ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭಾರತೀಯ ಶುಕ್ಲಾ

| N/A | Published : Jan 31 2025, 12:47 AM IST / Updated: Jan 31 2025, 04:57 AM IST

ಸಾರಾಂಶ

ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ನಡೆಯಲಿರುವ ಆ್ಯಕ್ಸಿಯಾಂ- 4 ಮಿಷನ್‌ನಲ್ಲಿ ಇಸ್ರೋದ ಗಗನಯಾತ್ರಿ, ಭಾರತೀಯ ವಾಯುಪಡೆಯ ಪೈಲಟ್‌ ಶುಭಾನ್ಷು ಶುಕ್ಲಾ ಅವರನ್ನು ಕರೆದೊಯ್ಯುವ ಕುರಿತು ಗುರುವಾರ ಅಧಿಕೃತ ಘೋಷಣೆ ಹೊರಬಿದ್ದಿದೆ

ವಾಷಿಂಗ್ಟನ್‌: ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ನಡೆಯಲಿರುವ ಆ್ಯಕ್ಸಿಯಾಂ- 4 ಮಿಷನ್‌ನಲ್ಲಿ ಇಸ್ರೋದ ಗಗನಯಾತ್ರಿ, ಭಾರತೀಯ ವಾಯುಪಡೆಯ ಪೈಲಟ್‌ ಶುಭಾನ್ಷು ಶುಕ್ಲಾ ಅವರನ್ನು ಕರೆದೊಯ್ಯುವ ಕುರಿತು ಗುರುವಾರ ಅಧಿಕೃತ ಘೋಷಣೆ ಹೊರಬಿದ್ದಿದೆ. ಶುಕ್ಲಾ ಸೇರಿದಂತೆ ನಾಲ್ವರು ಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸ್ವಾಗತಿಸುವ ಕುರಿತು ನಾಸಾ ಮತ್ತು ಬಾಹ್ಯಾಕಾಶ ಕೇಂದ್ರದ ಪಾಲುದಾರರ ದೇಶಗಳು ಸಮ್ಮತಿ ವ್ಯಕ್ತಪಡಿಸಿ ಪ್ರಕಟಣೆ ನೀಡಿವೆ.

ಇದರೊಂದಿಗೆ ಇದೇ ಮೊದಲ ಬಾರಿಗೆ ಭಾರತದ ಗಗನಯಾತ್ರಿಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಲಭ್ಯವಾದಂತೆ ಆಗಲಿದೆ.

ಭಾರತೀಯ ಗಗನಯಾತ್ರಿಯೊಬ್ಬರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುವ ಬಗ್ಗೆ ಇಸ್ರೋ ಮತ್ತು ನಾಸಾ ಒಪ್ಪಂದ ಮಾಡಿಕೊಂಡಿದ್ದವು. ಈ ಬಗ್ಗೆ ಕಳೆದ ವರ್ಷ ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಘೋಷಣೆ ಮಾಡಲಾಗಿತ್ತು. ಈ ಯೋಜನೆಗೆ ಇಸ್ರೋದ ಬಾಹ್ಯಾಕಾಶ ಯಾನಿಗಳಾದ, ಭಾರತೀಯ ವಾಯುಪಡೆಗೆ ಸೇರಿದ ಶುಭಾನ್ಷಾ ಶುಕ್ಲಾ ಮತ್ತು ಪ್ರಶಾಂತ್‌ ನಾಯರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಅದರ ಭಾಗವಾಗಿ ಇದೀಗ ಶುಭಾನ್ಷು ಶುಕ್ಲಾ ಅವರನ್ನು ಸೇರಿದಂತೆ ನಾಲ್ವರನ್ನು ಹೊತ್ತ ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ರಾಕೆಟ್‌ ಮುಂದಿನ ಮಾರ್ಚ್‌- ಮೇ ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಕೇಂದ್ರಕ್ಕೆ ತೆರಳಲಿದೆ. ನಾಲ್ವರೂ ಯಾನಿಗಳು ಒಟ್ಟು 18 ದಿನಗಳ ಕಾಲ ಅಲ್ಲೇ ಇದ್ದು ವಿವಿಧ ರೀತಿಯ ಸಂಶೋಧನೆ ನಡೆಸಲಿದ್ದಾರೆ.

ಈ ಉಡ್ಡಯನಕ್ಕೆ ಅಗತ್ಯವಾದ ತರಬೇತಿಯನ್ನು ಶುಕ್ಲಾ ಈಗಾಗಲೇ ಅಮೆರಿಕದಲ್ಲಿ ಪಡೆದುಕೊಂಡಿದ್ದಾರೆ. ಆ್ಯಕ್ಸಿಯಾಮ್‌ ಎನ್ನುವುದು ಖಾಸಗಿ ಕಂಪನಿಯಾಗಿದ್ದು ಅದು ಸ್ಪೇಸ್‌ಎಕ್ಸ್‌ ನೌಕೆಯ ಮೂಲಕ ನಾಲ್ವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುತ್ತಿದೆ.

ಬಾಹ್ಯಾಕಾಶಕ್ಕೆ ತೆರಳಿದ್ದ ರಾಕೇಶ್‌ ಶರ್ಮಾ

1984ರಲ್ಲಿ ಭಾರತೀಯ ವಾಯುಪಡೆಯ ಪೈಲಟ್‌ ಆಗಿದ್ದ ರಾಕೇಶ್‌ ಶರ್ಮಾ, ರಷ್ಯಾದ ಸೂಯೆಜ್‌ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು.