ಕುಂಭಮೇಳದ ಮೊನಾಲಿಸಾ ಬಾಲಿವುಡ್‌ಗೆ : ದಿ ಡೈರಿ ಆಫ್‌ ಮಣಿಪುರ್‌ ಚಿತ್ರದಲ್ಲಿ ಅಭಿನಯ

| N/A | Published : Jan 31 2025, 12:48 AM IST / Updated: Jan 31 2025, 04:56 AM IST

Monalisa Interview Mahakumbh Prayagraj business fail home return after taking loan

ಸಾರಾಂಶ

ಇಲ್ಲಿನ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುವ ವೇಳೆ ತನ್ನ ಸುಂದರ ಕಣ್ಣುಗಳಿಂದ ಭಾರಿ ವೈರಲ್‌ ಆಗಿದ್ದ ಗಾಜುಗಣ್ಣಿನ ಚೆಲುವೆ ‘ಮೊನಾಲಿಸಾ’ ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ.

ಪ್ರಯಾಗರಾಜ್‌: ಇಲ್ಲಿನ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುವ ವೇಳೆ ತನ್ನ ಸುಂದರ ಕಣ್ಣುಗಳಿಂದ ಭಾರಿ ವೈರಲ್‌ ಆಗಿದ್ದ ಗಾಜುಗಣ್ಣಿನ ಚೆಲುವೆ ‘ಮೊನಾಲಿಸಾ’ ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಸನೋಜ್‌ ಮಿಶ್ರಾ ನಿರ್ದೇಶನದ ‘ದಿ ಡೈರಿ ಆಪ್‌ ಮಣಿಪುರ್‌’ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇದಕ್ಕಾಗಿ ಖುದ್ದು ಸನೋಜ್‌ ಅವರು ಮೊನಾಲಿಸಾ ಅವರ ನಿವಾಸಕ್ಕೆ ತೆರಳಿ ಅವರ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆದಿದ್ದಾರೆ. ಇದನ್ನು ಖುದ್ದು ಸನೋಜ್‌ ಅವರೇ ಇನ್ಸ್‌ಟಾದಲ್ಲಿ ಹಂಚಿಕೊಂಡಿದ್ದಾರೆ.

ಗುಹೆವಾಸಿ ವೇಷದಲ್ಲಿ ನಟ ಅಮಿರ್‌ ಖಾನ್‌ ಪ್ರತ್ಯಕ್ಷ!

ಮುಂಬೈ: ಇತ್ತೀಚೆಗೆ ಮುಂಬೈನಲ್ಲಿ ಹರಿದಬಟ್ಟೆ, ಕುರುಚಲ ಗಡ್ಡ, ಉದ್ದ ಕೂದಲಿನಿಂದೊಂದಿಗೆ ರಸ್ತೆಯಲ್ಲಿ ಅಲ್ಲಿಂದಿಲ್ಲಿ ಓಡಾಡಿ ಸುದ್ದಿಯಾಗಿದ್ದ ವ್ಯಕ್ತಿ ಖ್ಯಾತ ನಟ ಅಮೀರ್‌ ಖಾನ್‌ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಚಿತ್ರವೊಂದಕ್ಕಾಗಿ ಅಮೀರ್‌ ಖಾನ್‌ ತಮ್ಮ ಚಹರೆಯನ್ನು ಗುಹಾವಾಸಿಯ ರೀತಿಯಲ್ಲಿ ಬದಲಾಯಿಸಿಕೊಂಡು ರಸ್ತೆಯಲ್ಲಿ ಗಾಡಿ ತಳ್ಳಿಕೊಂಡು ತಿರುಗಾಡಿದ್ದರು. ಆಗ ಈ ವಿಷಯ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇದೀಗ ಅಮೀರ್‌ರ ಚಹರೆ ಬದಲಾವಣೆ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಮುಂಬೈ ರಸ್ತೆಯಲ್ಲಿ ತಿರುಗಾಡಿದ ಗುಹಾವಾಸಿ ಅಮೀರ್‌ ಎಂದು ಖಚಿತಪಟ್ಟಿದೆ.

ರೇಪ್‌ ಆರೋಪದ ಕೇಸಲ್ಲಿ ಯುಪಿ ಕಾಂಗ್ರೆಸ್‌ ಸಂಸದ ರಾಕೇಶ್‌ ರಾಥೋಡ್‌ ಸೆರೆ

ನವದೆಹಲಿ: ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್‌ ಅವರನ್ನು ಬಂಧಿಸಲಾಗಿದೆ. ರಾಕೇಶ್‌, ಕಳೆದ 4 ವರ್ಷಗಳಿಂದ ತನ್ನನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಜ.17ರಂದು ರಾಥೋಡ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯ ಪತಿ 5 ವ್ಯಕ್ತಿಗಳ ವಿರುದ್ಧ ಕಳೆದ ವಾರವಷ್ಟೆ ಪ್ರತ್ಯೇಕ ದೂರು ದಾಖಲಿಸಿದ್ದರು. ಇದಕ್ಕೂ ಮೊದಲು ಸೀತಾಪುರದ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು.

ಪಂಜಾಬ್ ಸಿಎಂ ಮಾನ್ ದಿಲ್ಲಿ ನಿವಾಸದ ಮೇಲೆ ಆಯೋಗ ದಾಳಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿಯೇ, ಕೇಂದ್ರ ಚುನಾವಣಾ ಅಯೋಗದ ಅಧಿಕಾರಿಗಳ ತಂಡ ಗುರುವಾರ ಆಪ್ ನಾಯಕ, ಪಂಜಾಬ್ ಸಿಎಂ ಭಗವಂತ್‌ ಮಾನ್‌ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ಆಮ್‌ ಆದ್ಮಿ ಆರೋಪಿಸಿದೆ. ಮನೆಯಲ್ಲಿ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಆತಿಶಿ, ‘ಬಿಜೆಪಿ ಬಹಿರಂಗವಾಗಿ ಹಣ, ಶೂಗಳು, ಚಪ್ಪಲಿಗಳು ಮತ್ತು ಬೆಡ್‌ಶಿಟ್‌ ಹಂಚುತ್ತಿದೆ. ಪೊಲೀಸರು ಅದನ್ನು ನೋಡಲು ಸಾಧ್ಯವಾಗದೇ ಚುನಾಯಿತ ಮುಖ್ಯಮಂತ್ರಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ’ ಎಂದಿದ್ದಾರೆ. ಇನ್ನು ಮಾನ್ ಕೂಡ ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ ಚುನಾವಣಾ ಆಯೋಗ ಬಿಜೆಪಿ ಹಣವನ್ನು ಮುಕ್ತವಾಗಿ ಹಂಚುತ್ತಿರುವುದನ್ನು ನೋಡುತ್ತಿಲ್ಲ. ಅದನ್ನು ಬಿಟ್ಟು ತಮ್ಮ ನಿವಾಸದ ಮೇಲೆ ದಾಳಿಗೆ ಪ್ರಯತ್ನಿಸುತ್ತಿದೆ’ ಎಂದಿದ್ದಾರೆ.

10 ಗ್ರಾಂ ಚಿನ್ನದ ದರ ಈಗ 83800ಕ್ಕೇರಿಕೆ: ಸಾರ್ವಕಾಲಿಕ ಗರಿಷ್ಠ

ನವದೆಹಲಿ: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದ್ದು, ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ದರ 50 ರು.ಗೆ ಏರಿಕೆಯಾಗಿ 83,850 ರು.ಗೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ.ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ ನಿನ್ನೆ 83,750 ರು.ಗಳಷ್ಟಿದ್ದ ಚಿನ್ನದ ದರ 50 ರು. ಏರಿಕೆ ಕಂಡಿದೆ. ಇದರ ಜೊತೆಗೆ ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, 1 ಕೇಜಿ ಬೆಳ್ಳಿಯ ದರ ಮತ್ತೆ 1150 ರು. ಏರಿಕೆಯೊಂದಿಗೆ 94,150 ರು.ಗೆ ತಲುಪಿದೆ.

ಫ್ರಾನ್ಸ್‌ನಿಂದ 26 ರಫೇಲ್, ಮೂರು ಸಬ್‌ಮರೀನ್ ಖರೀದಿಗೆ ಶೀಘ್ರ ಡೀಲ್‌

ನವದೆಹಲಿ: ಫ್ರಾನ್ಸ್‌ನಿಂದ 26 ನೌಕಾ ಮಾದರಿಯ ರಫೇಲ್ ಯುದ್ಧ ವಿಮಾನ ಮತ್ತು 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಭಾರತ ಶೀಘ್ರವೇ ಒಪ್ಪಂದಕ್ಕೆ ಸಹಿ ಹಾಕಲಿದೆ ಎನ್ನಲಾಗಿದೆ.

ಫೆ.10-11ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಎಐ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಜುಲೈ 2023ರಲ್ಲಿ, ರಕ್ಷಣಾ ಸಚಿವಾಲಯ ಈ ಖರೀದಿಗೆ ಅನುಮೋದನೆ ನೀಡಿತ್ತು.ಭಾರತೀಯ ವಾಯುಪಡೆ ಈಗಾಗಲೇ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಿದ್ದು, ಕನಿಷ್ಠ ಇನ್ನೆರಡು ರಫೇಲ್ ಜೆಟ್‌ಗಳ ಖರೀದಿಗೆ ಚಿಂತನೆ ನಡೆಸಿದೆ.