ಪಾಕ್‌ ಮಾನ ಹರಾಜಿಗೆ ಭಾರತ ಸಪ್ತಾಸ್ತ್ರ

| N/A | Published : May 18 2025, 01:26 AM IST / Updated: May 18 2025, 05:09 AM IST

indo pak news .jpg

ಸಾರಾಂಶ

ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆ, ಸೇನಾ ನೆಲೆಗಳ ಮೇಲೆ ಆಪರೇಷನ್‌ ಸಿಂದೂರ ದಾಳಿ ನಡೆಸಿದ್ದ ಭಾರತ, ಇದೀಗ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗೆ ಸಪ್ತಾಸ್ತ್ರ ಬಳಸಲು ನಿರ್ಧರಿಸಿದೆ.

 ನವದೆಹಲಿ : ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆ, ಸೇನಾ ನೆಲೆಗಳ ಮೇಲೆ ಆಪರೇಷನ್‌ ಸಿಂದೂರ ದಾಳಿ ನಡೆಸಿದ್ದ ಭಾರತ, ಇದೀಗ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗೆ ಸಪ್ತಾಸ್ತ್ರ ಬಳಸಲು ನಿರ್ಧರಿಸಿದೆ. ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ 7 ನಾಯಕರ ನೇತೃತ್ವದಲ್ಲಿ ಸಂಸದರ ನಿಯೋಗವೊಂದನ್ನು ಹಲವು ದೇಶಗಳಿಗೆ ರವಾನಿಸುವ ಮೂಲಕ ಪಾಕಿಸ್ತಾನದ ಉಗ್ರವಾದದ ಮುಖವಾಡ ಬಯಲು ಮಾಡುವ ದಾಳ ಉರುಳಿಸಿದೆ.

ಅಚ್ಚರಿಯ ವಿಷಯವೆಂದರೆ ಈ ಹಿಂದೆ ಕರ್ನಾಟಕ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂಸದ ನಾಸಿರ್‌ ಹುಸೇನ್ ಹೆಸರನ್ನು ಕಾಂಗ್ರೆಸ್‌ ಕಳುಹಿಸಿದ್ದರೂ, ಸರ್ಕಾರ ಅವರನ್ನು ಪರಿಗಣಿಸಿಲ್ಲ. ಆದರೆ ಕಾಂಗ್ರೆಸ್‌ ಹೆಸರು ಕಳುಹಿಸದೇ ಇದ್ದರೂ ಶಶಿ ತರೂರ್‌ ಅವರಿಗೆ ತಂಡದ ನೇತೃತ್ವ ನೀಡುವ ಮೂಲಕ ಅವರ ವಿದೇಶಾಂಗ ವಿಷಯಗಳ ನಿರ್ವಹಣೆಯ ಜ್ಞಾನಕ್ಕೆ ಮನ್ನಣೆ ನೀಡಿದೆ.

ಸಪ್ತಾಸ್ತ್ರ:

ಶುಕ್ರವಾರ ನಿಯೋಗ ಕಳುಹಿಸುವ ವಿಷಯ ಪ್ರಸ್ತಾಪಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ನಿಯೋಗಗಳ ನೇತೃತ್ವ ಯಾರು ವಹಿಸಲಿದ್ದಾರೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರನ್ವಯ ಬಿಜೆಪಿಯ ರವಿಶಂಕರ್‌ ಪ್ರಸಾದ್‌, ಬಿಜೆಡಿಯ ಬೈಜಯಂತ್‌ ಪಾಂಡಾ, ಜೆಡಿಯುನ ಸಂಜಯ್‌ ಕುಮಾರ್‌, ಕಾಂಗ್ರೆಸ್‌ನ ಶಶಿ ತರೂರ್‌, ಡಿಎಂಕೆಯ ಕನಿಮೋಳಿ, ಎನ್‌ಸಿಪಿ (ಶರದ್‌ ಬಣ) ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್‌ ಶಿಂಧೆ ಅವರು ನಿಯೋಗಗಳ ನಾಯಕತ್ವ ವಹಿಸಲಿದ್ದಾರೆ.

ಮೇ 22ರಿಂದ ಪ್ರವಾಸ ಆರಂಭಿಸಲಿರುವ ಈ 7 ಸರ್ವಪಕ್ಷ ನಿಯೋಗಗಳು ವಿವಿಧ ದೇಶಗಳಿಗೆ ಹೋಗಿ, ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲಾ ವಿಧದ ಭಯೋತ್ಪಾದನೆಯನ್ನು ಎದುರಿಸಲು ದೃಢನಿಶ್ಚಯವನ್ನು ಪ್ರದರ್ಶಿಸುತ್ತವೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಸಮಿತಿಯಲ್ಲಿ ಯಾರ್‍ಯಾರು?:

ಈ ನಿಯೋಗಗಳಲ್ಲಿ ಸಂಸದರಾದ ಅನುರಾಗ್ ಠಾಕೂರ್, ಅಪರಾಜಿತಾ ಸಾರಂಗಿ, ಮನೀಶ್ ತಿವಾರಿ, ಅಸಾದುದ್ದೀನ್ ಒವೈಸಿ, ಅಮರ್ ಸಿಂಗ್, ರಾಜೀವ್ ಪ್ರತಾಪ್ ರೂಡಿ, ಸಮಿಕ್ ಭಟ್ಟಾಚಾರ್ಯ, ಬ್ರಿಜ್ ಲಾಲ್, ಸರ್ಫರಾಜ್ ಅಹ್ಮದ್, ಪ್ರಿಯಾಂಕಾ ಚತುರ್ವೇದಿ, ವಿಕ್ರಮಜಿತ್ ಸಾಹ್ನಿ, ಸಸ್ಮಿತ್ ಪಾತ್ರ ಮತ್ತು ಭುವನೇಶ್ವರ ಕಲಿತಾ ಇರಲಿದ್ದಾರೆ. ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್‌ ಹಾಲಿ ಸಂಸದರಲ್ಲದೇ ಇದ್ದರೂ, ಅವರ ರಾಜತಾಂತ್ರಿಕ ಪರಿಣತಿ ಗಮನಿಸಿ ಅವರನ್ನೂ ನಿಯೋಗಕ್ಕೆ ಸೇರಿಸಿಕೊಳ್ಳಲಾಗಿದೆ.

ಪ್ರಸಾದ್‌ ಅವರ ನಿಯೋಗ ಸೌದಿ ಅರೇಬಿಯಾ, ಕುವೈತ್‌, ಬಹ್ರೈನ್‌ ಮತ್ತು ಅಲ್ಜೀರಿಯಾಗೆ, ಸುಳೆ ನಿಯೋಗ ಒಮಾನ್‌, ಕೀನ್ಯ, ದಕ್ಷಿಣ ಆಫ್ರಿಕಾ, ಈಜಿಪ್ಟ್‌ಗೆ, ಝಾ ನಿಯೋಗ ಜಪಾನ್‌, ಸಿಂಗಾಪುರ, ದಕ್ಷಿಣ ಕೊರಿಯಾ, ಮಲೆಷಿಯಾ, ಇಂಡೋನೇಷ್ಯಾ ತೆರಳಲಿದೆ ಎನ್ನಲಾಗಿದೆ.

 ವಿದೇಶಗಳಿಗೆ ಒಟ್ಟು 7 ಸರ್ವಪಕ್ಷಗಳ ನಿಯೋಗ ಆಡಳಿತ ಕೂಟದ 4, ವಿಪಕ್ಷದ 3 ನಾಯಕರ ಆಯ್ಕೆ 

7 ಟೀಂ ನಾಯಕರು

ಶಶಿ ತರೂರ್‌ (ಕಾಂಗ್ರೆಸ್)

ರವಿಶಂಕರ್‌ ಪ್ರಸಾದ್‌ (ಬಿಜೆಪಿ)

ಬೈಜಯಂತ್‌ ಪಾಂಡಾ (ಬಿಜೆಪಿ)

ಸಂಜಯಕುಮಾರ್‌ (ಜೆಡಿಯು)

ಕನಿಮೋಳಿ (ಡಿಎಂಕೆ)

ಸುಪ್ರಿಯಾ ಸುಳೆ (ಎನ್‌ಸಿಪಿಎಸ್ಪಿ)

ಶ್ರೀಕಾಂತ ಶಿಂಧೆ (ಶಿವಸೇನೆ)

Read more Articles on