ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತೀರ್ಪು ಹೊರಬರುತ್ತಿದ್ದಂತೆ ಮಾಧ್ಯಮದ ಎದುರು, ‘ನಾನು ಭ್ರಷ್ಟ ಅಲ್ಲ’ ಎಂದು ಹೇಳಿ ಕಣ್ಣೀರು ಹಾಕಿದರು.

ನಾನು ಭ್ರಷ್ಟ ಅಲ್ಲ ಎನ್ನುತ್ತಾಗಳಗಳನೆ ಅತ್ತ ಕೇಜ್ರಿವಾಲ್‌!- ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆ । ಆರ್ಥಿಕ ಅನಕ್ಷರಸ್ಥ ಎಂದು ಸಿಬಿಐಗೆ ಕೋರ್ಟ್‌ ಛೀಮಾರಿ- 6 ತಿಂಗಳು ಜೈಲಿಗೆ ಹೋಗಿದ್ದ ಕೇಸಲ್ಲಿ ಕೇಜ್ರಿ, ಸಿಸೋಡಿಯಾ ನಿರಾಳ । ಆಪ್‌ಗೆ ಹೊಸ ಉತ್ಸಾಹ

ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತೀರ್ಪು ಹೊರಬರುತ್ತಿದ್ದಂತೆ ಮಾಧ್ಯಮದ ಎದುರು, ‘ನಾನು ಭ್ರಷ್ಟ ಅಲ್ಲ’ ಎಂದು ಹೇಳಿ ಕಣ್ಣೀರು ಹಾಕಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಸಂಪೂರ್ಣವಾಗಿ ನಕಲಿ ಪ್ರಕರಣ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾತ್ರವಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅತಿದೊಡ್ಡ ರಾಜಕೀಯ ಷಡ್ಯಂತ್ರ. ನಾನು, ಸಿಸೋಡಿಯಾ ಮತ್ತು ಎಎಪಿ ‘ಕಟ್ಟರ್‌ ಇಮಾನ್‌ದಾರ್‌’ ಎಂದು ಕೋರ್ಟ್‌ ಸಾಬೀತುಪಡಿಸಿದೆ’ ಎಂದು ಗದ್ಗದಿತರಾದರು.

---

ಸಿಬಿಐಗೆ ಕೋರ್ಟ್‌ಹಿಗ್ಗಾಮುಗ್ಗಾ ಚಾಟಿ- ದೆಹಲಿ ಅಬಕಾರಿ ಪ್ರಕರಣವನ್ನು ಸಿಬಿಐ ನ್ಯಾಯಾಂಗ ಪರಿಶೀಲನೆಗೇ ಒಳಪಡಿಸಿಲ್ಲ- ಊಹೆಯ ಮೇಲೆ ಪಿತೂರಿಯನ್ನು ನಿರ್ಮಿಸಲು ತನಿಖಾ ಸಂಸ್ಥೆ ಪ್ರಯತ್ನ ನಡೆಸಿದೆ- ಮಾಫಿ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪ್ರಕರಣಕ್ಕೆ ಬಲ ನೀಡುವ ಯತ್ನ ನಡೆದಿದೆ- ಪ್ರಕರಣದಿಂದ ಆದ ಲಾಭ- ನಷ್ಟ ಲೆಕ್ಕ ಹಾಕುವಾಗ ಆರ್ಥಿಕ ಅನಕ್ಷರ ರೀತಿ ವರ್ತಿಸಿದೆ- ಕೇಜ್ರಿವಾಲ್‌ ವಿರುದ್ಧ ಯಾವುದೇ ಬಲವಾದ ಪುರಾವೆಗಳಿಲ್ಲ. ಸಾಕ್ಷ್ಯವೇ ಇಲ್ಲದ ಕೇಸ್‌- ಹೀಗಾಗಿ ಆರೋಪಪಟ್ಟಿಯನ್ನು ಪರಿಗಣಿಸುವುದಿಲ್ಲ: ಸಿಬಿಐ ವಿಶೇಷ ನ್ಯಾಯಾಧೀಶ

--

ಪಿಟಿಐ ನವದೆಹಲಿ

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ತೆಲಂಗಾಣ ಜಾಗೃತಿ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ. ಕವಿತಾ ಸೇರಿದಂತೆ 23 ಜನರನ್ನು ದೆಹಲಿ ವಿಚಾರಣಾ ನ್ಯಾಯಾಲಯ ಶುಕ್ರವಾರ ಖುಲಾಸೆ (ಡಿಸ್‌ಚಾರ್ಜ್) ಮಾಡಿದೆ. ಇದೇ ವೇಳೆ, ನಿರ್ದಿಷ್ಟ ಸಾಕ್ಷ್ಯವಿಲ್ಲದೆ ಆರೋಪ ಮಾಡಿದ್ದಕ್ಕೆ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಛೀಮಾರಿ ಹಾಕಿದೆ. ಆದರೆ ಇದನ್ನು ಪ್ರಶ್ನಿಸಿ ಕೂಡಲೇ ದಿಲ್ಲಿ ಹೈಕೋರ್ಟ್‌ಗೆ ಸಿಬಿಐ ಮೇಲ್ಮನವಿ ಸಲ್ಲಿಸಿದೆ.

ಇದರೊಂದಿಗೆ, ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿ, ಭ್ರಷ್ಟಾಚಾರ ಕೇಸಲ್ಲೇ 6 ತಿಂಗಳು ಜೈಲಿಗೆ ಹೋಗಿದ್ದ ಕೇಜ್ರಿವಾಲ್‌ ನಿರಾಳರಾಗಿದ್ದಾರೆ. ಇದೇ ಪ್ರಕರಣದಲ್ಲಿ ಕೇಜ್ರಿವಾಲ್‌ ಆಪ್ತ ಸಿಸೋಡಿಯಾ 2 ವರ್ಷ ಜೈಲಿನಲ್ಲಿದ್ದರು ಎಂಬುದು ಗಮನಾರ್ಹ. ಈ ತೀರ್ಪಿನಿಂದ ಆಮ್‌ ಆದ್ಮಿ ಪಕ್ಷಕ್ಕೆ ಹೊಸ ಉತ್ಸಾಹ ಸಿಕ್ಕಂತಾಗಿದೆ.

ಜಡ್ಜ್‌ ತೀವ್ರ ವಾಗ್ದಾಳಿ:

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್‌, ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದರು. ಇದೇ ವೇಳೆ, ಸಿಬಿಐ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಪ್ರಕರಣವನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಿಲ್ಲ. ಸಿಬಿಐ ಕೇವಲ ಊಹೆಯ ಮೇಲೆ ಪಿತೂರಿಯನ್ನು ನಿರ್ಮಿಸಲು ಪ್ರಯತ್ನಿಸಿತು. ಕೇವಲ ಮಾಫಿ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪ್ರಕರಣಕ್ಕೆ ಬಲ ನೀಡಲು ಯತ್ನಿಸಿತು. ಪ್ರಕರಣದಿಂದ ಆದ ಲಾಭ-ನಷ್ಟದ ಲೆಕ್ಕಾಚಾರ ಹಾಕುವಲ್ಲಿ ಆರ್ಥಿಕ ಅನಕ್ಷರಸ್ಥನಂತೆ ಸಿಬಿಐ ವರ್ತಿಸಿತು. ಕೇಜ್ರಿವಾಲ್ ವಿರುದ್ಧ ಯಾವುದೇ ಬಲವಾದ ಪುರಾವೆಗಳಿಲ್ಲ. ಸಿಸೋಡಿಯಾ ಮತ್ತು ಇತರ ಆರೋಪಿಗಳ ವಿರುದ್ಧ ಯಾವುದೇ ಪ್ರಾಥಮಿಕ ಪ್ರಕರಣವಿರಲಿಲ್ಲ. ಅಬಕಾರಿ ನೀತಿಯಲ್ಲಿ ಯಾವುದೇ ಷಡ್ಯಂತ್ರ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಪುರಾವೆ ಇಲ್ಲದೆ ಆರೋಪ:ಪುರಾವೆ ಇಲ್ಲದೆ ಕೇಜ್ರಿವಾಲ್‌ ಹಾಗೂ ಇತರರ ಮೇಲೆ ಆರೋಪ ಮಾಡಲಾಗಿದೆ ಎಂದ ಪೀಠ, ‘ಆರೋಪಪಟ್ಟಿಯು ಆಂತರಿಕ ವಿರೋಧಾಭಾಸಗಳಿಂದ ಕೂಡಿದೆ. ಪಿತೂರಿ ಸಿದ್ಧಾಂತದ ಮೂಲವನ್ನು ಇದು ಭೇದಿಸುತ್ತದೆ. ಯಾವುದೇ ಪುರಾವೆಗಳು ಇಲ್ಲದಿದ್ದಾಗ, ಕೇಜ್ರಿವಾಲ್ ವಿರುದ್ಧದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಸಾಕ್ಷ್ಯಗಳೇ ಇಲ್ಲದೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದು ಕಾನೂನಿನ ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ. ಆರ್ಥಿಕ ನಷ್ಟದ ಲೆಕ್ಕಾಚಾರದಲ್ಲಿ ಸಿಬಿಐ ಎಡವಿದ್ದು ಆರ್ಥಿಕ ಅನಕ್ಷರಸ್ಥರಂತೆ ವರ್ತಿಸಿದೆ’ ಎಂದು ಚಾಟಿ ಬೀಸಿತು.

‘ಇನ್ನು ಪ್ರಕರಣದಲ್ಲಿ ಸಿಸೋಡಿಯಾ ಅವರು ಭಾಗಿಯಾಗಿದ್ದಾರೆಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಅವರ ಕಡೆಯಿಂದ ಯಾವುದೇ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ. ಬರೀ ಮಾಫಿ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಸಿಬಿಐ ತನ್ನ ವಾದವನ್ನು ನಿರ್ಮಿಸಿದೆ’ ಎಂದು ಹರಿಹಾಯ್ದಿತು.

ಕೆ. ಕವಿತಾ ಅವರ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ, ‘ಅವರು ‘ದಕ್ಷಿಣ ಗ್ಯಾಂಗ್’ ಅನ್ನು ಸೃಷ್ಟಿಸಿಕೊಂಡು ಅಬಕಾರಿ ಲೈಸೆನ್ಸ್‌ ಗಿಟ್ಟಿಸಿದರು ಎಂಬುದಕ್ಕೆ ಆಧಾರವಿಲ್ಲ. ಕೇಸಿನಲ್ಲಿ ದಕ್ಷಿಣ ಗ್ಯಾಂಗ್‌ ಶಾಮೀಲಾಗಿದೆ ಎಂಬ ಪದ ಬಳಕೆಯೇ ಸರಿಯಿಲ್ಲ. ದೇಶದ ಒಂದು ಪ್ರದೇಶವನ್ನು ಉಲ್ಲೇಖಿಸಿ ಈ ರೀತಿ ಆರೋಪಿಸುವುದು ತಪ್ಪು. ಚೆನ್ನೈನಲ್ಲಿ ಸಿಬಿಐ ಚಾರ್ಜ್‌ಶೀಟ್‌ ಹಾಕಿದ್ದರೆ ದಕ್ಷಿಣ ಗ್ಯಾಂಗ್‌ ಎಂಬ ಪದ ಬಳಸುತ್ತಿತ್ತೇ?’ ಎಂದು ಕಿಡಿಕಾರಿತು.‘ಸಿಬಿಐನ ಇಂತಹ ನಡೆಗಳನ್ನು ಅನುಮತಿಸಿದರೆ, ಅದು ಸಾಂವಿಧಾನಿಕ ತತ್ವಗಳ ಗಂಭೀರ ಉಲ್ಲಂಘನೆಯಾಗುತ್ತದೆ. ಆರೋಪಿಗೆ ‘ಕ್ಷಮಾದಾನ’ ನೀಡಿ ನಂತರ ಮಾಫಿ ಸಾಕ್ಷಿಯನ್ನಾಗಿ ಮಾಡುವುದು, ತನಿಖೆ/ನಿರೂಪಣೆಯಲ್ಲಿನ ಅಂತರವನ್ನು ತುಂಬಲು ಮತ್ತು ಹೆಚ್ಚು ಜನರನ್ನು ಆರೋಪಿಗಳನ್ನಾಗಿ ಮಾಡಲು ಆತನ ಹೇಳಿಕೆಗಳನ್ನು ಬಳಸುವುದು ಸರಿಯಲ್ಲ’ ಎಂದು ಕಿವಿ ಹಿಂಡಿತು.ಖುಲಾಸೆಯಾದ ಇತರರು: ಕುಲದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯನಪಲ್ಲಿ, ಅರುಣ್ ರಾಮಚಂದ್ರ ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಅಮನದೀಪ್ ಸಿಂಗ್ ಧಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೋರ್ನಾಟ್ಲಾ, ರಾಕೇಶ್ ಜೋಶಿ, ದಾಮೋದರ್ ಪ್ರಸಾದ್ ಶರ್ಮಾ, ಪ್ರಿನ್ಸ್ ಕುಮಾರ್, ಚನ್‌ಪ್ರೀತ್ ಸಿಂಗ್ ರಾಯತ್, ಡಿ. ವಿನೋದ್ ಚೌಹಾಣ್, ಆಶಿಶ್ ಮಾಥುರ್ ಮತ್ತು ಪಿ ಶರತ್‌ಚಂದ್ರ ರೆಡ್ಡಿ ಪ್ರಕರಣದಲ್ಲಿ ಖುಲಾಸೆಯಾದ ಇತರರು.

---