮತ್ತೊಂದು ತಿರುವು ಪಡೆದಿದೆ. ಬಿಟ್ಟು ಹೋಗಿರುವ ಶೇ.3.1 ಜನಸಂಖ್ಯೆಯ ಗಣತಿಗಾಗಿ 2ನೇ ಸುತ್ತಿನ ಸರ್ವೇ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಿದ ಜಾತಿಗಣತಿ ವರದಿ ಅನ್ವಯ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ.42ರಷ್ಟು ಇದೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೂ ಮುನ್ನ ತೆಲಂಗಾಣ ಸರ್ಕಾರ ನಡೆಸಿದ್ದ ಸಮಗ್ರ ಕೌಟುಂಬಿಕ ಸಮೀಕ್ಷೆಯಲ್ಲಿ ಒಬಿಸಿಗಳ ಪ್ರಮಾಣ ಶೇ.52ರಷ್ಟು ಎಂದು ಕಂಡುಬಂದಿತ್ತು. ಹೀಗೆ ಒಬಿಸಿಗಳ ಪ್ರಮಾಣದಲ್ಲಿ ಇಳಿಕೆಯ ಹಿಂದೆ ಉದ್ದೇಶಪೂರ್ವಕ ಯತ್ನವಿದೆ ಎಂದು ವಿಪಕ್ಷಗಳು ಕಿಡಿಕಾರಿದ್ದವು. ಜೊತೆಗೆ ಸಮೀಕ್ಷೆ ವೇಳೆ ಶೇ.3.1ರಷ್ಟು ಕುಟುಂಬಗಳು ಸಮೀಕ್ಷೆಯಲ್ಲಿ ಭಾಗಿ ಆಗಿಲ್ಲ ಎಂದು ಗೊತ್ತಾಗಿತ್ತು. ಹೀಗಾಗಿ ಫೆ.18ರಿಂದ 28ರವರೆಗೆ 2ನೇ ಸುತ್ತಿನ ಜಾತಿ ಗಣತಿಗೆ ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ತೆಲಂಗಾಣ ಡಿಸಿಎಂ ಭಟ್ಟಿ ವಿಕ್ರಮಾರ್ಕ, ‘ಬಿಟ್ಟು ಹೋದ ಕುಟುಂಬಗಳು ತಾವು ಗಣತಿಯಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿವೆ. ಅವುಗಳಿಗಾಗಿ ಸಮೀಕ್ಷೆ ನಡೆಸುತ್ತೇವೆ. ಮಾರ್ಚ್‌ನಲ್ಲಿ ಸಂಪುಟವು ಆ ದತ್ತಾಂಶದ ಪರಿಶೀಲನೆ ನಡೆಸಲಿದೆ’ ಎಂದರು.
ಆದರೆ ಜಾತಿಗಣತಿ ಮೊದಲ ವರದಿಯಲ್ಲಿನ ಶೇ.42ರಷ್ಟು ಅಂಶ ಇಟ್ಟುಕೊಂಡೇ ನಮಗೆ ಮುಂದಿನ ಚುನಾವಣೆಗಳಲ್ಲಿ ಶೇ.42ರಷ್ಟು ಮೀಸಲು ನೀಡಬೇಕು. ಇಲ್ಲದೇ ಹೋದಲ್ಲಿ ಹೋರಾಟದ ಹಾದಿ ಹಿಡಿಯುವುದಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಒಬಿಸಿ ನಾಯಕರು ಎಚ್ಚರಿಸಿದ್ದರು. ಒಂದು ವೇಳೆ ಪರಿಷ್ಕೃತ ಸಮೀಕ್ಷಾ ವರದಿ ಅನ್ವಯ, ಒಬಿಸಿಗಳ ಸಂಖ್ಯೆ ಹೆಚ್ಚಾದರೆ ಅವರು ಚುನಾವಣೆ ವೇಳೆ ಹೆಚ್ಚಿನ ಮೀಸಲಿಗೆ ಬೇಡಿಕೆ ಇಡಬಹುದು. ಹೀಗಾಗಿದಲ್ಲಿ ಇದು ಪಕ್ಷದ ಪಾಲಿಗೆ ಬಿಸಿ ತುಪ್ಪುವಾಗುವ ಸಾಧ್ಯತೆ ಇದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡದೇ ಹೋದಲ್ಲಿ ಅದು, ‘ಎಷ್ಟು ಜನಸಂಖ್ಯೆ ಇದೆಯೋ ಅಷ್ಟು ಪಾಲು ಸಿಗಬೇಕು’ ಎಂಬ ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಣೆಗೆ ವಿರುದ್ಧವಾಗಲಿದೆ. ಹೀಗಾಗಿ ಕಾಂಗ್ರೆಸ್ ಮುಂದಿನ ನಡೆ ಕುತೂಹಲ ಮೂಡಿಸಿದೆ.